Kantara : ಕಾಂತಾರ ಸಿನಿಮಾದ ಧರ್ಮದ ವಿವಾದ : ನಟ ಕಿಶೋರ್ ಹೇಳಿದ್ದೇನು?
ಕಾಂತಾರ (Kantara) ಸಿನಿಮಾ ಅಂದಾಗ ಗೊತ್ತಿಲ್ಲದವರು ಇಲ್ಲ. ಕಾಂತಾರ ಎಂದಾಗ ದೈವದ ನೆನಪಾಗುವಷ್ಟು ಪ್ರಸಿದ್ಧಿ ಪಡೆದಿದೆ. ಅಲ್ಲದೆ ವಿಶ್ವದ ಎಲ್ಲೆಡೆ ಖ್ಯಾತಿ ಗಳಿಸಿದೆ. ಭಾರತ ಚಿತ್ರರಂಗದಲ್ಲಿಯೇ ಅದ್ಭುತವಾಗಿ ಹೊರಹೊಮ್ಮಿರುವ ರಿಷಬ್ ಶೆಟ್ಟಿ ಅವರ ಸಿನಿಮಾಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಬಂದಿರುವ ಹಾಗೆಯೇ ಕಾಲೆಳೆಯೋ ಕೆಲಸ ಕೂಡಾ ನಡೆದಿದೆ ಎಂಬ ವಿಚಾರ ಈಗಾಗಲೇ ತಿಳಿದಿರಬಹುದು.
ಸಿನಿಮಾದ ಹಾಡಿನ ಕುರಿತು ಈಗಾಗಲೇ ವಿವಾದ ಎದ್ದಿದ್ದು ಈಗ ಧರ್ಮದ ಬಣ್ಣದಲ್ಲಿ ಸಿನಿಮಾ ಚರ್ಚೆ ನಡೆಯುತ್ತಿದೆ. ಸಿನಿಮಾಗೆ ಧರ್ಮದ ಬಣ್ಣ ಬಳಿದು ಈ ಕುರಿತು ಕಳೆದ ಕೆಲವು ದಿನಗಳಿಂದ ಭಾರೀ ಚರ್ಚೆ ಮಾಡಲಾಗುತ್ತಿದೆ. ಈ ಬಗ್ಗೆ ನಟ ಉಪೇಂದ್ರ ಕೂಡಾ ಪ್ರತಿಕ್ರಿಯಿಸಿದ್ದಾರೆ.
ಈಗಾಗಲೇ ಕಾಂತಾರ ಸಿನಿಮಾ ಬಗ್ಗೆ ಇತ್ತೀಚೆಗೆ ಟ್ವೀಟ್ ಮಾಡಿದ್ದ ನಟ ಚೇತನ್ ಅವರು ಸಿನಿಮಾವನ್ನು ಹೊಗಳಿ ನಂತರ ಧರ್ಮದ ಬಗ್ಗೆ ಮಾತನಾಡಿದ್ದಾರೆ. ನಮ್ಮ ಕನ್ನಡದ ಕಾಂತಾರವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿಯ ಸಂಗತಿ. ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ. ಇದು ನಿಜವಲ್ಲ. ನಮ್ಮ ಪಂಬದ/ ನಕಲಿ/ಪರವರ ಬಹುಜನ ಸಂಪ್ರದಾಯಗಳು ವೈದಿಕ ಬ್ರಾಹ್ಮಣ್ಯದ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು. ಮೂಲ ನಿವಾಸಿ ಸಂಸ್ಕೃತಿಗಳನ್ನು ಪರದೆಯ ಮೇಲೆಯಾಗಲಿ, ಅದರಾಚೆಯಾಗಲಿ ಸತ್ಯ ಸಂಗತಿಗಳೊಂದಿಗೆ ತೋರಿಸಬೇಕೆಂದು ನಾವು ಕೇಳುತ್ತೇವೆ’ ಎಂದು ಟ್ವೀಟ್ ಮಾಡಿದ್ದರು.
ವಿವಾದಾತ್ಮಕ ಹೇಳಿಕೆ ಕೊಟ್ಟ ನಟ ಚೇತನ್ ವಿರುದ್ಧ ಮಂಗಳೂರು ಹಾಗೂ ಬೆಂಗಳೂರಿನಲ್ಲಿಯೂ ಕೇಸ್ ದಾಖಲಾಗಿದೆ. ಈ ಬಗ್ಗೆ ಉಪೇಂದ್ರ ಅವರು ಮಾತನಾಡಿ ಇಂಥಹ ವಿಚಾರಗಳನ್ನು ಇಗ್ನೋರ್ ಮಾಡಬೇಕು. ಇದನ್ನು ಮಾತನಾಡಿದಷ್ಟೂ ಅದು ಬೆಳೆಯುತ್ತದೆ ಎಂದಿದ್ದರು.
