BIGG NEWS : ಬಗರ್ ಹುಕುಂ ಭೂಮಿ ಸಕ್ರಮ – ಮಹತ್ವದ ಆದೇಶ

ಬೆಂಗಳೂರು ನಗರಗಳು ಹಾಗೂ ನಗರ ಪುರಸಭೆ ಪರಿಮಿತಿಯೊಳಗೆ ಬಗರ್‌ ಹುಕುಂ ಭೂಮಿ ಮಂಜೂರು ಮಾಡುವ ಕುರಿತು ಕರ್ನಾಟಕದ ಕಂದಾಯ ಇಲಾಖೆ ಮಹತ್ವದ ಆದೇಶವನ್ನು ಹೊರಡಿಸಿದೆ.

ಕಂದಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎನ್. ಜಯರಾಮ್ ಈ ಕುರಿತು ಆದೇಶ ಹೊರಡಿಸಿದ್ದು, ನಿರ್ದಿಷ್ಟಪಡಿಸಿರುವ ಪರಿಮಿತಿಗಳಿಂದ ಅಂತರದೊಳಗೆ ಬರುವ ಭೂಮಿಯನ್ನು ಮಂಜೂರು ಮಾಡತಕ್ಕದ್ದಲ್ಲ ಎಂದು ಸೂಚನೆ ನೀಡಲಾಗಿದೆ.

ಬಿಬಿಎಂಪಿ/ ನಗರ/ ನಗರ ಪೌರಸಭೆ/ ಪಟ್ಟಣ ಪಂಚಾಯತಿಗಳ ಪರಿಮಿತಿಯಲ್ಲಿ ಬರುವ ಜಮೀನುಗಳನ್ನು ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯು ಅಕ್ರಮವಾಗಿ ಮಂಜೂರು ಮಾಡಿದಲ್ಲಿ ಆ ರೀತಿಯ ಜಮೀನುಗಳನ್ನು ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 108(ಕೆ) ರನ್ವಯ ರದ್ದುಗೊಳಿಸಿ ಒಂದು ತಿಂಗಳೊಳಗಾಗಿ ವರದಿ ಸಲ್ಲಿಸಬೇಕೆಂದು ಸೂಚನೆ ನೀಡಲಾಗಿದೆ.

ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94(ಎ)ರನ್ವಯ ವಿಧಾನಸಭಾ ಕ್ಷೇತ್ರವಾರು ಬಗ‌ರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗಳನ್ನು ರಚಿಸಿ ಅವುಗಳ ಮುಖಾಂತರ ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಕಲಂ 94ಎ, 94ಬಿ ಹಾಗೂ 94ಎ(4)ರಡಿ ಮಂಜೂರು ಮಾಡಲು ಅವಕಾಶವಿರಲಿದೆ.


ಅದೆ ರೀತಿ, ರಚಿತವಾದ ಸಮಿತಿಗಳು ಕಲಂ 94ಎ(4)ರನ್ವಯ ನಗರಗಳು ಮತ್ತು ನಗರ ಪುರಸಭೆಗಳ ಪರಿಮಿತಿಯೊಳಗೆ ಬರುವ ಪ್ರದೇಶಗಳಲ್ಲಿ ನಿರ್ದಿಷ್ಟಪಡಿಸಿ ನಿಗದಿಪಡಿಸಿದ ಪರಿಮಿತಿಗಳಿಂದ ಅಂತರದೊಳಗೆ ಬರುವ ಭೂಮಿಯನ್ನು ಮಂಜೂರು ಮಾಡತಕ್ಕದ್ದಲ್ಲ ಆದೇಶದಲ್ಲಿ ಮಾಹಿತಿ ನೀಡಲಾಗಿದೆ.

  • ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮದ ಅನುಸಾರ 1976ರ ಉಪಬಂಧಗಳ ಅಡಿಯಲ್ಲಿ ಅನುಕ್ರಮವಾಗಿ ಬರುವ ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ- ಧಾರವಾಡ, ಮಂಗಳೂರು ಮತ್ತು ಮೈಸೂರು ನಗರಗಳು ಮತ್ತು ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ, 1976ರ ಉಪಬಂಧಗಳ ಅಡಿಯಲ್ಲಿ ಬರುವ ಇತರ ನಗರ ಪಾಲಿಕೆಗಳು 10 ಕಿ. ಮೀ.
  • ಕರ್ನಾಟಕ ಪೌರಸಭೆಗಳ ಅಧಿನಿಯಮದ ಅನುಸಾರ 1964ರ ಉಪಬಂಧಗಳ ಅಡಿಯಲ್ಲಿನ ಎಲ್ಲಾ ಪೌರಸಭೆಗಳು (TMC) ಮತ್ತು ಪಟ್ಟಣ ಪಂಚಾಯತ್‌ಗಳು 3 ಕಿ. ಮೀ.
  • ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮದ ಅನುಸಾರ 1976ರ ಅಡಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅಂತರ 18 ಕಿ. ಮೀ.
  • ಕರ್ನಾಟಕ ಪೌರಸಭೆಗಳ ಅಧಿನಿಯಮದ ಅನುಸಾರ, 1964ರ ಉಪಬಂಧಗಳ ಅಡಿಯಲ್ಲಿ ಬರುವ ಎಲ್ಲಾ ನಗರ ಪೌರಸಭೆಗಳು (CMC) 5 ಕಿ. ಮೀ.

ಈ ಕುರಿತಾಗಿ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶವನ್ನು ರವಾನಿಸಲಾಗಿದ್ದು, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಾಗೂ ಅದರ ಸರಹದ್ದಿನಲ್ಲಿ ನಿರ್ಬಂಧಿಸಿರುವ ಅಂತರದ ಒಳಗೆ ಇರುವ ಜಮೀನುಗಳನ್ನು ಸಕ್ರಮಗೊಳಿಸುವುದು ಬಾಹಿರವೆಂದು ಸರ್ಕಾರದ ಸುತ್ತೋಲೆಯಲ್ಲಿ ಮಾಹಿತಿ ನೀಡಲಾಗಿದೆ.

Leave A Reply

Your email address will not be published.