ಚಂದನ ಬಳಸಿ, ನಿಮ್ಮ ಮುಖದ ಸೌಂದರ್ಯ ಹೆಚ್ಚಿಸಿ!!!

ನೀವು ಸುಂದರ, ಕಾಂತಿಯುತ ತ್ವಚೆ ಪಡೆಯಬೇಕೆಂದಿದ್ದೀರಾ? ಹಾಗಾದರೆ ನಿಮ್ಮ ಬಳಿ ಕೇವಲ ಚಂದನ ಅಥವಾ ಶ್ರೀಗಂಧವಿದ್ದರೆ ಸಾಕು. ನೈಸರ್ಗಿಕವಾದ ಸುಂದರ, ಕಾಂತಿಯುಕ್ತ ವದನವನ್ನಾಗಿ ಪರಿವರ್ತಿಸಬಹುದು. ನೂರಾರು ವರ್ಷಗಳಿಂದ ಪ್ರಮುಖ ಸೌಂದರ್ಯ ಪ್ರಸಾಧನದ ರೂಪದಲ್ಲಿರುವ ಚಂದನವನ್ನು ಬಳಸಿಕೊಂಡು ಕೆಳಗಿರುವ ಯಾವುದಾದರೂ ಒಂದು ವಿಧಾನ ಅನುಸರಿಸಿದರೆ ಸಾಕು ನಿಮ್ಮ ಮುಖವು ಪಳ ಪಳ ಎಂದು ಹೊಳೆಯುತ್ತದೆ.

 

ಗಂಧದ ಕೊರಡನ್ನು , ಕೊರಡು ಇಲ್ಲವಾದರೆ ಚಂದನದ ಪುಡಿಯನ್ನು ಕೊಂಚ ಹಾಲಿನೊಂದಿಗೆ ತೇದು ದಪ್ಪನೆಯ ಲೇಪ ತಯಾರಿಸಿ, ಮುಖಕ್ಕೆ ಹಚ್ಚಿಕೊಳ್ಳಿ. ಸ್ವಲ್ಪ ಹೊತ್ತು ಚೆನ್ನಾಗಿ ಒಣಗಿದ ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಂಡು ದಪ್ಪ ಟವೆಲ್ಲಿನಿಂದ ಒತ್ತಿ ಒರೆಸಿಕೊಳ್ಳಿ. ಉಜ್ಜಲು ಹೋಗಬೇಡಿ.

ಬಿಸಿಲಿಗೆ ಕಪ್ಪಾಗಿ ಅಥವಾ ಬೇರಾವುದೋ ಕಾರಣದಿಂದ ಚರ್ಮ ತೀರಾ ಒಣಗಿದ್ದರೆ, ಆಲೋವೆರಾದ ರಸ ಮತ್ತು ಒಂದು ದೊಡ್ಡ ಚಮಚ ಚಂದನದ ಪುಡಿಯನ್ನು ಬೆರೆಸಿ ದಪ್ಪನೆಯ ಲೇಪನ ತಯಾರಿಸಿ. ಸ್ವಲ್ಪ ಹೊತ್ತು ಒಣಗಲು ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ವಾರಕ್ಕೊಂದು ಅಥವಾ ಎರಡು ಬಾರಿ ಮಾತ್ರ ಈ ವಿಧಾನ ಅನುಸರಿಸಿ.

ಸಮ ಪ್ರಮಾಣದಲ್ಲಿ ಅರಿಶಿಣ ಮತ್ತು ಚಂದನದ ಪುಡಿಗಳನ್ನು ಬೆರೆಸಿ ಅಗತ್ಯಕ್ಕೆ ತಕ್ಕಷ್ಟು ಹಸಿ ಹಾಲು ಅಥವಾ ಮೊಸರನ್ನು ಬೆರೆಸಿ ಲೇಪನ ತಯಾರಿಸಿ. ಮುಖ, ಕುತ್ತಿಗೆ ಕೈಗಳಿಗೆ ಹಚ್ಚಿ ಕೊಂಚ ಹೊತ್ತು ಹಾಗೇ ಬಿಟ್ಟು ಮೊದಲು ತಣ್ಣೀರಿನಿಂದ, ಬಳಿಕ ಹಳದಿ ಬಣ್ಣವನ್ನು ನಿವಾರಿಸಲು ಕೊಂಚ ಉಗುರುಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಬೇಡಿ. ಎಲ್ಲಾ ಬಗೆಯ ಚರ್ಮಕ್ಕೆ ಇದು ಸೂಕ್ತವಾದ ಲೇಪನವಾಗಿದೆ.

ಮಹಿಳೆಯರ ಮುಖದಲ್ಲಿ ಮೊಡವೆಗಳ ಕಾಟವಿದ್ದರೆ, ಏನೇನೋ ಕ್ರೀಮ್ ಹಚ್ಚಿ ಮುಖವನ್ನು ಹಾಳು ಮಾಡಿಕೊಳ್ಳುತ್ತಾರೆ. ಅದರ ಬದಲು ಈ ಮುಖಲೇಪ ಹಚ್ಚುವುದು ಸೂಕ್ತವಾಗಿದೆ. ಬೇವಿನ ಮತ್ತು ಚಂದನದ ಪುಡಿಗಳನ್ನು ಸಮ ಪ್ರಮಾಣದಲ್ಲಿ ನೀರಿನೊಂದಿಗೆ ಬೆರೆಸಿದ ಲೇಪನವನ್ನು ಮೊಡವೆಗಳಿರುವ ಭಾಗಕ್ಕೆ ಹೆಚ್ಚು ದಪ್ಪನಾಗಿ ಹಚ್ಚಿ. ಬಳಿಕ ತಣ್ಣೀರಿನಿಂದ ತೊಳೆಯಿರಿ. ಬೇವಿನಲ್ಲಿ ಬ್ಯಾಕ್ಟಿರಿಯಾ ನಿವಾರಕ ಗುಣ ಮತ್ತು ಚಂದನದಲ್ಲಿ ಪೋಷಣೆಯ ಗುಣಗಳು ಇರುವುದರಿಂದ ಅದ್ಭುತವಾದ ಪರಿಣಾಮಗಳನ್ನೇ ಪಡೆಯಬಹುದು.

ಮಾರುಕಟ್ಟೆಗಳಲ್ಲಿರುವ ಕೆಮಿಕಲ್ ಯುಕ್ತ ಕ್ರೀಮ್ ಬಳಸಿ, ಇರುವ ಕಾಂತಿಯನ್ನೂ ಹಾಳು ಮಾಡಿಕೊಳ್ಳುವುದಕ್ಕಿಂತ ನಾವೇ ಮನೆಯಲ್ಲಿ ತಯಾರಿಸಿದ ಲೇಪನವನ್ನು ಬಳಸಿ, ಮುಖದ ಕಾಂತಿ ಹೆಚ್ಚಿಸಬಹುದು.

Leave A Reply

Your email address will not be published.