ಮಗನನ್ನು ನಿರಪರಾಧಿ ಎಂದು ಪ್ರೂವ್ ಮಾಡಲು ಅಮ್ಮನ ಸುದೀರ್ಘ ಪತ್ತೇದಾರಿಕೆ | ಸತ್ತು ಹೋದ 7 ವರ್ಷಗಳ ನಂತರ ಕೊಲೆಯಾದ ಹುಡುಗಿಯನ್ನು ಬದುಕಿಸಿ ತಂದ ಮಹಾತಾಯಿ

ಇಂತಹಾ ಹೆಂಗಸರಿಗೇ ‘ ಅಮ್ಮ’ ಅನ್ನುವುದು. ಇದು ಜೈಲು ಸೇರಿ ಕಳೆದ ಏಳು ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಿರುವ ತನ್ನ ಮಗನನ್ನು ನಿರಪರಾಧಿಯಾಗಿ ಪ್ರೂವ್ ಮಾಡಿ ಹೊರಕ್ಕೆ ತಂದ ಮಹಿಳೆಯೊಬ್ಬಳ ಕಥೆ. 9 ತಿಂಗಳು ಹೊತ್ತು ಈ ಲೋಕಕ್ಕೆ ಕರಕೊಂಡು ಬರುವುದು ಮಾತ್ರವಲ್ಲ, ಅಮ್ಮನಿಗೆ ಮಕ್ಕಳನ್ನು ಜೈಲಿಂದ ಬಿಡಿಸಿಕೊಂಡು ಬರುವುದು ಗೊತ್ತು ಎನ್ನುವುದನ್ನು ಈ ವಿಧವೆ ಮಹಾತಾಯಿ ಜಾಹೀರು ಮಾಡಿದ್ದಾಳೆ.

ಆ ಹುಡುಗ ಕಳೆದ ಏಳು ವರ್ಷಗಳಿಂದ ಜೇಲಿನಲ್ಲಿದ್ದಾನೆ. 7 ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯೊಬ್ಬಳನ್ನು ಅಪಹರಿಸಿ ಕೊಲೆ ಮಾಡಿದ ಆಪಾದನೆಯ ಮೇಲೆ ಆತನಿಗೆ ಶಿಕ್ಷೆ ವಿಧಿಸಲಾಗಿತ್ತು. ತನಿಖೆಯಲ್ಲಿ ಮತ್ತು ಆನಂತರದ ಪ್ರಕ್ರಿಯೆಯಲ್ಲಿ ಏಳು ವರ್ಷಗಳು ಸಂದು ಹೋಗಿದ್ದವು.

2015 ರಲ್ಲಿ, 15 ವರ್ಷದ ಬಾಲಕಿ ನಾಪತ್ತೆಯಾದ ನಂತರ, ಆಕೆಯ ತಂದೆ ಗೊಂಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಮತ್ತು ಹುಡುಗಿಯನ್ನು ಅಪಹರಿಸಿ ಮದುವೆಗೆ ಆಮಿಷವೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 363 ಮತ್ತು 366 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಸ್ವಲ್ಪ ಸಮಯದ ನಂತರ, ಹುಡುಗಿಯ ತಂದೆಗೆ ಆಗ್ರಾದಲ್ಲಿ ಒಂದು ಹುಡುಗಿ ಕೊಲೆಯಾಗಿ ಬಿದ್ದಿರುವ ಸುದ್ದಿ ತಲುಪಿತ್ತು. ಅಲ್ಲಿ ಹೋಗಿ ನೋಡಿದರೆ ಅಪಹರಣಗೊಂಡು ಕಾಣೆಯಾಗಿದ್ದ ಮಹಿಳೆ ಹುಡುಗಿ ಸತ್ತು ಹೋಗಿದ್ದಳು. ಆಕೆಯ ತಂದೆ ಇವಳೇ ತನ್ನ ಮಗಳು ಎಂದು ಗುರುತಿಸಿದ್ದರು. ನಂತರ ಮೂಲ ಎಫ್‌ಐಆರ್‌ಗೆ ಕೊಲೆಯ ಆರೋಪವನ್ನು ಸೇರಿಸಿ, ಅಪಹರಣ ಮತ್ತು ಕೊಲೆಯ ಆಪಾದನೆ ಹೊರೆಸಿ ವಿಷ್ಣುವನ್ನು ಜೈಲಿಗೆ ಕಳುಹಿಸಲಾಯಿತು.

