ಮಲ್ಲಿಕಾರ್ಜುನ ಖರ್ಗೆಗೆ ಇಂದು ಪಟ್ಟಾಭಿಷೇಕ !!!

Share the Article

ಅಧ್ಯಕ್ಷ ಸ್ಥಾನಕ್ಕೆ ಅ.17 ರಂದು ನಡೆದ ಚುನಾವಣೆಯಲ್ಲಿ ಖರ್ಗೆ 6800 ಹೆಚ್ಚು ಮತಗಳ ಅಂತರದಿಂದ ಶಶಿ ತರೂರ್‌ ಅವರನ್ನು ಸೋಲಿಸಿ ಆಯ್ಕೆಯಾಗಿದ್ದು, ಇಂದು ಅಧಿಕಾರ ಸ್ವೀಕಾರ ಮಾಡಲಿದ್ದಾರೆ.

ಸುಮಾರು 5 ದಶಕಗಳ ಬಳಿಕ ಕನ್ನಡಿಗರೊಬ್ಬರಿಗೆ ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷವಾದ ಕಾಂಗ್ರೆಸ್‌ನ ನೇತೃತ್ವ ಪಡೆಯಲಿರುವ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ (80) ಎಐಸಿಸಿ ಅಧ್ಯಕ್ಷರಾಗಿ ಇಂದು(ಬುಧವಾರ) ನವದೆಹಲಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.

ಈ ಮೂಲಕ 24 ವರ್ಷಗಳ ಬಳಿಕ ಪಕ್ಷದ ಚುಕ್ಕಾಣಿ ಗಾಂಧಿ ಕುಟುಂಬೇತರ ವ್ಯಕ್ತಿಗೆ ಒಲಿದು ಬಂದಿದೆ. ಇದರ ಹೊರತಾಗಿ 1969ರಲ್ಲಿ ನಿಜಲಿಂಗಪ್ಪ ಅವರು ಕಾಂಗ್ರೆಸ್‌ ಅಧ್ಯಕ್ಷರಾಗಿದ್ದುದ್ದು ಎಲ್ಲರಿಗು ತಿಳಿದಿರುವ ವಿಚಾರ.

ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರಕ್ಕಾಗಿ ಎಐಸಿಸಿ ಕಚೇರಿಯಲ್ಲಿ ಭರ್ಜರಿ ಸಿದ್ಧತೆಗಳು ನಡೆದಿದ್ದು, ಬುಧವಾರದ ಕಾರ್ಯಕ್ರಮದಲ್ಲಿ ಸೋನಿಯಾ ಗಾಂಧಿ, ಭಾರತ್‌ ಜೋಡೋ ಯಾತ್ರೆ ಹಮ್ಮಿಕೊಂಡಿರುವ ರಾಹುಲ್‌ ಗಾಂಧಿ, ಪ್ರಿಯಾಂಕಾ ವಾದ್ರಾ ಸೇರಿದಂತೆ ಪಕ್ಷದ ಬಹುತೇಕ ಹಿರಿಯ ನಾಯಕರು ಭಾಗಿಯಾಗಲಿದ್ದಾರೆ.

ಬುಧವಾರ ಅಧಿಕಾರ ಸ್ವೀಕಾರಕ್ಕೂ ಮುನ್ನ ಖರ್ಗೆ, ಮಹಾತ್ಮಾ ಗಾಂಧಿ, ಜವಹರಲಾಲ್‌, ಲಾಲ್‌ ಬಹಾದ್ದೂರ್‌ ಶಾಸ್ತ್ರಿ, ರಾಜೀವ್‌ ಗಾಂಧಿ, ಜಗಜೀವನ್‌ರಾಮ್‌ ಅವರ ಸಮಾಧಿಸ್ಥಳಕ್ಕೆ ತೆರಳಿ ಪುಷ್ಪ ನಮನ ಸಲ್ಲಿಸುವ ಕಾರ್ಯಕ್ರಮ ನಡೆಯಲಿದೆ.

ಕಾಂಗ್ರೆಸ್‌ ಪಕ್ಷದ ಮುಖ್ಯ ಕಚೇರಿಯಲ್ಲಿ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭ ನಡೆಯಲಿದ್ದು, ಅಧ್ಯಕ್ಷರ ಚುನಾವಣೆ ನೇತೃತ್ವ ವಹಿಸಿದ್ದ ಮಧುಸೂದನ್‌ ಮಿಸ್ತ್ರಿ ಅವರು ಖರ್ಗೆ ಅವರಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪ್ರಮಾಣ ಪತ್ರ ವಿತರಿಸಲಿದ್ದಾರೆ.

