ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ | ಭದ್ರತಾ ಪಡೆಗಳ ಗುಂಡಿಗೆ ಮೂರು ಲಷ್ಕರ್ ಉಗ್ರರ ಸಾವು!
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮುಂಜ್ ಮಾರ್ಗ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ದಾಳಿ ನಡೆದಿದ್ದು, ಈ ವೇಳೆ ಮೂವರು ಲಷ್ಕರ್-ಎ-ತೊಯ್ಬಾ (LeT) ಉಗ್ರರು ಗುಂಡಿಗೆ ಬಲಿಯಾಗಿದ್ದಾರೆ ಎಂದು ಪೊಲೀಸರಿಂದ ಮಾಹಿತಿ ತಿಳಿದುಬಂದಿದೆ.
ವರದಿ ಪ್ರಕಾರ, ಶೋಪಿಯಾನ್ ಝೈನಾಪೋರಾ ಪ್ರದೇಶದ ಮುಂಜ್ ಮಾರ್ಗ್ ನಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಪಡೆದು ಭದ್ರತಾ ಪಡೆಗಳು ಶೋಧಕಾರ್ಯಕ್ಕೆ ತೆರಳಿದ್ದರು. ಈ ವೇಳೆ ಭದ್ರತಾ ಪಡೆಗಳು ಭಯೋತ್ಪಾದಕರನ್ನು ಪತ್ತೆಹಚ್ಚಿದ್ದು, ನಂತರ ಪರಸ್ಪರ ಗುಂಡಿನ ದಾಳಿ ನಡೆದಿದೆ. ಗುಂಡಿಗೆ ಮೂವರು ಉಗ್ರರು ಹತರಾಗಿದ್ದಾರೆ.
ಹತರಾದ ಮೂವರು ಉಗ್ರರಲ್ಲಿ ಇದೀಗ ಇಬ್ಬರ ಗುರುತನ್ನು ಪತ್ತೆಹಚ್ಚಲಾಗಿದ್ದು, ಇಬ್ಬರು ಉಗ್ರರು ಕೂಡ ಈ ಮೊದಲಿನ ಹತ್ಯೆಗಳಲ್ಲಿ ಭಾಗಿಯಾಗಿದ್ದರು. ಅದರಲ್ಲಿ ಒಬ್ಬ ಉಗ್ರ, ಕಾಶ್ಮೀರ ಪಂಡಿತ್ ಪುರಾಣ ಕೃಷ್ಣ ಭಟ್ ಹತ್ಯೆಯಲ್ಲಿ ಭಾಗಿಯಾಗಿದ್ದಾತ ಎನ್ನಲಾಗಿದ್ದು, ಆತನ ಹೆಸರು ಲತೀಫ್ ಲೋನ್ ಎಂದು ಗುರುತಿಸಲಾಗಿದೆ. ಹಾಗೇ ಮತ್ತೊಬ್ಬ ಭಯೋತ್ಪಾದಕ, ನೇಪಾಳದ ಟಿಲ್ ಬಹದ್ದೂರ್ ಥಾಪಾ ಹತ್ಯೆಯಲ್ಲಿ ಭಾಗಿಯಾಗಿದ್ದ ಉಮರ್ ನಜೀರ್ ಎಂದು ಹೇಳಲಾಗಿದೆ. ಇನ್ನೊಬ್ಬ ಉಗ್ರನ ಗುರುತನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ ಎನ್ನಲಾಗಿದೆ.
ಇನ್ನೂ, ನಿಷೇಧಿತ ಭಯೋತ್ಪಾದನಾ ಸಂಘಟನೆ ಎಲ್‌ಇಟಿಯ ಮೂರು ಭಯೋತ್ಪಾದಕರನ್ನು ಎನ್‌ಕೌಂಟರ್ ಮಾಡಲಾಗಿದೆ. ಅವರ ಗುರುತನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ. ಹಾಗೇ ಉಗ್ರರಿಂದ 1 ಎಕೆ 47 ರೈಫಲ್ ಹಾಗೂ 2 ಪಿಸ್ತೂಲ್ ಅನ್ನು ವಶಪಡಿಸಿಕೊಂಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.