ವಿಷ್ಣು ಹಾಗೆ ಜೈಲು ಸೇರಿದಾಗ ಆತನ ವಿಧವೆ ತಾಯಿ ಏನು ಕೂಡಾ ಮಾಡದ ಸ್ಥಿತಿಯಲ್ಲಿದ್ದಳು. ಆಕೆ ಬೇಡಿಕೊಳ್ಳದ ದೇವರಿಲ್ಲ. ಕಂಡ ಕಂಡವರಲ್ಲಿ ಸಹಾಯಕ್ಕಾಗಿ ಯಾಚಿಸಿದರೂ ಯಾರು ಏನು ಮಾಡುವಂತಿರಲಿಲ್ಲ. ಸಹಜವಾಗಿ ಎಲ್ಲ ತಾಯಂದಿರಂತೆ ಆಕೆ ಕೂಡ ತನ್ನ ಮಗ ನಿರಪರಾಧಿ ನಿರಪರಾಧಿ, ಅಪಹರಣ ಮಾಡಿ ಕೊಲೆ ಮಾಡುವಂತವನಲ್ಲ ನನ್ನ ವಿಷ್ಣು ಅಂತ ಬಲವಾಗಿ ನಂಬಿದ್ದಳು ಆ ಅಮ್ಮ.

ಆಗ ಆತನ ತಾಯಿ ಖುದ್ದು ಪತ್ತೇದಾರಿಕೆಗೆ ಇಳಿದಿದ್ದಾರೆ. ಆ ಹುಡುಗಿ ಸತ್ತಿಲ್ಲ, ಇನ್ನೂ ಬದುಕಿದ್ದಾರೆ, ತನ್ನ ಮಗ ನಿರಪರಾಧಿ ಅಂತ ನಂಬಿದ ತಾಯಿ ಆ ಸತ್ತು ಹೋದ ಹುಡುಗಿಯ ಫೋಟೋ ಕೈಯಲ್ಲಿ ಹಿಡಿದುಕೊಂಡು ಊರೂರು ಅಲೆದಿದ್ದಾಳೆ. ಅಷ್ಟರಲ್ಲಿ 7 ವರ್ಷಗಳೇ ಕಳೆದು ಹೋಗಿದೆ. ಆದರೂ ಅಮ್ಮ ಸೋಲು ಒಪ್ಪಿಕೊಳ್ಳಲು ಸಿದ್ದಳಿರಲಿಲ್ಲ. ಆ ವಿಧವೆ ಹೆಂಗಸನ್ನು ಜನರು ಹುಚ್ಚಿ ಎಂದು ತೀರ್ಮಾನಿಸಿ ಆಗಿತ್ತು. ರಸ್ತೆಯಲ್ಲಿ ಯಾರೇ ಹುಡುಗಿಯನ್ನು ಕಂಡರೂ ಆಕೆಯ ಕಣ್ಣುಗಳು ಆ ಸತ್ತು ಹೋದ ಹುಡುಗಿ ಇವಲಿರಬಹುದಾ ಎಂಬುದಾಗಿ ಪರಿಶೀಲಿಸಿ ನೋಡುವುದು ಆಕೆಯ ದೈನಂದಿನ ಕಾರ್ಯಕ್ರಮವಾಗಿತ್ತು.

