Special Trains: ಕರಾವಳಿಗರಿಗೆ ಸಿಹಿ ಸುದ್ದಿ; ಕೊಂಕಣ ರೈಲ್ವೆಯಿಂದ ವಿಶೇಷ ರೈಲುಗಳ ಘೋಷಣೆ
ಕರಾವಳಿ ಭಾಗದ ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಭಾರತೀಯ ರೈಲ್ವೆ ಈ ವಾರ ಮಂಗಳೂರು ಮತ್ತು ಮುಂಬೈ ನಡುವೆ ಎರಡು ವಿಶೇಷ ರೈಲುಗಳನ್ನು ಘೋಷಣೆ ಮಾಡಿದ್ದಾರೆ.
ರೈಲು ಪ್ರಯಾಣ ಎಂದರೆ ಇಷ್ಟ ಪಡದವರೆ ವಿರಳ ಎಂದರೆ ತಪ್ಪಾಗದು.. ಅದರಲ್ಲೂ ಕೂಡ ದೂರ ಪ್ರಯಾಣವೆಂದರೆ ಹೆಚ್ಚಿನವರಿಗೆ ಅಚ್ಚು ಮೆಚ್ಚು. ಬೇರೆ ಬೇರೆ ಊರುಗಳ, ಜನರ ಭೇಟಿ ಜೊತೆಗೆ ಏಕಾಂತವಾಗಿ ಪ್ರಕೃತಿಯ ಸೊಬಗನ್ನು ಸವಿಯುತ್ತ ಸಾಗುವ ಪಯಣವೇ ಸುಂದರ.
ಇನ್ನೇನು ಕೆಲವೇ ದಿನಗಳಲ್ಲಿ ಕ್ರಿಸ್ಮಸ್ ಹಬ್ಬದ ಜೊತೆಗೆ ಹೊಸ ವರ್ಷದ ಸಂಭ್ರಮದಲ್ಲಿ ಓಡಾಟ ನಡೆಸುವ ಪ್ರಯಾಣಿಕರ ಅನುಕೂಲಕ್ಕಾಗಿ ಕೊಂಕಣ ರೈಲ್ವೆ ವಿಶೇಷ ರೈಲುಗಳನ್ನು ಆರಂಭಿಸಿದೆ. ವರ್ಷಾಂತ್ಯದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಕಾರಣ ಈ ವಿಶೇಷ ರೈಲುಗಳನ್ನು ಕೊಂಕಣ ರೈಲ್ವೆ ಆರಂಭಿಸಿದ್ದು, ಐಆರ್ಸಿಟಿಸಿ ವೆಬ್ಸೈಟ್ಗಳಲ್ಲಿ ಈ ವಿಶೇಷ ರೈಲುಗಳ ಟಿಕೆಟ್ ಬುಕ್ ಮಾಡಬಹುದಾಗಿದೆ.
ಪ್ರತಿ ಶುಕ್ರವಾರ ಮುಂಬೈ ಲೋಕಮಾನ್ಯ ಟರ್ಮಿನಲ್ನಿಂದ ಹೊರಡುವ ರೈಲು ಸಂಖ್ಯೆ 01453 / 01454 ಲೋಕಮಾನ್ಯ ತಿಲಕ್ – ಮಂಗಳೂರು ಜಂಕ್ಷನ್ -ಲೋಕಮಾನ್ಯ ತಿಲಕ್ ವಿಶೇಷ ಸಾಪ್ತಾಹಿಕ ರೈಲು ಡಿಸೆಂಬರ್ 9ರಿಂದ 2023ರ ಜನವರಿ 6ರವರೆಗೆ ಸೇವೆ ಒದಗಿಸಲಿದೆ.
ರೈಲು ಸಂಖ್ಯೆ 01453 ಮುಂಬೈನ ಲೋಕಮಾನ್ಯ ತಿಲಕ್ ನಿಲ್ದಾಣದಿಂದ ಪ್ರತಿ ಶುಕ್ರವಾರ ರಾತ್ರಿ 10:15ಕ್ಕೆ ಹೊರಡಲಿದ್ದು ಮಂಗಳೂರನ್ನು ಮರುದಿನ ಸಂಜೆ 5:05ಕ್ಕೆ ತಲುಪಲಿದೆ. ಈ ರೈಲು ಡಿಸೆಂಬರ್ 9 ರಿಂದ ಜನವರಿ 6ರವರೆಗೆ ಸೇವೆ ಒದಗಿಸಲಿದೆ.
ಈ ವಿಶೇಷ ಸಾಪ್ತಾಹಿಕ ರೈಲುಗಳು ಒಂದು ಟು-ಟೈರ್ ಎಸಿ ಕೋಚ್, ಮೂರು 3-ಟೈರ್ ಎಸಿ ಮತ್ತು ಎಂಟು ಸ್ಲೀಪರ್ ಕೋಚ್ಗಳು ಸೇರಿದಂತೆ ಒಟ್ಟು 17 ಕೋಚ್ಗಳನ್ನು ಹೊಂದಿರುತ್ತವೆ.
ಮತ್ತೊಂದು ವಿಶೇಷ ಸಾಪ್ತಾಹಿಕ ರೈಲು ಸಂಖ್ಯೆ 01454 ಮಂಗಳೂರಿನಿಂದ ಶನಿವಾರ ಸಂಜೆ 6:45ಕ್ಕೆ ಹೊರಡಲಿದ್ದು ಮುಂಬೈ ಲೋಕಮಾನ್ಯ ತಿಲಕ್ ಟರ್ಮಿನಲ್ ನಿಲ್ದಾಣವನ್ನು ಮಧ್ಯಾಹ್ನ 2:25ಕ್ಕೆ ತಲುಪಲಿದೆ. ಈ ರೈಲು ಡಿಸೆಂಬರ್ 10 ರಿಂದ ಜನವರಿ 7ರವರೆಗೂ ಸೇವೆ ನೀಡಲಿದೆ.
ಈ ವಿಶೇಷ ಸಾಪ್ತಾಹಿಕ ರೈಲುಗಳು ಥಾಣೆ, ಪನ್ವೇಲ್, ರೋಹಾ, ಖೇಡ್,, ಸಂಗಮೇಶ್ವರ ರಸ್ತೆ, ರತ್ನಗಿರಿ, ಕಂಕಾವಲಿ, ಸಿಂಧುದುರ್ಗ, ಕುಡಾಲ್. ಸಾವಂತವಾಡಿ ರಸ್ತೆ, ಕಾರವಾರ, ಕುಮಟಾ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರಸ್ತೆ ಬೈಂದೂರು, ಕುಂದಾಪುರ, ಉಡುಪಿ ಮುಲ್ಕಿ ಮತ್ತು ಸುರತ್ಕಲ್ಗಳಲ್ಲಿ ತಂಗಲಿವೆ. ರೈಲ್ವೇ ಪ್ರಯಾಣಿಕರಿಗೆ ನೆರವಾಗುವ ನಿಟ್ಟಿನಲ್ಲಿ ಈ ಹೊಸ ರೈಲುಗಳ ಸೇವೆ ನೀಡಲಾಗಿದ್ದು ಜನತೆಗೆ ಪ್ರಯೋಜನವಾಗುವುದರಲ್ಲಿ ಸಂಶಯವಿಲ್ಲ.