ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆ ಉಂಟಾಗುತ್ತದೆಯೇ?ಹಾಗಾದ್ರೆ ಈ ಪಾನೀಯಗಳನ್ನು ಸೇವಿಸಿ
ಚಳಿಗಾಲದ ಸಮಯದಲ್ಲಿ ಆರೋಗ್ಯದಲ್ಲಿ ಏರುಪೇರಾಗೋದು ಹೆಚ್ಚು. ಶೀತ, ಕೆಮ್ಮು ,ಜ್ವರ ಸೇರಿದಂತೆ ಹಲವು ರೋಗಗಳು ಕಾಣಿಸಿ ಕೊಳ್ಳುತ್ತದೆ. ಅಲ್ಲದೆ, ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಇದರಿಂದ ಗ್ಯಾಸ್ಟ್ರಿಕ್, ಮಲಬದ್ಧತೆ, ಅಜೀರ್ಣತೆ ಸಹಜವಾಗಿ ಉಂಟಾಗುತ್ತದೆ. ಮೊದಲೇ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡಿದ್ದರೆ ಚಳಿಗಾಲದ ಕಾಯಿಲೆಗಳಿಂದ ತಪ್ಪಿಸಿಕೊಳ್ಳಬಹುದಾಗಿದೆ. ಅದಕ್ಕಾಗಿ, ನೈಸರ್ಗಿಕರವಾದ ಆರೋಗ್ಯಕರವಾದ ಪದಾರ್ಥಗಳನ್ನು ಬಳಸಿ ತಯಾರು ಮಾಡಿದ ಪಾನೀಯಗಳನ್ನು ಕುಡಿಯಬೇಕು. ಇನ್ನೂ ಯಾವ ಆಹಾರ ಪದಾರ್ಥಗಳು ಚಳಿಗಾಲದ ಸಮಯದಲ್ಲಿ ನಮ್ಮ ದೇಹಕ್ಕೆ ಆರೋಗ್ಯಕರ ಎಂಬುದನ್ನು ತಿಳಿಯೋಣ.
ಮನೆಯಲ್ಲಿ ಬಳಸುವ ಶುಂಠಿ, ದಾಲ್ಚಿನ್ನಿ, ಜೀರಿಗೆ, ನಿಂಬೆಹಣ್ಣು ಇವೆಲ್ಲಾ ಔಷಧೀಯ ಗುಣಗಳನ್ನು ಹೊಂದಿದ್ದು, ಹಿಂದಿನಿಂದಲೂ ಜನರು ಇದನ್ನು ಬಳಸುತ್ತಾ ಬಂದಿದ್ದಾರೆ. ಹಾಗೇ ಆಯುರ್ವೇದ ಪದ್ಧತಿಯಲ್ಲಿ ಕೂಡ ಇವುಗಳಿಗೆ ವಿಶೇಷವಾದ ಸ್ಥಾನಮಾನವಿದೆ.
ನೈಸರ್ಗಿಕವಾದ ರೀತಿಯಲ್ಲಿ ಕೆಮ್ಮು, ಕಫ, ನೆಗಡಿ, ಗ್ಯಾಸ್ಟ್ರಿಕ್ ನಂತಹ ಸಮಸ್ಯೆಗಳನ್ನು ಹೊಡೆದೋಡಿಸುವಲ್ಲಿ ಇವುಗಳ ಪಾತ್ರ ತುಂಬಾನೇ ಇದೆ. ಆಯುರ್ವೇದ ಪದ್ಧತಿಯಲ್ಲಿ ಬಳಸುವ ಬೇವು ಅನಾರೋಗ್ಯಯುಕ್ತ ದೇಹಕ್ಕೆ ಮರುಚೈತನ್ಯವನ್ನು ತುಂಬಿ ರೋಗನಿರೋಧಕ ಶಕ್ತಿಯನ್ನು ಕೊಡುತ್ತದೆ. ಇದರಿಂದಾಗಿ ಕಾಯಿಲೆಗಳು ಮತ್ತು ಸೋಂಕುಗಳು ದೂರವಾಗುತ್ತವೆ.
