Overnight Millionaire : ಆಶ್ಚರ್ಯ : ಅದೃಷ್ಟ ಅಂದ್ರೆ ಇದು | ರಾತ್ರೋ ರಾತ್ರಿ, ಭಿಕ್ಷೆ ಬೇಡುತ್ತಿದ್ದ ಪುಟ್ಟ ಹುಡುಗ ಒಂದೇ ದಿನದಲ್ಲಿ ಕೋಟ್ಯಾಧಿಪತಿ

ಕೆಲವೊಮ್ಮೆ ಅದೃಷ್ಟ ಕುಲಾಯಿಸಿದರೆ ರಾತ್ರೋ ರಾತ್ರಿ ಕೋಟ್ಯಾಧಿಪತಿ ಕೂಡ ಆಗಬಹುದು. ಹಾಗೆಯೇ, ನಸೀಬು ಕೆಟ್ಟರೆ ಬರಿ ಹಗಲು ಕನಸು ಕಾಣುತ್ತಾ ಕೂರಬೇಕಾಗುತ್ತದೆ. ಕೆಲವೊಮ್ಮೆ ಏನೋ ಮಾಡಲು ಹೋಗಿ ಮತ್ತೇನೋ ಆಗುವ ಪ್ರಮೇಯ ಕೂಡ ಇದೆ. ಇರುಳು ಕಂಡ ಬಾವಿಗೆ ಹಗಲು ಬೀಳುವವರು ಕೂಡ ಇದ್ದಾರೆ ಎಂದರೆ ತಪ್ಪಾಗದು. ಆದರೆ, ಇಲ್ಲೊಂದು ವಿಸ್ಮಯಕಾರಿ ಘಟನೆ ಬೆಳಕಿಗೆ ಬಂದಿದೆ.

ಕೋವಿಡ್ ಎಂಬ ಮಹಾಮಾರಿಯ ಅಬ್ಬರಕ್ಕೆ ಎಷ್ಟೋ ಜನ ಜೀವ ಕಳೆದುಕೊಂಡು ಅನಾಥರಾದ ದುರಂತಮಯ ದೃಶ್ಯವನ್ನು ಯಾರೂ ಕೂಡ ಮರೆಯುವುದು ಬಿಡಿ!! ಅದನ್ನು ನೆನೆಸಿದರೆ ಈಗಲೂ ಭಯದ ವಾತಾವರಣ ಸೃಷ್ಟಿಯಾಗುತ್ತದೆ. ಈ ಭೀಕರ ಸಂದರ್ಭದಲ್ಲಿ ಕೋವಿಡ್ 19 ಸಾಂಕ್ರಾಮಿಕ ರೋಗದ ಪ್ರಭಾವಕ್ಕೆ ತಾಯಿಯನ್ನು ಕಳೆದುಕೊಂಡಿದ್ದ 10 ವರ್ಷದ ಪುಟ್ಟ ಪೋರನೋರ್ವ ತನ್ನ ಒಂದು ಹೊತ್ತಿನ ಕೂಳಿಗಾಗಿ ಭಿಕ್ಷಾಟಣೆಯನ್ನೂ ನೆಚ್ಚಿಕೊಂಡಿದ್ದ. ಅಷ್ಟೇ ಅಲ್ಲ,ಭಿಕ್ಷೆ ಬೇಡುತ್ತಿದ್ದ ಪುಟ್ಟ ಬಾಲಕ ಕೇವಲ ಒಂದೇ ಒಂದು ದಿನದಲ್ಲಿ ಕೋಟ್ಯಾಧಿಪತಿ ಆದ ಅಚ್ಚರಿಯ ಸಂಗತಿ ಮುನ್ನಲೆಗೆ ಬಂದಿದೆ.

ಈ ವಿಸ್ಮಯ ಜರುಗಿದ್ದು, ಉತ್ತರಾಖಂಡದಲ್ಲಿ ಎನ್ನಲಾಗಿದ್ದು, ಕೋವಿಡ್ 19(Covid-19) ಸಾಂಕ್ರಾಮಿಕ ರೋಗದಿಂದ ತಾಯಿಯನ್ನು ಕಳೆದುಕೊಂಡಿದ್ದ 10 ವರ್ಷದ ಷಹಜೇಬ್‌ ಎಂಬ ಪುಟ್ಟ ಪೋರನೊಬ್ಬ ತನ್ನ ಒಂದು ಹೊತ್ತಿನ ಕೂಳಿನ ನಿಮಿತ್ತ ಭಿಕ್ಷಾಟಣೆಯಲ್ಲಿ ತೊಡಗಿಸಿಕೊಂಡಿದ್ದ. ಆದರೆ ಒಂದೇ ರಾತ್ರಿಯಲ್ಲಿ ಕೋಟಿ ಮೌಲ್ಯದ ಆಸ್ತಿಗೆ ರಾಯಭಾರಿಯಾದ ಘಟನೆ ನಡೆದಿದೆ.

