Kantara : ದೈವಾರಾಧನೆಯ ರೀಲ್ಸ್ ಮಾಡಬೇಡಿ, ನಂಬಿಕೆಗೆ ಧಕ್ಕೆ ತರಬೇಡಿ: ನಟ ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಚಿತ್ರ ಇಡೀ ವಿಶ್ವದಾದ್ಯಂತ ಮೆಚ್ಚುಗೆ ಗಳಿಸಿದೆ. ಹಾಗೂ ದಾಖಲೆಗಳನ್ನು ಕೂಡ ಸೃಷ್ಟಿಸಿದೆ. ‘ಕಾಂತಾರ’ ತುಳುನಾಡಿನ ಸಂಸ್ಕೃತಿಯನ್ನು ಜಗತ್ತಿನ ಮೂಲೆ ಮೂಲೆಗೂ ಪರಿಚಯಿಸಿದೆ. ಸಾಕಷ್ಟು ಸವಾಲುಗಳನ್ನು ಕೂಡ ಎದುರಿಸಿದಂತಹ ಸಿನಿಮಾ ಇದಾಗಿದೆ. ಈಗಾಗಲೇ ಹಲವಾರು ಭಾಷೆಗಳಲ್ಲಿ ತೆರೆಕಂಡಿದೆ. ಇನ್ನೂ ಕೂಡ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಕೇವಲ 15 ಕೋಟಿ ರೂಪಾಯಿ ಬಜೆಟ್‌ನಲ್ಲಿ ಸಿದ್ಧವಾದ ‘ಕಾಂತಾರ’ ಸಿನಿಮಾ ಸೂಪರ್ ಹಿಟ್ ಆಗಿದ್ದು, ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿ ರೂಪಾಯಿ ಬಾಚಿಕೊಂಡಿದೆ. ಒಟಿಟಿಯಲ್ಲಿ ಕೂಡ ರಿಲೀಸ್ ಆಗಿ ಅಬ್ಬರಿಸುತ್ತಿದೆ.

ಇತ್ತೀಚೆಗೆ ರಿಷಬ್ ಶೆಟ್ಟಿ ಅವರು ಸಿನಿಮಾದ ಸಕ್ಸಸ್ ನ ಹಿನ್ನೆಲೆ ಗೋವಾದ ಅಂತಾರಾಷ್ಟ್ರೀಯ ಸಿನಿಮೋತ್ಸವ (IFFI )ದಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ರಿಷಬ್ ಶೆಟ್ಟಿಗೆ ಪ್ರಶ್ನೆಯೊಂದು ಎದುರಾಗಿತ್ತು. ದೇವರು ಅಂದರೆ ನಿಮ್ಮ ಗ್ರಹಿಕೆ ಏನು ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ರಿಷಬ್ ಸಿನಿಮಾ ದೇವರು. ನನಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿದ್ದು ಸಿನಿಮಾ. ನನ್ನನ್ನು ಇಲ್ಲಿಯವರೆಗೆ ಕರೆ ತಂದಿದ್ದು ಸಿನಿಮಾ ಎಂದಿದ್ದಾರೆ.

ಇದೀಗ ‘ಕಾಂತಾರ’ ಸಿನಿಮಾ ತುಳು ಭಾಷೆಯಲ್ಲಿ ಕೂಡ ತೆರೆಕಾಣುತ್ತಿದೆ. ಈ ಸಂದರ್ಭದಲ್ಲಿ ಮಾತನಾಡಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಸಿನಿಮಾದ ಗೆಲುವಿಗೆ ಕಾರಣರಾದ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಹಾಗೂ ಕೆಲವೊಂದು ಮಾತುಗಳನ್ನು ಕೂಡ ಈ ವೇಳೆ ಹೇಳಿದ್ದಾರೆ.

ದೈವಾರಾಧನೆಯನ್ನು ರೀಲ್ಸ್ ಮಾಡೋದು ಹಾಗೂ ಕಾಂತಾರ ಸಿನಿಮಾದ ಪಾತ್ರವನ್ನು ಅನುಕರಣೆ ಮಾಡೋದು ಸರಿಯಲ್ಲ. ದೈವಾರಾಧನೆ ನಮ್ಮ ನಂಬಿಕೆಯಾಗಿದೆ. ಅದನ್ನು ನಂಬೋರು ನಂಬಬಹುದು. ನಂಬದಿದ್ದರೆ ನಂಬದೇ ಇರಬಹುದು. ಅದು ಅವರವರ ನಂಬಿಕೆಗೆ ಬಿಟ್ಟದ್ದು. ಆದರೆ ದೈವಾರಾಧನೆಯ ಬಗ್ಗೆ ತಪ್ಪು ತಪ್ಪು ಮಾತನಾಡೋದು, ಸುಳ್ಳು ಎಂದು ವಾದ ಮಾಡೋದು ಸರಿಯಲ್ಲ. ನಂಬದಿದ್ದರೆ ಪರವಾಗಿಲ್ಲ. ಆದ್ರೆ ಬೇರೆಯವರ ನಂಬಿಕೆಗೆ ಧಕ್ಕೆ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.

Leave A Reply

Your email address will not be published.