SHOCKING NEWS: ಡೆಂಗ್ಯೂ ರೋಗಿಗೆ ರಕ್ತದ ‘ಪ್ಲಾಸ್ಮಾ’ ಬದಲು ಮೊಸಂಬಿ ಜ್ಯೂಸ್’ ಡ್ರಿಪ್ ಹಾಕಿದ ಆಸ್ಪತ್ರೆ | ರೋಗಿ ಸಾವು , ಆಸ್ಪತ್ರೆ ಸೀಲ್
ಯಾವುದೇ ಸಮಸ್ಯೆ ಎದುರಾದರೂ ಮೊದಲು ವೈದ್ಯರನ್ನು ಭೇಟಿಯಾಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುವುದು ಸಹಜ. ವೈದ್ಯರು ಏನೇ ಸಲಹೆ ಸೂಚನೆಗಳನ್ನು ನೀಡಿದರು ಕೂಡ ಕಣ್ಮುಚ್ಚಿ ಅವರು ಹೇಳಿದನ್ನು ಶಿರಸಾ ಪಾಲಿಸುವ ಪ್ರಮೇಯ ಹೆಚ್ಚಿನವರಿಗೆ ಇದೆ.
ಏಕೆಂದರೆ ಪ್ರತಿಯೊಬ್ಬರಿಗೂ ಆರೋಗ್ಯವೇ ಮುಖ್ಯ. ಆದರೆ, ಜನರು ನಂಬಿ ಸೇವೆ ಪಡೆಯುವ ಆಸ್ಪತ್ರೆಯಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ ಜನರ ಜೀವಕ್ಕೆ ಕುತ್ತು ಬರುವುದರಲ್ಲಿ ಸಂಶಯವಿಲ್ಲ.
ಡೆಂಘೀ ರೋಗಿಗೆ ರಕ್ತದ ಪ್ಲೇಟ್ಲೆಟ್ ನೀಡುವ ಬದಲಿಗೆ ಹಣ್ಣಿನ ರಸವನ್ನು ವರ್ಗಾಯಿಸಿದ ಆರೋಪದ ಮೇಲೆ ಉತ್ತರಪ್ರದೇಶದ ಖಾಸಗಿ ಆಸ್ಪತ್ರೆಯೊಂದನ್ನು ಸೀಲ್ ಮಾಡಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ಪ್ಲೇಟ್ಲೆಟ್ಗಳನ್ನು ಬೇರೆ ಕಡೆಯಿಂದ ತರಿಸಿ ನೀಡಲಾಗುತ್ತಿತ್ತು ಎಂದು ತಿಳಿದು ಬಂದಿದೆ. ರಕ್ತದ ಪ್ಲೇಟ್ಲೆಟ್ ನೀಡುವ ಬದಲಿಗೆ ಹಣ್ಣಿನ ರಸವನ್ನು ವರ್ಗಾಯಿಸಿದ ಘಟನೆ ನಡೆದಿದ್ದು, ಇದರ ಕುರಿತಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದರಿಂದ ಜಿಲ್ಲಾಡಳಿತವು ಕ್ರಮ ಕೈಗೊಂಡಿದೆ.
ಡೆಂಘೀಯಿಂದ ಬಳಲುತ್ತಿದ್ದ ಪ್ರದೀಪ್ ಪಾಂಡೆ ಅವರನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಅವರ ಪರಿಸ್ಥಿತಿ ಮತ್ತಷ್ಟು ಹದೆಗೆಟ್ಟಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಯಾವುದೇ ಎಫ್ಐಆರ್ ಕೂಡ ದಾಖಲಾಗಿಲ್ಲ ಎಂಬುದು ಅಚ್ಚರಿಯ ಜೊತೆಗೆ ಅನುಮಾನ ಹುಟ್ಟುಹಾಕಿದೆ.
ಆದರೆ, ಆಸ್ಪತ್ರೆಯ ಮೂಲಗಳು ರೋಗಿ ಪ್ರದೀಪ್ ಪಾಂಡೆ ಎಂಬುವವರ ಪ್ಲೇಟ್ಲೆಟ್ಗಳ ಮಟ್ಟ 17,000 ಕ್ಕೆ ಇಳಿದಿದ್ದರಿಂದ ಅವರ ಸಂಬಂಧಿಕರಿಗೆ ರಕ್ತದ ಪ್ಲೇಟ್ಲೆಟ್ ವ್ಯವಸ್ಥೆ ಮಾಡಲು ಕೇಳಲಾಗಿತ್ತು ಎಂದು ಆಸ್ಪತ್ರೆಯ ಮಾಲೀಕ ಸೌರಭ್ ಮಿಶ್ರಾ ಹೇಳಿದ್ದಾರೆ .