ತಾಯಿ ಇಮ್ರಾನಾ ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯ ಪಾಂಡೋಲಿ ಗ್ರಾಮದಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದ್ದು, 2009ರಲ್ಲಿ ತನ್ನ ಗಂಡನ ಮರಣದ ಬಳಿಕ, ತನ್ನ ಅತ್ತೆ ಮನೆಯಲ್ಲಿ ಮನಸ್ತಾಪ ಉಂಟಾಗಿ ಸಂಬಂಧದಲ್ಲಿ ಬಿರುಕು ಮೂಡಿದ್ದು, ಈ ಬಳಿಕ ತನ್ನ ಮಗ ಷಹಜೇಬ್‌ನೊಂದಿಗೆ ತನ್ನ ತವರುಮನೆ ಸೇರಿದ್ದು, ತನ್ನ ಮಗನೊಂದಿಗೆ ಕಾಲಿಯಾರ್ ನಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.

2019 ರ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ತನ್ನ ಹೆತ್ತಮ್ಮ ಅಸುನೀಗಿದ ಹಿನ್ನೆಲೆ, ಈ ಪುಟ್ಟ ಕಂದಮ್ಮ ಅನಾಥನಾಗಿದ್ದಾನೆ. ಹೀಗಾಗಿ, ಹೊಟ್ಟೆ ಹಸಿವಿಗೆ ಕಲಿಯಾರ್ ಬೀದಿಯಲ್ಲಿ ಭಿಕ್ಷಾಟಣೆಯಲ್ಲಿ ತೊಡಗಿಸಿಕೊಂಡಿದ್ದು, ಆದರೆ ಈ ಮಗುವಿನ ಜೀವನದ ಪಥವೇ ಬದಲಾದ ಘಟನೆ ನಡೆದಿದೆ. ಒಂದು ಹೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದ ಈತನ ಬಾಳಲ್ಲಿ ಈತನ ತಾತ ಜೀವನ ಬೆಳಗುವ ದಾರಿದೀಪವಾಗಿದ್ದಾರೆ.

ಹೌದು!!!.. ಅವನ ಅಜ್ಜ ಸಾಯುವ ಮೊದಲು ತನ್ನ ಅರ್ಧದಷ್ಟು ಆಸ್ತಿಯನ್ನು ಈತನ ಹೆಸರಿಗೆ ಬರೆದಿಟ್ಟಿದ್ದರು.ಈ ವಿಷಯ ಮನೆಯವರಿಗೆ ಗೊತ್ತಾಗುತ್ತಿದ್ದಂತೆ ಆತನ ಸಂಬಂಧಿಗಳು ಆತನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಜೊತೆಗೆ ಹುಡುಕಿಕೊಟ್ಟವರಿಗೆ ಬಹುಮಾನವನ್ನು ಕೂಡ ಘೋಷಣೆ ಮಾಡಿದ್ದಾರೆ.

ಕಲಿಯಾರ್ ಬೀದಿಯಲ್ಲಿ ತಿರುಗಾಡುತ್ತಿರುವುದನ್ನು ಮೋಬಿನ್ ಎಂಬ ವ್ಯಕ್ತಿಯು ಗಮನಿಸಿದ್ದು ಅವರ ಸಂಬಂಧಿಕರಿಗೆ ಮಾಹಿತಿ ನೀಡಿ, ಗುರುವಾರ ಸಹರಾನ್‌ಪುರದ ಸಂಬಂಧಿಕರಿದ್ದಲ್ಲಿ ಬಿಟ್ಟು ಬಂದಿದ್ದಾರೆ. ಸದ್ಯ ಈ ವಿಚಾರ ವೈರಲ್ ಆಗಿ ಸಂಚಲನ ಮೂಡಿಸಿದೆ.

Leave A Reply

Your email address will not be published.