ಮಂಗಳೂರು : ರಿಕ್ಷಾ ಸ್ಫೋಟ ಪ್ರಕರಣ| ಸ್ಫೋಟದಲ್ಲಿ ಗಾಯಗೊಂಡಾತ ಶಾರೀಕ್‌ ಎಂಬುದು ದೃಢ! ಚಹರೆ ಖಚಿತಪಡಿಸಿದ ಪೋಷಕರು

ಮಂಗಳೂರಿನ ಆಟೋದಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ಶಂಕಿತ ಆರೋಪಿ ಶಾರೀಕ್ ಗುರುತು ಪತ್ತೆ ಹಚ್ಚಲು ತಡರಾತ್ರಿ ಶಿವಮೊಗ್ಗದಿಂದ ಮಂಗಳೂರಿಗೆ ಆತನ ಪೋಷಕರನ್ನು ಪೊಲೀಸರು ಕರೆತಂದ ಬಳಿಕ ಇದೀಗ ಆರೋಪಿ ಶಾರೀಕ್ ಎಂಬ ಮಾಹಿತಿ ದೃಢವಾಗಿದೆ.

ಮಂಗಳೂರು ನಗರದಲ್ಲಿ ನಡೆದ ಸ್ಫೋಟವಾದ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದ ಎಡಿಜಿಪಿ ಅಲೋಕ್ ಕುಮಾರ್ ಪ್ರತ್ಯಕ್ಷದರ್ಶಿಗಳಿಂದ, ಸಮೀಪದ ಅಂಗಡಿಗಳವರಿಂದ ಮಾಹಿತಿ ಪಡೆದಿದ್ದಾರೆ. ಮಂಗಳೂರಿನ ಕಂಕನಾಡಿ ಆಸ್ಪತ್ರೆಗೆ ದಾಖಲಾಗಿರುವ ಆರೋಪಿ ಶಾರೀಕ್ ಶೇ.40 ರಷ್ಟು ದೇಹ ಸುಟ್ಟು ಹೋಗಿದ್ದು, ಮಂಗಳೂರಿನ ಕಂಕನಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಆರೋಪಿಯ ಮುಖ ಬಾವು ಬಂದಿದ್ದ ಕಾರಣ ಪೊಲೀಸರಿಗೆ ಗುರುತು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅನುಮಾನದ ಹಿನ್ನೆಲೆಯಲ್ಲಿ ಶಾರೀಕ್ ಹೆತ್ತವರನ್ನು ಕರೆಸಿದ್ದು,ಗಾಯಗೊಂಡ ವ್ಯಕ್ತಿಯನ್ನು ಮೊಹಮದ್‌ ಶಾರೀಕ್‌ ಎಂದು ಆತನ ಪೋಷಕರು ಖಚಿತಪಡಿಸಿದ್ದಾರೆ. ಗೋಡೆ ಬರಹ ಪ್ರಕರಣದಲ್ಲಿ ಎರಡು ವರ್ಷದ ಹಿಂದೆ ಬಂಧನವಾಗಿದ್ದ ಶಾರೀಕ್‌, ಈಗ ಮಂಗಳೂರಿನ ಕಂಕನಾಡಿಯ ಗರೋಡಿ ಬಳಿಯ ಕುಕ್ಕರ್‌ ಬಾಂಬ್‌ ಸ್ಫೋಟದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ.

ತೀರ್ಥಹಳ್ಳಿಯ ಶಾರೀಕ್‌ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಟಾಕೀಸ್ ರಸ್ತೆಯಲ್ಲಿರುವ ನಾಲ್ಕು ಮನೆಗಳ ಮೇಲೆ ಪೊಲೀಸರು ಸೋಮವಾರ ಬೆಳಗ್ಗೆ ದಾಳಿ ನಡೆಸಿದ್ದು, ಒಂದು ಗಂಟೆಯ ಶೋಧದ ಬಳಿಕ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಶಾರೀಕ್‌, ಮಾಜ್‌ ಸಂಬಂಧಿಗಳ ಮನೆ ಮೇಲೆ ಸರ್ಚ್‌ ವಾರೆಂಟ್‌ ಪಡೆದು ಪೊಲೀಸರು ದಾಳಿ ನಡೆಸಿ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.


