IRCTC : ರಾತ್ರಿ ರೈಲು ಪ್ರಯಾಣ | ಹೊಸ ಗೈಡ್ ಲೈನ್ಸ್ ಬಿಡುಗಡೆ ಮಾಡಿದ ಐಆರ್ ಸಿಟಿಸಿ!!!
ದೂರದ ಪ್ರಯಾಣ ಸ್ವಲ್ಪ ಕಷ್ಟಕರ ಅದರಲ್ಲೂ ರಾತ್ರಿ ಹೊತ್ತು ರೈಲು ಪ್ರಯಾಣ ತುಂಬಾ ಕಿರಿಕಿರಿ ಅನಿಸುತ್ತೆ. ಅಂದರೆ ಕೆಲವರು ಬೇಕು ಬೇಕಂತಲೇ ಪ್ರಯಾಣಿಕರು ಜೋರಾಗಿ ಹರಟೆ ಹೊಡೆಯುವುದು, ಹಾಡು ಕೇಳುವುದು ತೀರಾ ಸಾಮಾನ್ಯ. ರಾತ್ರಿ 10 ಗಂಟೆಗೆ ಅನೇಕರು ಮಲಗಿದ ಬಳಿಕವೂ ಕೆಲವರು ಗಲಾಟೆ ನಿಲ್ಲಿಸುವುದಿಲ್ಲ. ರೈಲ್ವೆ ಸಿಬ್ಬಂದಿಯೂ ರಾತ್ರಿಯ ಹೊತ್ತು ಶಬ್ದ ಮಾಡುತ್ತಿರುತ್ತಾರೆ. ಇದರಿಂದಾಗಿ ಉಳಿದ ಪ್ರಯಾಣಿಕರಿಗೆ ತೊಂದರೆ ಉಂಟಾಗುವುದು ಸಹಜ. ಇದರ ಪ್ರಯುಕ್ತ ರಾತ್ರಿಯ ಹೊತ್ತು ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ಐಆರ್‌ಸಿಟಿಸಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸ್ಲೀಪರ್ ಕೋಚ್‌ನಲ್ಲಿ ರಾತ್ರಿಯ ಹೊತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಈ ಮಾರ್ಗಸೂಚಿ ರೂಪಿಸಲಾಗಿದ್ದು, ಯಾರಾದರೂ ನಿಯಮ ಮುರಿದರೆ ಗಂಭೀರ ಪರಿಣಾಮ ಎದುರಿಸಬೇಕಾಗಬಹುದು.
ಈಗಾಗಲೇ ಕಳೆದ ವರ್ಷವೇ ರೈಲ್ವೆ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. ಈಗ ಸರ್ಕಾರ ಈ ಮಾರ್ಗಸೂಚಿಗೆ ಇನ್ನಷ್ಟು ಅಂಶಗಳನ್ನು ಸೇರಿಸಿದೆ. ರಾತ್ರಿಯ ಹೊತ್ತು ಪ್ರಯಾಣಿಕರು ಮೊಬೈಲ್‌ನಲ್ಲಿ ಗಟ್ಟಿ ಧ್ವನಿಯಲ್ಲಿ ಮಾತನಾಡುವಂತಿಲ್ಲ. ಜೋರಾಗಿ ಸಂಗೀತ ಹಾಕುವಂತಿಲ್ಲ. ಸಹ ಪ್ರಯಾಣಿಕರ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಐಆರ್‌ಸಿಟಿಸಿಯ ಹೊಸ ಮಾರ್ಗಸೂಚಿಯ ಪ್ರಕಾರ ಕೆಲವು ಅಂಶಗಳಿವೆ:
• ರಾತ್ರಿ 10 ಗಂಟೆಯ ನಂತರ ಟಿಟಿ ಪರೀಕ್ಷಕರು ಟಿಕೆಟ್ ಪರಿಶೀಲನೆ ನಡೆಸುವಂತಿಲ್ಲ.
• 10 ಗಂಟೆಯ ನಂತರ ಬಂದ ಪ್ರಯಾಣಿಕರ ಟಿಕೆಟ್ ಅನ್ನು ಪರೀಕ್ಷಿಸಬಹುದಷ್ಟೇ. ಒಂದು ಕೋಚ್‌ನ ಮಧ್ಯದ ಬರ್ತ್‌ನ ಪ್ರಯಾಣಿಕರು ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಅವರ ಬೆಡ್‌ನಲ್ಲಿ ಮಲಗಲು ಅವಕಾಶ ಇರುತ್ತದೆ.
• ಒಂದು ವೇಳೆ ರೈಲು ಸೀಟು ಬುಕ್ ಮಾಡಿದ ವ್ಯಕ್ತಿಗಳು ಬಂದಿಲ್ಲದೇ ಹೋದಲ್ಲಿ ಅವರ ಸೀಟಲ್ಲಿ ಬೇರೊಬ್ಬರು ತತ್‌ಕ್ಷಣವೇ ಕೂರಲು ಬರುವಂತಿಲ್ಲ. ಆ ವ್ಯಕ್ತಿ ಬರಬೇಕಿದ್ದ ಸಮಯದಿಂದ ಒಂದು ಗಂಟೆ ಬಳಿಕ ಅಥವಾ 2 ನಿಲ್ದಾಣಗಳ ಬಳಿಕ ಟಿಟಿಇ ಆ ಸೀಟನ್ನು ಬೇರೊಬ್ಬರಿಗೆ ಅಲಾಟ್ ಮಾಡಬಹುದು.
• ರಾತ್ರಿ 10 ಗಂಟೆಯ ನಂತರ ಬೋಗಿಯಲ್ಲಿ ಲೈಟ್ ಆಫ್ ಮಾಡಬೇಕೆಂಬ ನಿಯಮವು ಇದೆ. ಬಹಳ ಜನರು ಇದನ್ನು ಪಾಲಿಸುವುದಿಲ್ಲ.
• ರೈಲು ಪ್ರಯಾಣಿಕರು ಹಾಡು ಕೇಳಬೇಕೆಂದರೆ ಹೆಡ್‌ಫೋನ್ ಬಳಸಬಹುದು. ಅದು ಬಿಟ್ಟು ಲೌಡ್ ಸ್ಪೀಕರ್‌ನಲ್ಲಿ ಹಾಡು ಕೇಳಿ ಇನ್ನೊಬ್ಬರಿಗೆ ತೊಂದರೆ ನೀಡುವುದು ಸರಿಯಲ್ಲ.
ಮಾರ್ಗಸೂಚಿ ಸರಿಯಾಗಿ ಪಾಲನೆ ಆಗುತ್ತಿದೆಯಾ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಅಥವಾ ಪ್ರಯಾಣಿಕರು ನೀಡುವ ದೂರಿನ ಮೇಲೆ ಕ್ರಮ ಕೈಗೊಳ್ಳುವುದು ರೈಲಿನಲ್ಲಿರುವ ಸಿಬ್ಬಂದಿಯ ಹೊಣೆಗಾರಿಕೆ ಆಗಿರುತ್ತದೆ.
ಈ ಮೇಲಿನ ಅನೇಕ ದೂರುಗಳನ್ನು ಆಧರಿಸಿ ರೈಲ್ವೆ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಪ್ರಯಾಣಿಕರು ಈ ನಿಯಮಗಳ ಪಾಲನೆ ಮಾಡದೇ ಇದ್ದಲ್ಲಿ ಅವರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಲಾಗುವುದೆಂದು ಎಚ್ಚರಿಸಲಾಗಿದೆ.