ಅದೃಷ್ಟ ಕೈ ಹಿಡಿಯಿತು | ಕೋಟಿ ಗೆದ್ದರೂ ಇಲ್ಲೊಬ್ಬ ಹೆಂಡತಿಯಿಂದ ಮುಚ್ಚಿಟ್ಟ | ಯಾಕೆ ಗೊತ್ತಾ?
ಸತ್ಯವನ್ನು ಅದೆಷ್ಟೇ ರಹಸ್ಯವಾಗಿ ಬಚ್ಚಿಟ್ಟರು ಕೂಡ ಇಂದಲ್ಲದಿದ್ದರು ನಾಳೆಯದರೂ ಕೂಡ ಅದು ಹೊರ ಬರಲೇ ಬೇಕು. ಸುಳ್ಳಿನ ಸರಮಾಲೆಯಲ್ಲಿ ತಾತ್ಕಾಲಿಕವಾಗಿ ಜೀವಿಸಬಹುದಾಗಿದ್ದರೂ ಕೂಡ ಅದರ ಜೀವಿತಾವಧಿ ಅಲ್ಪ ಕಾಲ ಮಾತ್ರ ಎಂಬ ಸತ್ಯವನ್ನು ಅರಿತವರು ಎಲ್ಲೆ ಹೋದರೂ ನಿಶ್ಚಿಂತರಾಗಿರಬಹುದು.
ಚೀನಾದಲ್ಲಿ ವ್ಯಕ್ತಿಯೊಬ್ಬ 30 ಮಿಲಿಯನ್ ಡಾಲರ್ (248 ಕೋಟಿ ರೂ) ಲಾಟರಿ ಗೆದ್ದಿದ್ದು, ಈ ಸಂತೋಷದ ಸಂಗತಿ ಯನ್ನು ಹೆಂಡತಿಯಿಂದ ಮರೆಮಾಚಿ ಇಕ್ಕಟ್ಟಿಗೆ ಸಿಲುಕಿದ ಘಟನೆಯೊಂದು ನಡೆದಿದೆ.
ಲಾಟರಿ ಗೆದ್ದು ಅದನ್ನು ಹೆಂಡತಿಗೆ ಹೇಳದೆ ರಹಸ್ಯ ಕಾಪಾಡಿಕೊಂಡಿದ್ದು, ಆದರೆ ಇದೀಗ ಈ ವರದಿ ಮಾಧ್ಯಮದ ಮೂಲಕ ಜಗಜ್ಜಾಹೀರಾಗಿ ಹೆಂಡತಿಯ ಕೋಪಕ್ಕೆ ಕಾರಣವಾಗಿದ್ದಾನೆ.
ಚೀನಾದ ಗುವಾಂಗ್ಸಿ ಝೂವಾಂಗ್ ಪ್ರದೇಶದ ವ್ಯಕ್ತಿಯೊಬ್ಬರಿಗೆ 248 ಕೋಟಿ ರೂ. ಮೊತ್ತದ (30 ಮಿಲಿಯನ್ ಡಾಲರ್) ಬಂಪರ್ ಲಾಟರಿ ಹೊಡೆದಿದೆ. ಇಷ್ಟೊಂದು ದೊಡ್ಡ ಮೊತ್ತದ ಲಾಟರಿ ಗೆದ್ದರೂ ಆ ಬಗ್ಗೆ ಪತ್ನಿಗೆ ತಿಳಿಸದೇ ವಿಷಯವನ್ನು ಮರೆ ಮರೆ ಮಾಚಿ ರಹಸ್ಯ ಕಾಯ್ದುಕೊಂಡು ಬಂದಿದ್ದು, ಕುತೂಹಲ ಮೂಡಿಸಿದೆ.
ಚೀನಾದ ಸ್ವಾಯತ್ತ ಪ್ರದೇಶವಾದ ಝೂವಾಂಗ್ ಪ್ರಾಂತ್ಯದ ಲೀ ಕಳೆದ ಒಂದು ದಶಕದಿಂದ ಲಾಟರಿ ಖರೀದಿಸುವುದನ್ನು ಹವ್ಯಾಸ ಮಾಡಿಕೊಂಡಿದ್ದಾರೆ. ಹಲವು ವರ್ಷಗಳಿಂದ ಪ್ರತಿ ಬಾರಿಯೂ ಏಳು ಸಂಖ್ಯೆಗಳ ಟಿಕೆಟ್ ಖರೀದಿ ಮಾಡುತ್ತಿದ್ದರು.
ಇತ್ತೀಚಿಗೆ 80 ಯನ್ (11 ಡಾಲರ್) ನೀಡಿ 40 ಟಿಕೆಟ್ ಕೊಂಡುಕೊಂಡಿದ್ದ ಲೀಗೆ ಅದೃಷ್ಟ ಲಕ್ಷ್ಮಿ ಕೈ ಹಿಡಿದಿದ್ದಾಳೆ. ಹತ್ತು ವರ್ಷಗಳ ಪ್ರಯತ್ನದ ಫಲವಾಗಿ ಈ ಬಾರಿ ಗ್ರ್ಯಾಂಡ್ ಫ್ರೈಜ್ ಒಲಿದು ಬಂದಿದೆ. ಆದರೂ ಈ ವಿಚಾರವನ್ನು ಲೀ ಮನೆಯಲ್ಲಿ ಬಹಿರಂಗ ಪಡಿಸದೇ ಗೌಪ್ಯವಾಗಿ ಇಟ್ಟಿದ್ದಾರೆ.