ಇನ್ನೂ, ಶುಂಠಿ ಮತ್ತು ನಿಂಬೆಹಣ್ಣನ್ನು ನೀವು ಪ್ರತಿದಿನ ಯಾವುದಾದರೂ ಒಂದು ರೂಪದಲ್ಲಿ ಸೇವಿಸಬಹುದು. ಹೀಗೇ ಸ್ವಲ್ಪ ಸಮಯ ಕಳೆದ ನಂತರ ಬೇರೆ ಪದಾರ್ಥಗಳನ್ನು ಇವುಗಳ ಜೊತೆ ಮಿಶ್ರಣ ಮಾಡಿ ಸೇವಿಸಬಹುದು ಅಥವಾ ಬಿಡಬಹುದು. ಅಂದ್ರೆ, ಚಳಿಗಾಲದಲ್ಲಿ ಶುಂಠಿಯ ಜೊತೆ ನೆಲ್ಲಿಕಾಯಿ ಮತ್ತು ಅರಿಶಿಣವನ್ನು ಬಳಸಬಹುದು ಎಂದಾಗಿದೆ.
ಯಾಕೆ ಅದರ ಜೊತೆಗೆ ಸೇವಿಸಬಹುದೆಂದರೆ, ನೆಲ್ಲಿಕಾಯಿ ತನ್ನಲ್ಲಿ ವಿಟಮಿನ್ ಸಿ ಮತ್ತು ಆಂಟಿ ಇನ್ಫ್ಲಮೇಟರಿ ಗುಣಲಕ್ಷಣಗಳನ್ನು ಒಳಗೊಂಡಿದೆ. ಹಾಗೂ ಅರಿಶಿನ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ವೈರಲ್ ಲಕ್ಷಣಗಳನ್ನು ಹೊಂದಿದೆ. ಹಾಗಾಗಿ ಇದೊಂದು ಸದೃಢವಾದ ಆಂಟಿ ಆಕ್ಸಿಡೆಂಟ್ ಎನ್ನಬಹುದು. ಇದರ ಜೊತೆಗೆ ಕರಿಮೆಣಸನ್ನು ಸಹ ಬಳಸಬಹುದು. ಆಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ ಅಂಶಗಳನ್ನು ಒಳಗೊಂಡಿರುವ ಅಲೋವೇರಾ ಮೊಡವೆ ಗುಳ್ಳೆಗಳು ಮತ್ತು ತ್ವಚೆಯ ಉರಿಯುತಕ್ಕೆ ಪರಿಹಾರ ಒದಗಿಸುತ್ತದೆ.
ಹಾಗೇ ಆದಷ್ಟು ವ್ಯಾಯಾಮ ಮತ್ತು ಜೀವನ ಶೈಲಿಯ ಕೆಲವು ಬದಲಾವಣೆಗಳಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇನ್ನೂ ನಿಮ್ಮ ದೇಹದಲ್ಲಿ ಯಾವ ಆಹಾರ ಪದಾರ್ಥ ಸಕ್ಕರೆ ಪ್ರಮಾಣ ಹೆಚ್ಚು ಮಾಡುತ್ತದೆಯೋ ಮತ್ತು ನಿಮ್ಮ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಸಿಗದಂತೆ ಮಾಡುತ್ತದೆ ಅಂತಹದ್ದನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿ. ಇದು ಉತ್ತಮ.
ನಿಂಬೆಹಣ್ಣು ಶುಂಠಿ ಪಾನೀಯ, ಈ ಪಾನೀಯ ಚಳಿಗಾಲದಲ್ಲಿ ನಿಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತದೆ. ಈ ಪಾನೀಯವನ್ನು ಮಾಡಲು ಬೇಕಾಗುವ ಸಾಮಗ್ರಿಗಳು ಯಾವುದೆಂದರೆ, ಒಂದು ನಿಂಬೆಹಣ್ಣಿನ ರಸ, ಒಂದು ಟೀ ಚಮಚ ಶುಂಠಿ ರಸ, ಚಿಟಿಕೆ ಉಪ್ಪು ಮತ್ತು ಅರ್ಧ ಕಪ್ ನೀರು ತೆಗೆದಿಟ್ಟುಕೊಳ್ಳಿ.