ಸೋಮವಾರ ಬೆಳಗ್ಗೆ ಮಂಗಳೂರಿನ ಫಾದರ್‌ ಮುಲ್ಲರ್‌ ಆಸ್ಪತ್ರೆಗೆ ಭೇಟಿ ನೀಡಿ ಶಾರೀಕ್‌ ಆರೋಗ್ಯ ವಿಚಾರಿಸಿದ ಕುಟುಂಬಸ್ಥರು, ಆತನೇ ಶಾರೀಕ್‌ ಎಂದು ಪೊಲೀಸರ ಸಮ್ಮುಖದಲ್ಲಿ ಖಚಿತಪಡಿಸಿದ್ದಾರೆ. ಮಂಗಳೂರು ಪೊಲೀಸ್‌ ಆಯುಕ್ತರು ಶಾರೀಕ್‌ ಎಂದು ಖಚಿತವಾದ ಮೇಲೆ ಆತನ ಕುಟುಂಬಸ್ಥರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದ್ದು, ಒಬ್ಬರು ಪುರುಷ, ಮೂವರು ಮಹಿಳೆಯರು ಆರೋಪಿಯನ್ನು ಗುರುತಿಸಲು ಬಂದಿದ್ದಾರೆ ಎನ್ನಲಾಗಿದೆ.

ಎರಡು ವರ್ಷಗಳ ಹಿಂದೆ ಮಂಗಳೂರಿನ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್ ಗೋಡೆ ಮೇಲೆ ಉಗ್ರ ಸಂಘಟನೆ ಲಷ್ಕರ್ ಪರವಾಗಿ ಬರಹ ಬರೆಯಲಾಗಿದ್ದು,ಈ ಪ್ರಕರಣದಲ್ಲಿ ಮಾಝ್, ಮುನೀರ್ ಜೊತೆ ಶಾರೀಕ್‌ನನ್ನು ಬಂಧಿಸಲಾಗಿತ್ತು. ಆ ಪ್ರಕರಣದಲ್ಲಿ ಜಾಮೀನು ಪಡೆದ ಶಾರೀಕ್‌ ಹೊರಗೆ ಬಂದಿದ್ದಾರೆ.
ಇದರ ಜೊತೆಗೆ ಉಗ್ರ ಶಾರೀಕ್‌ ಜೊತೆ ಸಂಪರ್ಕದಲ್ಲಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಶಾರೀಕ್‌ ಜೊತೆ ಯಾವ ಕಾರಣಕ್ಕೆ ಸಂಪರ್ಕದಲ್ಲಿದ್ದರು ಜೊತೆಗೆ ಶಾರೀಕ್‌ಗೆ ಸಹಾಯ ಮಾಡುತ್ತಿದಾರಾ? ಎಂಬ ವಿವರಗಳ ಕಲೆ ಹಾಕಲು ಖಾಕಿ ಪಡೆ ಮುಂದಾಗಿದೆ.

ಮಂಗಳೂರು ಕುಕ್ಕರ್‌ ಸ್ಫೋಟ ಪ್ರಕರಣದಲ್ಲಿ ಸ್ಫೋಟಕ್ಕೆ ಎಲ್‌ಇಡಿ ಸಾಧನ, ಡಿಟೋನೇಟರ್‌, ಬ್ಯಾಟರಿ, ವೈರ್‌ ಬಳಕೆ ಮಾಡಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೆ, ಕೊಯಮತ್ತೂರು ಸೇರಿ ಹಲವು ಕಡೆ ಶಂಕಿತ ಉಗ್ರ ಭೇಟಿ ನೀಡಿರುವ ಕುರಿತು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಶಂಕಿತ ಉಗ್ರನ ಬಳಿ ನಕಲಿ ಆಧಾರ್‌ ಕಾರ್ಡ್‌ ಸಿಕ್ಕಿದ್ದು, ಸಿಮ್‌ ಖರೀದಿಸಲು ಆಧಾರ ಕಾರ್ಡ್‌ ಬಳಸಿರುವ ಸಾಧ್ಯತೆ ದಟ್ಟವಾಗಿದೆ.

ಸ್ಫೋಟದ ಹಿಂದೆ ನಿಷೇಧಿತ ಪಿಎಫ್‌ಐ ಕೈವಾಡ ಇರುವ ಗುಮಾನಿ ಕೂಡ ಇದ್ದು, ಪೊಲೀಸರ ತನಿಖೆಗೆ ಎನ್‌ಐಎ, ಐಬಿ ಅಧಿಕಾರಿಗಳು ಕೈಜೋಡಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

Leave A Reply

Your email address will not be published.