ಆದರೆ ಈಗ ನಟ ಕಿಶೋರ್ ಪ್ರತಿಕ್ರಿಯಿಸಿದ್ದಾರೆ.
ನಟ ಕಿಶೋರ್ ಈಗ ನಡೆಯುತ್ತಿರೋ ವಿವಾದದ ಬಗ್ಗೆ ಪ್ರತಿಕ್ರಿಯಿಸಿ ಇನ್ಸ್ಟಾಗ್ರಾಮ್ ಪೋಸ್ಟ್ ಹಾಕಿದ್ದು ಈ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ.
ಕಾಂತಾರ ಮತ್ತು ಧರ್ಮ ನಮ್ಮ ಜನಪದೀಯರ ಕೋಲದ ಭೂತಕ್ಕೂ, ನೇಮದ ದೈವಕ್ಕೂ ಧರ್ಮದ ಬಣ್ಣ ಬಳಿಯುತ್ತಿರುವವರಲ್ಸಿ ಕಳಕಳಿಯ ಮನವಿ . ಅದೇ ದೈವದ ವೇಷ ಧರಿಸುವವನನ್ನು ಅಸ್ಪೃಷ್ಯನೆಂದು ಮನೆಯೊಳಗೆ ಸೇರಿಸದ, ಮನೆಯೊಳಗೆ ಬಂದರೆ ಶುದ್ಧಿ ಮಾಡಿಸುವ ಅಸ್ಪೃಷ್ಯತೆಯ ಆಚರಣೆಯಲ್ಲಿ ನಮಗೆ ಅಧರ್ಮದ ಬಣ್ಣ ಕಾಣುತ್ತಿಲ್ಲವೇಕೆ? ಜನರಿಗಾಗಿ ಬಾಂಬು ಸಿಡಿಸಿ ಜೀವತೆತ್ತ ಗರ್ನಾಲು ಸಾಹೇಬನ ಧರ್ಮ ಕಾಣುತ್ತಿಲ್ಲವೇಕೆ?
ಎಲ್ಲ ಒಳ್ಳೆಯ ಸಿನಿಮಾಗಳಂತೆ “ಕಾಂತಾರ” ಜಾತಿ, ಧರ್ಮ, ಭಾಷೆಗಳನ್ನು ಮೀರಿ ದೇಶದ ಜನಗಳನ್ನು ಬೆಸೆಯುತ್ತಿದೆ. ಮನರಂಜನೆಯ ಮೂಲಕವೇ ಹಲವು ಸಾಮಾಜಿಕ ಸಮಸ್ಯೆಗಳ ಬಗ್ಗೆ ಜನರನ್ನು ಜಾಗೃತಗೊಳಿಸುತ್ತಿದೆ. ಅಂಥ ಸಿನಿಮಾವನ್ನು ಬಳಸಿ ಮೂಢನಂಬಿಕೆಯನ್ನೊ ಧರ್ಮಾಂಧತೆಯನ್ನೊ ಪ್ರಚೋದಿಸಿ ಜನಗಳನ್ನು ವಿಭಜಿಸುವ ಮಟ್ಟಕ್ಕೆ ಇಳಿದು ಬಿಟ್ಟರೆ ಇಂಥಾ ದೊಡ್ಡ ಗೆಲುವೂ ಮನುಷ್ಯತ್ವದ ದೊಡ್ಡ ಸೋಲಾಗಿಹೋದೀತು. ಕೇವಲ ಓಟಿಗಾಗಿ ಪಟೇಲ್ ಗಾಂಧಿ ಬೋಸ್ ನೆಹ್ರೂ ಸಹಿತ ಕೋಟಿ ಕೋಟಿ ಸ್ವತಂತ್ರ್ಯ ಹೋರಾಟಗಾರರನ್ನೂ ಬಳಸುವ, ಬೈಯ್ಯುವ.. ರಾಷ್ಟ್ರ ಗೀತೆ, ಧ್ವಜ,ಲಾಂಛನ, ಕವಿಗಳನ್ನೂ ಬಿಡದೆ ಕಬಳಿಸಿದ ದ್ವೇಷದ ದಲ್ಲಾಳಿಗಳು ಸಿನಿಮಾಗಳನ್ನೂ ಕಬಳಿಸುವ ಮುನ್ನಒಂದು ಕ್ಷಣ ಯೋಚಿಸಿ. ನಮ್ಮ ಸಿನಿಮಾಗಳು ನಮ್ಮ ಹೆಮ್ಮೆ. ಅವುಗಳನ್ನು ಧರ್ಮಾಂಧ ರಾಜಕಾರಣದ ದಾಳಗಳಾಗುವುದು ಬೇಡ ಎಂದು ಅವರು ಬರೆದಿದ್ದಾರೆ.