2 ದಶಕಗಳಿಗೂ ಹೆಚ್ಚಿನ ಕಾಲ ಪಕ್ಷದ ಮುಂದಾಳತ್ವ ವಹಿಸಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಿಕೊಂಡು ಬಂದಿದ್ದ ಅಧ್ಯಕ್ಷೆ ಸೋನಿಯಾ ಗಾಂಧಿ ಇದೀಗ ಪಕ್ಷದ ಜವಾಬ್ದಾರಿಯನ್ನೂ ಖರ್ಗೆ ಅವರಿಗೆ ಹಸ್ತಾಂತರ ಮಾಡಲಿದ್ದಾರೆ. ಈ ನಡುವೆ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್‌ ಅವರನ್ನು ಭೇಟಿ ಮಾಡಿ ಮುಂದಿನ ಯೋಜನೆಗಳ ಕುರಿತು ಸಲಹೆಗಳನ್ನು ಪಡೆದಿದ್ದಾರೆ.

ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡುವ ಸಮಾರಂಭದಲ್ಲಿ ಪಾಲ್ಗೊಳ್ಳಲು ರಾಜ್ಯ ಕಾಂಗ್ರೆಸ್‌ನ ಪ್ರಮುಖ ನಾಯಕರು ದೆಹಲಿಗೆ ತೆರಳಲಿದ್ದಾರೆ.

ಸಿದ್ದರಾಮಯ್ಯ ಮಂಗಳವಾರವೇ ತೆರಳಿದ್ದು, ಬುಧವಾರ ಡಿ.ಕೆ.ಶಿವಕುಮಾರ್‌, ಬಿ.ಕೆ.ಹರಿಪ್ರಸಾದ್‌, ಸಲೀಂ ಅಹಮದ್‌, ಧ್ರುವನಾರಾಯಣ, ರಾಮಲಿಂಗಾರೆಡ್ಡಿ, ಈಶ್ವರ ಖಂಡ್ರೆ, ಎಂ.ಬಿ.ಪಾಟೀಲ್‌ ಮುಂತಾದವರು ತೆರಳಲಿದ್ದಾರೆ.

ಚುನಾವಣಾ ರಣರಂಗದಲ್ಲಿ ದೊಡ್ದ ಮಟ್ಟದಲ್ಲಿ ಪೈಪೋಟಿ ನೀಡುತ್ತಿರುವ ಬಿಜೆಪಿ ಮುಂದೆ ಕಾಂಗ್ರೆಸ್‌ ತನ್ನ ಶಕ್ತಿ ಪ್ರದರ್ಶನ ಮಾಡಬೇಕಿದ್ದು, ಅತ್ಯಂತ ಸಂಕಷ್ಟ ಎದುರಿಸುತ್ತಿರುವ ಹೊತ್ತಿನಲ್ಲೇ ಖರ್ಗೆ ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿ ಕಾಂಗ್ರೆಸ್ ಪಕ್ಷದ ರಥವನ್ನು ಮುನ್ನಡೆಸಬೇಕಾಗಿದೆ.

ಆಂತರಿಕವಾಗಿ ಪಕ್ಷವನ್ನು ಬಲಗೊಳಿಸುವ ಒಳಜಗಳ ಗಳಿಗೆ ಬ್ರೇಕ್‌ ನೀಡಿ ತಾವು ಗಾಂಧಿ ಕುಟುಂಬದ ರಬ್ಬರ್‌ ಸ್ಟಾಂಪ್‌ ಅಲ್ಲ ಎಂದು ಸಾಬೀತುಪಡಿಸಬೇಕಾದ ಅನಿವಾರ್ಯತೆ ಹಾಗೂ ಸವಾಲು ಅವರ ಮುಂದಿದೆ.

ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬ ನೀತಿ ಕಟ್ಟುನಿಟ್ಟು ಜಾರಿ ಮೊದಲಾದ ಆಂತರಿಕ ಸವಾಲುಗಳ ಜೊತೆ, ಮೋದಿ ನೇತೃತ್ವದ ಬಿಜೆಪಿಗೆ ಸಡ್ಡು ಹೊಡೆಯಲು ಕಾರ್ಯತಂತ್ರ, ಹಿಂದಿನ ಮಿತ್ರಪಕ್ಷಗಳ ಜೊತೆ ಮರು ಹೊಂದಾಣಿಕೆ ಮೊದಲಾದ ಸವಾಲುಗಳು ಖರ್ಗೆ ಮುಂದಿದೆ.

ವರ್ಷಾಂತ್ಯಕ್ಕೆ ಹಿಮಾಚಲ ಪ್ರದೇಶ, ಗುಜರಾತ್‌ ವಿಧಾನಸಭಾ ಚುನಾವಣೆ ಮತ್ತು ಮುಂದಿನ ವರ್ಷ ತವರು ರಾಜ್ಯ ಕರ್ನಾಟಕ ಸೇರಿದಂತೆ ನಡೆಯುವ 9 ರಾಜ್ಯಗಳ ವಿಧಾನಸಭಾ ಚುನಾವಣೆ, 2024ರ ಲೋಕಸಭಾ ಚುನಾವಣೆ ಖರ್ಗೆಗೆ ದೊಡ್ದ ಮಟ್ಟದ ಸವಾಲಾಗಿದ್ದು ಹೇಗೆ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ.

Leave A Reply