ಅದೊಂದು ದಿನ ಆ ಮಹಿಳೆ ಯಾವುದೋ ಧರ್ಮಗುರು ಗಳೊಬ್ಬರ ಆಶ್ರಮದ ಬಳಿ ಬಸವಳಿದು ಬಂದಿದ್ದಳು. ಅಷ್ಟರಲ್ಲಿ ಆಕೆಯ ಕಣ್ಣಿಗೆ ಹುಡುಗಿಯೊಬ್ಬಳು ಬಿದ್ದಿದ್ದಳು. ಆಕೆಯ ಎಕ್ಸ ರೇ ಕಣ್ಣುಗಳು ಆಕೆಯನ್ನು ಕೂಡಾ ಸ್ಕ್ಯಾನ್ ಮಾಡಿತ್ತು. ಆಗ ಆಕೆಗೆ ಎಲ್ಲೋ ನೋಡಿದ ನೆನಪುಗಳು ಮರುಕಳಿಸಿದ್ದು, ಪರಿಶೀಲಿಸಿ ಪೊಲೀಸರಿಗೆ ದೂರು ನೀಡಿದಳು. ಆಗ ದೊಡ್ಡ ಸತ್ಯ ಹೊರಬಂದಿದ್ದು, ಅಂದು ಸತ್ತಳು ಎಂದು ಅಂದುಕೊಂಡಿದ್ದ ಹುಡುಗಿ ಅವಳೇ ಆಗಿದ್ದಳು. ಈಗ ಆಕೆಗೆ ಮದುವೆಯಾಗಿ, ಇಬ್ಬರು ಮಕ್ಕಳೂ ಕೂಡ ಇದ್ದು ತನ್ನ ಗಂಡನ ಜತೆಗೆ ಸುಖವಾಗಿ ಸಂಸಾರ ಮಾಡುತ್ತಿದ್ದಳು. ತನಿಖೆಯ ವೇಳೆ ಹುಡುಗಿ ಸತ್ಯ ಒಪ್ಪಿಕೊಂಡಿದ್ದಾಳೆ.

ಕಳೆದ ಸೋಮವಾರ ಮಹಿಳೆಯನ್ನು ಉತ್ತರಪ್ರದೇಶದ ಅಲಿಗಢದ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಮತ್ತು ಮಂಗಳವಾರ ಮ್ಯಾಜಿಸ್ಟ್ರೇಟ್ ಮುಂದೆ ಸೆಕ್ಷನ್ 164 ರ ಅಡಿಯಲ್ಲಿ ಆಕೆಯ ಹೇಳಿಕೆಯನ್ನು ದಾಖಲಿಸಲಾಗಿದೆ.

“ಪ್ರಕರಣದಲ್ಲಿ ಮುಂದುವರಿಯಲು ನಾವು ಮಹಿಳೆಯ ಡಿಎನ್‌ಎ ಪ್ರೊಫೈಲಿಂಗ್ ಅನ್ನು ಮಾಡಲಿದ್ದೇವೆ. ಮಹಿಳೆಯ ಡಿಎನ್‌ಎ ಮಾದರಿಗಳನ್ನು ಆಕೆಯ ಪೋಷಕರೊಂದಿಗೆ ಹೊಂದಿಸಲಾಗುವುದು ಮತ್ತು ಅದರ ವರದಿಯ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರಕರಣದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಆರೋಪಿಯ ತಾಯಿ, ‘ನನ್ನ ಮಗನನ್ನು ಪ್ರಕರಣದಲ್ಲಿ ಸಿಲುಕಿಸಲಾಗುತ್ತಿದೆ ಎಂದು ನನಗೆ ತಿಳಿದಿತ್ತು ಮತ್ತು ಅವನ ನಿರಪರಾಧಿ ಎಂದು ಸಾಬೀತುಪಡಿಸಲು ನಾನು ನಿರ್ಧರಿಸಿದ್ದೆ ಎಂದು ಆ ಮಹಾ ತಾಯಿ ಹೇಳಿದ್ದಾಳೆ. ಅಮ್ಮಂದಿರಿಗೆ ಅಸಾಧ್ಯ ಯಾವುದೂ ಇಲ್ಲ ಅನ್ನುವ ಪಾಠದೊಂದಿಗೆ ಈ ಅಮ್ಮ ಭಗೀರಥ ಪ್ರಯತ್ನಕ್ಕೆ ಒಂದು ಸಾಕ್ಷಿಯಾಗಿದ್ದಾರೆ.

Leave A Reply

Your email address will not be published.