ಹಿಂದೂಗಳ ಮಂಗಳ ಸೂತ್ರ ತೆಗೆಸಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ; ಬುರ್ಖಾ ಧರಿಸಿದ್ದ ಮಹಿಳೆಯರಿಗೆ ಅವಕಾಶ
ಕರ್ನಾಟಕದಲ್ಲಿ ಹಿಜಾಬ್ ಕುರಿತ ವಿವಾದ ಇನ್ನೂ ಇತ್ಯರ್ಥಗೊಂಡಿಲ್ಲ. ಹಿಜಾಬ್ ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಇಬ್ಬರು ನ್ಯಾಯಾಧೀಶರು ವಿಭಿನ್ನ ತೀರ್ಪು ನೀಡಿದ ಬಳಿಕ ಪ್ರಕರಣ ಮುಖ್ಯ ನ್ಯಾಯಮೂರ್ತಿಗಳ ಅಂಗಳಕ್ಕೆ
ಹೋಗಿದೆ. ಇದರ ಮಧ್ಯೆ ತೆಲಂಗಾಣದ ಪರೀಕ್ಷಾ
ಕೇಂದ್ರವೊಂದರಲ್ಲಿ ನಡೆದ ಘಟನೆಯೊಂದು ಈಗ ವಿವಾದಕ್ಕೆ ಕಾರಣವಾಗಿದೆ.
ಅಕ್ಟೋಬರ್ 16ರ ಭಾನುವಾರದಂದು ತೆಲಂಗಾಣ ರಾಜ್ಯ ಲೋಕಸೇವಾ ಆಯೋಗ ಗ್ರೂಪ್ ಒಂದು ಪೂರ್ವಭಾವಿ ಪರೀಕ್ಷೆ ನಡೆಸಿದ್ದು, ಅದಿಲಾಬಾದ್ ಪದವಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಲು ಬಂದಿದ್ದ ಹಿಂದೂ ಮಹಿಳೆಯರ ಕಿವಿಯೋಲೆ, ಬಳೆ, ಮಾತ್ರವಲ್ಲದೆ ಮಂಗಳಸೂತ್ರ ಕೂಡ ತೆಗೆದು ಪರೀಕ್ಷಾ ಕೇಂದ್ರ ಪ್ರವೇಶಿಸಲು ಸೂಚಿಸಲಾಗಿದೆ.
ಆದರೆ ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸಿಕೊಂಡು ಬಂದರೂ ಅವರಿಗೆ ಅವಕಾಶ ನೀಡಲಾಗಿದೆ ಎಂದು ದೂರಲಾಗಿದ್ದು, ಇದರ ವಿಡಿಯೋವನ್ನು ಬಿಜೆಪಿ ನಾಯಕಿ ಪ್ರೀತಿಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೆ ತೆಲಂಗಾಣ ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಆದರೆ ಈ ಆರೋಪವನ್ನು ತಳ್ಳಿ ಹಾಕಿರುವ ತೆಲಂಗಾಣ ರಾಷ್ಟ್ರ ಸಮಿತಿ ವಕ್ತಾರರು, ಬುರ್ಖಾ ಧರಿಸಿದ ಮಹಿಳೆಯರಿಗೂ ಸಂಪೂರ್ಣ ತಪಾಸಣೆ ನಡೆಸಿಯೇ ಪರೀಕ್ಷಾ ಕೇಂದ್ರಕ್ಕೆ ಬಿಡಲಾಗಿದೆ ಎಂದಿದ್ದಾರೆ. ಅಲ್ಲದೆ ಅವರು ಈ ಕುರಿತ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ. ಬಿಜೆಪಿ ಪ್ರಚಾರ ರಾಜಕೀಯ ಮಾಡುವ ಮೂಲಕ ಕೋಮು ಶಾಂತಿಯನ್ನು ಕದಡುತ್ತಿದೆ ಎಂದು ಟಿ ಆರ್ ಎಸ್ ನಾಯಕರು ಟೀಕಿಸಿದ್ದಾರೆ.