ಸ್ಕೂಲಿಗೆ ಬೀಗ ಹಾಕಿ ಶಿಕ್ಷಕರ ಪ್ರವಾಸ | ಮೋಜು- ಮಸ್ತಿ ಮಾಡಲು ಮಕ್ಕಳಿಗೆ ಒಂದು ದಿನ ರಜೆ ಕೊಟ್ಟ ಶಿಕ್ಷಕರು

ಒಂದು ಶಾಲೆ ಅಂದರೆ ರೀತಿ ನೀತಿ ಕಾನೂನು ನಿಯಮಗಳು ಮಕ್ಕಳಿಗೂ ಶಿಕ್ಷಕರಿಗೂ ಅನ್ವಯಿಸುತ್ತದೆ. ಶಿಕ್ಷಣ ಇಲಾಖೆ ಮೇಲಾಧಿಕಾರಿಗಳ ಅನುಮತಿ ಪಡೆಯದೇ ಮತ್ತು ನಿರ್ದಿಷ್ಟ ಕಾರಣ ಇಲ್ಲದೆ ಮಕ್ಕಳಿಗೆ ರಜೆ ನೀಡುವಂತಿಲ್ಲ. ಆದರೆ ಶಿಕ್ಷಕರೇ ನಿಯಮ ಮೀರಿದರೆ ಮಕ್ಕಳ ಗತಿ ಏನಾಗಬೇಡ. ಅಂತಹುದೇ ಒಂದು ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

ಹೌದು ಶಾಲೆಗೆ ಬೀಗ ಹಾಕಿ ಶಿಕ್ಷಕರು ಮೋಜು ಮಸ್ತಿಗಾಗಿ ಪ್ರವಾಸಕ್ಕೆ ತೆರಳಿದ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಬಿಳಿಚೋಡು ಗ್ರಾಮದಲ್ಲಿ ನಡೆದಿದೆ.

ಸದ್ಯ ಈ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ. ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕರು ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳಿಗೆ ಮಾಹಿತಿ ನೀಡದೆ ನವೆಂಬರ್ 12ರಂದು ಶನಿವಾರ ಮಕ್ಕಳಿಗೆ ರಜೆ ಘೋಷಿಸಿ ದಾಂಡೇಲಿ ಪ್ರವಾಸಕ್ಕೆ ಹೋಗಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಶೈಕ್ಷಣಿಕ ಪ್ರವಾಸಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಬೇಕಿದ್ದ ಶಿಕ್ಷಕರು ಮೋಜು ಮಸ್ತಿಗಾಗಿ ತಾವೇ ಪ್ರವಾಸ ಕೈಗೊಂಡಿದ್ದಾರೆ. ಈ ಶಾಲೆಯಲ್ಲಿ ಎಲ್ ಕೆ ಜಿ ಯಿಂದ ಎಸ್ಎಸ್ ಎಲ್ ಸಿ ವರೆಗೆ 290 ಮಕ್ಕಳು ಕಲಿಯುತ್ತಿದ್ದಾರೆ. ಎಲ್ಲಾ ಮಕ್ಕಳಿಗೆ ಒಂದು ದಿನ ರಜೆ ನೀಡಿ ಮುಖ್ಯ ಶಿಕ್ಷಕರ ನೇತೃತ್ವದಲ್ಲಿ ಎಲ್ಲಾ 14 ಜನ ಶಿಕ್ಷಕರು ಮತ್ತು ಶಿಕ್ಷಕಿಯರು ಪ್ರವಾಸಕ್ಕೆ ಹೋಗಿ ಬಂದಿದ್ದಾರೆ.

ಪ್ರವಾಸ ಕೈಗೊಳ್ಳುವ ಮೊದಲು ಶಿಕ್ಷಣ ಇಲಾಖೆ ಮೇಲಾಧಿಕಾರಿಗಳ ಅನುಮತಿ ಪಡೆಯದೇ ಶಾಲೆಗೆ ಏಕಾಏಕಿ ರಜೆ ಘೋಷಣೆ ಮಾಡಿ ಪ್ರವಾಸಕ್ಕೆ ಹೋಗಿ ಬಂದಿರುವುದು ಚರ್ಚೆಗೆ ಕಾರಣವಾಗಿದೆ.

ಈ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಂಕ್ಷಿಪ್ತ ಕಾರಣ ಕೇಳಿ ಎಲ್ಲಾ 14 ಜನ ಶಿಕ್ಷಕರಿಗೆ ನೋಟಿಸ್ ಜಾರಿ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುನ್ಸೂಚನೆ ನೀಡಲಾಗಿದೆ.

Leave A Reply

Your email address will not be published.