ಹೊಂಡಗುಂಡಿಯಲ್ಲಿ 5 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!
ರಸ್ತೆ ಅವ್ಯವಸ್ಥೆ ಖಂಡಿಸಿ ಸಾರ್ವಜನಿಕರು ಅದೆಷ್ಟೇ ಮನವಿ ಮಾಡಿದರು ಕೂಡ ಸರ್ಕಾರ ಕ್ಯಾರೇ ಎನ್ನದೆ, ಚುನಾವಣೆ ಬಂದಾಗ ಇಲ್ಲ ಸಲ್ಲದ ಆಶ್ವಾಸನೆ ನೀಡುವುದು ಸಹಜ. ಇದನ್ನು ಕಂಡು ರೋಸತ್ತ ನಾಗರಿಕರು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯಲು ಮುಂದಾಗಿರುವ ವಿಶೇಷ ಘಟನೆ ಬೆಳಕಿಗೆ ಬಂದಿದೆ.
ಏಷ್ಟೋ ಬಾರಿ ಸರ್ಕಾರದ ಮುಂದೆ ಅನೇಕ ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಿದಾಗ ಅದಕ್ಕೆ ಸರ್ಕಾರ ಪ್ರತಿಕ್ರಿಯೆ ನೀಡದೆ ಮೌನ ವಹಿಸಿದಾಗ ಸಾರ್ವಜನಿಕರು ರೋಡಿಗಿಳಿದು ಬ್ಯಾನರ್ ಹಿಡಿದು ಇಲ್ಲವೇ ರಸ್ತೆ ಮದ್ಯೆ ಕುಳಿತು ಪ್ರತಿಭಟನೆ ನಡೆಸಿದಾಗ ಕೆಲವೊಮ್ಮೆ ರಸ್ತೆಯಲ್ಲಿ ಸಂಚರಿಸುವ ಉಳಿದ ವಾಹನ ಸವಾರರಿಗೂ ತೊಂದರೆಯಾಗುವುದು ಸಹಜ. ಆದ್ರೆ, ಉಡುಪಿಯಲ್ಲಿ ಮತ್ತೊಬ್ಬರಿಗೆ ತೊಂದರೆ ನೀಡದೆ, ಅರಿವು ಮೂಡಿಸುವ ನಿಟ್ಟಿನಲ್ಲಿ ವಿಶಿಷ್ಟ ಅಭಿಯಾನದ ಮೂಲಕ ಉಳಿದವರಿಗೂ ಮಾದರಿಯಾಗಿರುವ ಘಟನೆ ನಡೆದಿದೆ.
ಉಡುಪಿ ನಗರದ ಇಂದ್ರಾಳಿ ರೈಲ್ವೆ ನಿಲ್ದಾಣಕ್ಕೆ ತೆರಳುವ ಅಗಲ ಕಿರಿದಾದ ಜಾರ್ಜ್ ಫರ್ನಾಂಡಿಸ್ ರಸ್ತೆಯ ಅವ್ಯವಸ್ಥೆ, ಹೊಂಡಗುಂಡಿಗಳಿಂದ ನಾಗರಿಕರಿಗೆ ಮಾತ್ರವಲ್ಲದೇ ವಾಹನ ಸಂಚಾರಕ್ಕೆ ನಿರಂತರ ಅಡ್ಡಿಯಾಗಿ ತಾಪತ್ರಯವಾಗುತ್ತಿದೆ. ಹಾಗಾಗಿ, ಸಾರ್ವಜನಿಕರು ಎಷ್ಟೇ ಮನವಿ ಮಾಡಿದ್ದರು ಕೂಡ ಜಾಣ ಕುರುಡು ಪ್ರದರ್ಶನ ಮಾಡುತ್ತಿರುವುದನ್ನು ಖಂಡಿಸಿ ಉಡುಪಿ ಜಿಲ್ಲಾ ನಾಗರಿಕ ವೇದಿಕೆ ಶುಕ್ರವಾರ ವಿಭಿನ್ನ ಶೈಲಿಯಲ್ಲಿ ಪ್ರತಿಭಟನೆ ನಡೆಸಿದೆ.