ಇದಲ್ಲದೆ, ಎಸ್ಆರ್ಎನ್ ಆಸ್ಪತ್ರೆಯಿಂದ ಐದು ಯೂನಿಟ್ ಪ್ಲೇಟ್ಲೆಟ್ಗಳನ್ನು ತಂದು ಕೊಟ್ಟಿದ್ದು, ಮೂರು ಯೂನಿಟ್ಗಳ ವರ್ಗಾವಣೆವರೆಗೂ ರೋಗಿ ಪ್ರತಿಕ್ರಿಯಿಸುತ್ತಲೇ ಇದ್ದುದ್ದಾಗಿ ತಿಳಿಸಿದ್ದಾರೆ. ಹಾಗಾಗಿ, ಪ್ಲೇಟ್ಲೆಟ್ ಯೂನಿಟ್ ನೀಡುವುದನ್ನು ನಿಲ್ಲಿಸಿರುವುದಾಗಿ ಮಿಶ್ರಾ ಸ್ಪಷ್ಟನೆ ನೀಡಿದ್ದಾರೆ.
ಪ್ಲೇಟ್ಲೆಟ್ಗಳ ಮೇಲೆ ಎಸ್ಆರ್ಎನ್ ಆಸ್ಪತ್ರೆಯ ಸ್ಟಿಕ್ಕರ್ ಇರುವುದರಿಂದ ಅವುಗಳ ಮೂಲವನ್ನು ಪರೀಕ್ಷಿಸಿ ಅವುಗಳ ಮೂಲವನ್ನು ಕಂಡು ಹಿಡಿಯಬೇಕೆಂದು ಕೂಡ ಮಿಶ್ರಾ ಹೇಳಿದ್ದಾರೆ. ಈ ಸಂಬಂಧ ಮಾತನಾಡಿರುವ ಡಿಸಿ ಸಂಜಯ್ ಕುಮಾರ್ ಖಾತ್ರಿ ಪ್ರಕರಣದ ತನಿಖೆ ನಡೆಯುತ್ತಿದ್ದು, ಪ್ಲೇಟ್ಲೆಟ್ಗಳನ್ನೂ ಸಹ ಪರೀಕ್ಷಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ , ಆಸ್ಪತ್ರೆಯಲ್ಲಿ ಡೆಂಘೀ ರೋಗಿಗೆ ಪ್ಲೇಟ್ಲೆಟ್ಗಳ ಬದಲಿಗೆ ಸಿಹಿ ನಿಂಬೆ ರಸವನ್ನು ತುಂಬಿಸಿದ ವೈರಲ್ ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು, ಅವರ ನಿರ್ದೇಶನದ ಮೇರೆಗೆ ಆಸ್ಪತ್ರೆಗೆ ಸೀಲ್ ಮಾಡಲಾಗಿದೆ.
ಇದಲ್ಲದೆ, ಪ್ಲೇಟ್ಲೆಟ್ ಪ್ಯಾಕೆಟ್ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪ್ರಕರಣದಲ್ಲಿ ಆರೋಪ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ತಪ್ಪಿತಸ್ಥರೆಂದು ಕಂಡುಬಂದರೆ ಆಸ್ಪತ್ರೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಮೂಲಗಳು ಹೇಳುವ ಪ್ರಕಾರ, ಸರಿಹೊಂದದ ಪ್ಲೇಟ್ಲೆಟ್ಗಳ ವರ್ಗಾವಣೆಯಿಂದಾಗಿ ರೋಗಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಇದರ ಜೊತೆಗೆ ಮುಖ್ಯ ವೈದ್ಯಾಧಿಕಾರಿಯ ಸೂಚನೆಯ ಮೇರೆಗೆ ಆಸ್ಪತ್ರೆಯನ್ನು ಸೀಲ್ ಮಾಡಲಾಗಿದೆ ಎಂದು ಡಿಸಿಎಂ ಸ್ಪಷ್ಟನೆ ಕೂಡಾ ನೀಡಿದ್ದಾರೆ. ಈ ಪ್ರಕರಣ ಕುರಿತಾದ ಸಮಗ್ರ ತನಿಖೆಯ ಬಳಿಕವಷ್ಟೇ ಸತ್ಯ ಹೊರ ಬರಬೇಕಾಗಿದೆ.