ಅಪರೂಪದ ಬೆಕ್ಕಿನ ಕಣ್ಣಿನ ಹಾವು ಪತ್ತೆ |
ಭಾರತ ಸೇರಿದಂತೆ ಇಡೀ ವಿಶ್ವದಲ್ಲೇ ಅನೇಕ ಜಾತಿಯ ಹಾವುಗಳು ಕಾಣಸಿಗುತ್ತವೆ. ಅವುಗಳಲ್ಲಿ ಕೆಲವೊಂದು ವಿಷಪೂರಿತವಿದ್ದರೆ ಮತ್ತೆ ಕೆಲವು ವಿಷ ರಹಿತವಾಗಿರುತ್ತದೆ. ಒಂದು ಅಂದಾಜಿನ ಪ್ರಕಾರ ಸುಮಾರು 15 ಕುಟುಂಬಕ್ಕೆ ಸೇರಿದ 2900ಕ್ಕೂ ಹೆಚ್ಚು ಪ್ರಭೇದದ ಹಾವುಗಳು ಪ್ರಪಂಚದಾದ್ಯಂತ ಕಾಣಸಿಗುತ್ತವೆ ಎಂದು ಹೇಳಲಾಗಿದೆ. ಭಾರತದಲ್ಲಿ ನಾಗರಹಾವುಗಳನ್ನು ದೇವರಂತೆ ಪೂಜಿಸಲಾಗುತ್ತದೆ. ಅಪರೂಪದಲ್ಲಿಯೇ ಅಪರೂಪವಾಗಿರುವ ಕ್ಯಾಟ್ ಸ್ನೇಕ್ ಎಂದೇ ಕರೆಯುವ ಬೆಕ್ಕಿನ ಕಣ್ಣಿನ ಹಾವು ಇದೀಗ ಪತ್ತೆಯಾಗಿದೆ!!
ಹೌದು, ಬೆಂಗಳೂರು ನಿವಾಸಿ ಮುರಳಿಧರವರ ಗೆಸ್ಟ್ ಹೌಸ್ ನಲ್ಲಿ ಪತ್ತೆಯಾಗಿದೆ. ತುಮಕೂರು ತಾಲೂಕಿನ ತನ್ನೆನಹಳ್ಳಿ ಗ್ರಾಮದಲ್ಲಿ ಇವರ ಗೆಸ್ಟ್ ಹೌಸ್ ಇದ್ದೂ, ಮನೆಯೊಳಗಿದ್ದ ಕಾಟನ್ ಬಾಕ್ಸ್ ಒಳಗಡೆ ಅಪರೂಪದ ಬೆಕ್ಕಿನ ಕಣ್ಣಿನ ಹಾವು ಕಾಣಿಸಿಕೊಂಡಿದೆ.
ಕೂಡಲೇ ಅವರು ವಾರಂಗಲ್ ಫೌಂಡೇಶನ್ ವನ್ಯಜೀವಿ ಜಾಗೃತ ಹಾಗೂ ಉರಗ ರಕ್ಷಣೆ ಸಂಸ್ಥೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ದಿಲೀಪ್ ಪರಿಶೀಲನೆ ನಡೆಸಿ ಕಾಟನ್ ಬಾಕ್ಸ್ ಒಳಗೆ ಇದ್ದ ಅಪರೂಪದ ಬೆಕ್ಕಿನ ಕಣ್ಣಿನ ಹಾವನ್ನು ರಕ್ಷಿಸಿದ್ದಾರೆ. ಸೆರೆ ಸಿಕ್ಕ ಹಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿ ತುಮಕೂರಿನ ದೇವರಾಯನ ದುರ್ಗಾ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದು ಉರಗ ತಜ್ಞ ದಿಲೀಪ್ ಹೇಳಿದ್ದಾರೆ.
ಬೆಕ್ಕಿನ ಕಣ್ಣಿನ ಹಾವು ದಕ್ಷಿಣ ಏಷ್ಯಾಕ್ಕೆ ಸೀಮಿತವಾಗಿವೆ. ಹಿಂಬದಿ ಕೋರೆಹಲ್ಲುಗಳನ್ನು ಹೊಂದಿರೋ ಜಾತಿಗೆ ಸೇರಿದ ಹಾವು ಇದಾಗಿದ್ದೂ ಈ ಅಪರೂಪದ ಹಾವನ್ನು ಸಾಮಾನ್ಯವಾಗಿ ಭಾರತೀಯ ಕ್ಯಾಟ್ ಸ್ನೇಕ್ ಎಂದು ಕರೆಯಲಾಗುತ್ತೆ.