ಬಂಪರ್ ಬಹುಮಾನ ಪಡೆದ ಲೀ ಸುಮಾರು 5 ಮಿಲಿಯನ್ ಯನ್ ಹಣವನ್ನು ದಾನವಾಗಿ ನೀಡಿದ್ದರ ಕುರಿತಾಗಿ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿತ್ತು. ಅ. 24ರಂದು ಲಾಟರಿಯಲ್ಲಿ ಬಂದ ಹಣವನ್ನು ಲೀ ಸ್ವೀಕರಿಸಿದ್ದು, ಸರಕಾರಿ ತೆರಿಗೆ, ದಾನವಾಗಿ ನೀಡಿದ ಹಣ ಬಿಟ್ಟು ಉಳಿದ 24 ಮಿಲಿಯನ್ ಡಾಲರ್ ಹಣವನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂಬ ವಿಚಾರ ಕೂಡ ಪತ್ರಿಕೆ ಯಲ್ಲಿ ಪ್ರಕಟವಾಗಿದೆ.
ಮನೆಯಲ್ಲಿ ವಿಚಾರ ತಿಳಿಸದೇ ಇರುವುದಕ್ಕೆ ಕಾರಣವೇನು ಎಂಬ ವಿಷಯ ಕುತೂಹಲಕ್ಕೆ ಕಾರಣವಾಗಿದೆ. ”ಲಾಟರಿಯಲ್ಲಿ ಕೋಟಿ ಹಣ ಬಂದಿರುವುದು ತಿಳಿದರೆ ಹೆಂಡತಿ, ಮಕ್ಕಳು ಸೋಮಾರಿಗಳಾಗುತ್ತಾರೆ,” ಎಂಬ ಕಾರಣಕ್ಕೆ ಮನೆಯವರಿಂದ ವಿಷಯ ಮುಚ್ಚಿಟ್ಟಿರುವುದಾಗಿ ಲೀ ಹೇಳಿಕೊಂಡಿದ್ದು, ಹೆಂಡತಿ ಮತ್ತು ಮಕ್ಕಳು ಬೇರೆ ಜನರಿಗಿಂತ ತಾವು ಬಹಳ ದೊಡ್ಡವರು ಎಂಬ ಭಾವನೆಯಿಂದ ಮೆರೆಯಬಾರದು ಎಂಬ ಸದ್ದುದ್ದೇಶದಿಂದ ಲೀ ವಿಷಯವನ್ನು ಮುಚ್ಚಿಟ್ಟಿದ್ದಾರೆ.
ಹಾಗೆಯೇ ಭವಿಷ್ಯದಲ್ಲಿ ಕಷ್ಟಪಟ್ಟು ಕೆಲಸ ಮಾಡುವ ಹಾಗೂ ಓದಲು ಹಣ ಎಂಬ ಅಸ್ತ್ರ ಹಿನ್ನಡೆಯಾಗಬಹುದು ಎಂಬ ಕಾರಣ ಮುಂದಿಟ್ಟುಕೊಂಡು ಬಹುಮಾನವಾಗಿ ಬಂದ ಹಣದಲ್ಲಿ ಮತ್ತೊಬ್ಬರಿಗೆ ಉಪಕಾರ ಮಾಡುವ ಜೊತೆಗೆ ಉಳಿದ ಹಣವನ್ನು ತಮ್ಮ ಮನೆಯ ಜವಾಬ್ದಾರಿಗೆ ಮೀಸಲಿಟ್ಟಿದ್ದಾರೆ.
ಲಾಟರಿ ಹೊಡೆದಾಗ ಇಡೀ ಊರಿಗೆ ಡಂಗುರ ಸಾರಿಕೊಂಡು ನಾವೇನು ಕಡಿಮೆಯಿಲ್ಲ..ನಮ್ಮ ಅದೃಷ್ಟದ ಬಗ್ಗೆ ನವಿರಾದ ಕಥೆ ಹೆಣೆಯುವವರ ನಡುವೆ ಲೀ ನಡೆ ವಿಭಿನ್ನವಾಗಿದ್ದು, ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎಂಬ ಮಾತಿಗೆ ತದ್ವಿರುದ್ದವಾಗಿ ತಮ್ಮ ಮನೆಯವರು ಕೂಡ ಶ್ರಮಿಕ ರಾಗಬೇಕು. ಹಣದ ಹಿಂದೆ ಬೀಳಬಾರದು ಎಂಬ ಉದ್ದೇಶ ನಿಜಕ್ಕೂ ಶ್ಲಾಘನೀಯ.