ಇದನ್ನು ತಯಾರು ಮಾಡುವ ವಿಧಾನ ಹೇಗೆಂದರೆ, ಮೊದಲು ಶುಂಠಿ ತೆಗೆದುಕೊಂಡು ಅದರ ಮೇಲ್ಭಾಗದ ಸಿಪ್ಪೆ ತೆಗೆದು ಚೆನ್ನಾಗಿ ತೊಳೆದು, ಅದರ ರಸವನ್ನು ತೆಗೆದುಕೊಳ್ಳಿ. ಇದಕ್ಕೆ ನಿಂಬೆಹಣ್ಣಿನ ರಸ ಮಿಶ್ರಣ ಮಾಡಿ, ನೀರು ಹಾಕಿ, ನಂತರ ಇದನ್ನು ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
ಇನ್ನೂ ನಾವು ದೇಹದ ಹೊರಭಾಗವನ್ನು ಶುಭ್ರವಾಗಿಟ್ಟುಕೊಳ್ಳುತ್ತೇವೆ ಆದರೆ ದೇಹದ ಒಳಭಾಗದಲ್ಲಿ ನಡೆಯುವ ಪ್ರಕ್ರಿಯೆ ಅಥವಾ ಅಂಗಗಳು ಇರುವ ಸ್ಥಿತಿ ನಮಗೆ ಗೊತ್ತಾಗುವುದಿಲ್ಲ. ಅದಕ್ಕೆ ಕೆಲವು ಆರೋಗ್ಯಕರ ಪಾನೀಯಗಳನ್ನು ಕುಡಿಯುವುದರಿಂದ ಅವುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬಹುದು ಮತ್ತು ಅಂಗಾಂಗಗಳ ಕಾರ್ಯ ಚಟುವಟಿಕೆ ಹೆಚ್ಚು ಮಾಡಬಹುದು. ಇನ್ನೂ, ನಿಮ್ಮ ದೇಹವನ್ನು ಸ್ವಚ್ಛಗೊಳಿಸುವ ಅದ್ಭುತ ಪಾನೀಯ ಇಲ್ಲಿದೆ.
ಈ ಪಾನೀಯವನ್ನು ಮಾಡಲು ಬೇಕಾಗುವ ಸಾಮಗ್ರಿಗಳು ಯಾವುದೆಂದರೆ, ಒಂದು ಬೀಟ್ರೂಟ್,ಸೌತೆಕಾಯಿ ಮತ್ತು ಸುಮಾರು 20 ಗ್ರಾಂ ಗೋಧಿ ಹುಲ್ಲು ತೆಗೆದುಕೊಳ್ಳಿ. ಇದನ್ನು ತಯಾರು ಮಾಡುವ ವಿಧಾನ ಹೇಗೆಂದರೆ, ತೆಗೆದಿಟ್ಟುಕೊಂಡ ಎಲ್ಲಾ ಸಾಮಗ್ರಿಗಳನ್ನು ಬ್ಲೆಂಡರ್ ನಲ್ಲಿ ಹಾಕಿ ಜ್ಯೂಸ್ ಮಾಡಿ. ಅದನ್ನು ಲೋಟಕ್ಕೆ ಹಾಕಿ ಕುಡಿಯಿರಿ. ಇನ್ನೂ ಇದನ್ನು ರೆಫ್ರಿಜರೇಟರ್ ನಲ್ಲಿ ಇಡುವುದು ಬೇಡ. ಇಷ್ಟೇ ಸುಲಭವಾಗಿ ಚಳಿಗಾಲದಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.