ಗುಂಡಿ ಬಿದ್ದು ಹೊಂಡ ತುಂಬಿರುವ ರಸ್ತೆಯಲ್ಲಿ ಹಠಾತ್ತನೇ ಆಂಬುಲೆನ್ಸೊಂದು ಸೈರನ್ ಹಾಕುತ್ತಾ ಧಾವಿಸಿ ಬಂದಿದ್ದು, ಅದರಲ್ಲಿ ತುಂಬು ಗರ್ಭಿಣಿಯೊಬ್ಬರು ಕುಳಿತಿದ್ದರು.
ಸೇತುವೆ ಬಳಿ ಆಂಬುಲೆನ್ಸ್ ಹೊಂಡಗುಂಡಿಗಳಲ್ಲಿ ಎದ್ದುಬಿದ್ದು ಸಾಗುವಾಗ ಜೋರಾಗಿ ಮಗುವಿನ ಅಳುವಿನ ರೋಧನ ಕೇಳಿ ಬಂದಿದೆ. ಆ ಸಂದರ್ಭ ಮಹಿಳೆಯೊಬ್ಬರು 5 ಮಕ್ಕಳಿಗೆ ಆಂಬುಲೆನ್ಸ್ ನಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ. ಕೂಡಲೇ ಆ ರಸ್ತೆಯಲ್ಲಿ ಮತ್ತೊಂದು ಅಪಘಾತ ನಡೆದಿದ್ದು, ರಸ್ತೆ ಮಧ್ಯೆ ವ್ಯಕ್ತಿಯೊಬ್ಬರು ಬಿದ್ದು ಜೋರಾಗಿ ಅಳುತ್ತಾ ಆಕ್ರಂದನ ಹೊರ ಹಾಕಿದ್ದಾರೆ.
ಈ ಎಲ್ಲ ಕ್ಷಣಗಳಿಗೆ ಸಾಕ್ಷಿಯಾಗಿದ್ದು, ನಾಗರಿಕ ವೇದಿಕೆಯ ನಿತ್ಯಾನಂದ ಒಳಕಾಡು ಅವರು ಪ್ರಸ್ತುತ ಪಡಿಸಿದ ಅಣಕು ಪ್ರದರ್ಶನದಲ್ಲಿ ರಸ್ತೆಯ ಅವ್ಯವಸ್ಥೆಯ ಜೊತೆಗೆ ಇದರಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಿತ್ಯಾನಂದ ಒಳಕಾಡು ಅವರ ಈ ಸದುದ್ದೇಶ ಪೂರ್ವಿತ ಈ ಅಭಿಯಾನಕ್ಕೆ ಇಂದ್ರಾಳಿ ರೈಲು ನಿಲ್ದಾಣದ ಆಟೋ ಚಾಲಕರು ಬೆಂಬಲ ನೀಡಿದ್ದು, ರಾಜು ಮತ್ತು ಹರೀಶ್ ಅಣಕು ಪ್ರದರ್ಶನದಲ್ಲಿ ನಟಿಸಿದ್ದಾರೆ. ಅಂತೂ ಇಂತೂ ಜಿಲ್ಲಾಡಳಿತದ ಗಮನ ಸೆಳೆಯುವ ವಿಶಿಷ್ಟ ಅಭಿಯಾನ ನಡೆಸಿದ್ದು, ಈ ಕುರಿತು ಜಿಲ್ಲಾಡಳಿತ ಎಚ್ಚೆತ್ತು ಕ್ರಮ ಕೈಗೊಂಡರೆ ಈ ಅಭಿಯಾನಕ್ಕೆ ಒಂದು ಅರ್ಥ ಸಿಗುವುದರಲ್ಲಿ ಸಂದೇಹವಿಲ್ಲ.