ಮತ್ತೆ ಶಬರಿಮಲೆ ದೇಗುಲದಲ್ಲಿ ಮಹಿಳೆಯರ ಪ್ರವೇಶ ವಿವಾದ!
ಈಗಾಗಲೇ ಪ್ರಸಿದ್ಧಿ ಪಡೆದಿರುವ ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ಮಂಡಲ ಪೂಜೆ ಆರಂಭ ಆಗಿದೆ ಮತ್ತು ಎರಡು ದಿನಗಳ ಹಿಂದಷ್ಟೇ ಶಬರಿಮಲೆ ಯಾತ್ರೆಗೆ ಚಾಲನೆ ಸಹ ನೀಡಲಾಗಿದೆ. ಪ್ರಸ್ತುತ ಶಬರಿಮಲೆ ಯಾತ್ರೆಗೆ ಚಾಲನೆ ಸಿಗುತ್ತಿದ್ದಂತೆಯೇ ಪೊಲೀಸ್ ಸಿಬ್ಬಂದಿಗಳಿಗೆ ನೀಡಿದ ಕೈಪಿಡಿಯೊಂದು ವಿವಾದವನ್ನು ಹುಟ್ಟು ಹಾಕಿದೆ.
ಲಕ್ಷಾಂತರ ಮಂದಿ ಭಕ್ತರು ಬರುವ ಶಬರಿಮಲೆ ದೇಗುಲದ ಭದ್ರತೆಗೆ ನಿಯೋಜಿಸಲ್ಪಟ್ಟ ಪೊಲೀಸ್ ಸಿಬ್ಬಂದಿಗೆ ನೀಡಲಾಗಿರುವ ಕೈಪಿಡಿಯಲ್ಲಿ, “2018 ರ ಸುಪ್ರೀಂ ಕೋರ್ಟ್ ತೀರ್ಪಿನ ಅನುಸಾರವಾಗಿ ಎಲ್ಲಾ ಭಕ್ತರಿಗೆ ಪ್ರವೇಶದ ಅವಕಾಶವಿದೆ” ಎಂದು ಬರೆಯಲಾಗಿತ್ತು.
ಈಗಾಗಲೇ 2018ರಲ್ಲಿ ಸರ್ವೋಚ್ಚ ನ್ಯಾಯಾಲಯವು ಹತ್ತರಿಂದ ಐವತ್ತು ವರ್ಷ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ಪ್ರವೇಶಕ್ಕಿದ್ದ ನಿರ್ಬಂಧವನ್ನು ತೆಗೆದು ಹಾಕಿತ್ತು ಮತ್ತು ಋತುಮತಿ ಆಗುವ ವಯಸ್ಸಿನ ಮಹಿಳೆಯರೂ ಕೂಡ ದೇವಾಲಯಕ್ಕೆ ಪ್ರವೇಶಿಸಬಹುದು ಎಂದು ಹೇಳಿಕೆ ಇಟ್ಟಿತ್ತು. ಈಗ ಅದೇ ಆದೇಶವನ್ನು ಕೈಪಿಡಿಯಲ್ಲಿ ಪರೋಕ್ಷವಾಗಿ ಉಲ್ಲೇಖಿಸಿ, ಎಲ್ಲಾ ಭಕ್ತರಿಗೂ ಪ್ರವೇಶವನ್ನು ಅನುಮತಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ ಎಂದು ಬಿಜೆಪಿ ಪಕ್ಷದ ಆರೋಪ ಆಗಿದೆ.
ಆದರೆ ಭಕ್ತರ ಭಾವನೆಗಳನ್ನು ಪರಿಗಣಿಸಿ ಕೋರ್ಟ್ ನ ಆದೇಶವನ್ನು ಜಾರಿಗೆ ತರಲು ಸರ್ಕಾರ ಮುಂದಾಗಿರಲಿಲ್ಲ. ಆದರೂ ಈ ನಡುವೆ ಕೈಪಿಡಿಯಲ್ಲಿ ಮತ್ತೆ ಈ ವಿಚಾರವನ್ನು ಉಲ್ಲೇಖಿಸಿರುವುದು ಬಿಜೆಪಿ ಅವರ ಕೆಂಗಣ್ಣಿಗೆ ಗುರಿಯಾಗಿದ್ದು, “ಈ ಕೈಪಿಡಿಯಲ್ಲಿ ನೀಡಿರುವ ಮಾರ್ಗಸೂಚಿಗಳ ಹಿಂದೆ ದುರುದ್ದೇಶವಿದೆ. ಈ ಕೂಡಲೇ ಅದನ್ನು ಹಿಂಪಡೆಯಬೇಕು” ಎಂದು ಬಿಜೆಪಿಯವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಬಿಜೆಪಿ ಪಕ್ಷ ದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ರಾಜ್ಯದ ಎಲ್ ಡಿ ಎಫ್ ಸರ್ಕಾರವು ಕೈಪಿಡಿಯನ್ನು ಹಿಂದಕ್ಕೆ ಪಡೆದಿದೆ ಎಂದು ಮಾಹಿತಿ ದೊರೆತಿದೆ.