ಮುಕ್ಕೂರು : ಪ್ರಥಮ ವರ್ಷದ ಎಂ.ಪಿ.ಎಲ್ ಕ್ರಿಕೆಟ್ ಪಂದ್ಯಾಕೂಟ
ಮುಕ್ಕೂರು : ಮುಕ್ಕೂರು ಟೀಂ ಶೈನ್ ಇದರ ಆಶ್ರಯದಲ್ಲಿ ಮುಕ್ಕೂರು ಶಾಲಾ ವಠಾರದಲ್ಲಿ ರವಿವಾರ ನಡೆದ ಪ್ರಥಮ ವರ್ಷದ ಮುಕ್ಕೂರು ಪ್ರೀಮಿಯರ್ ಲೀಗ್ ಸೀಸನ್-1 (ಎಂಪಿಎಲ್) ಕ್ರಿಕೆಟ್ ಪಂದ್ಯಾಕೂಟದಲ್ಲಿ ಕೊನೆಯ ಎಸೆತದ ತನಕವು ಗೆಲುವು ಯಾರ ಪಾಲಾಗಬಹುದು ಅನ್ನುವ ರೋಚಕತೆಗೆ ಸಾಕ್ಷಿಯಾಗಿದ್ದ ಪೈನಲ್ ಪಂದ್ಯಾಟದಲ್ಲಿ ಅಂತಿಮವಾಗಿ ಕಾನಾವು ಶ್ರೀ ವಾರಿಯರ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತು.
ಅಂತಿಮ ಹಣಾಹಣಿಯಲ್ಲಿ ಕನ್ನೆಜಾಲು ರೈ ರೈಡರ್ಸ್ ಹಾಗೂ ಕಾನಾವು ಶ್ರೀ ವಾರಿಯರ್ಸ್ ತಂಡದ ನಡುವೆ ನಡೆದ ಪಂದ್ಯಾಟವು ಪ್ರೇಕ್ಷಕರನ್ನು ಕೊನೆಯ ಎಸೆತದ ತನಕವು ಕುತೂಹಲದಿಂದ ಇರುವಂತೆ ಮಾಡುವಲ್ಲಿ ಸಫಲವಾಯಿತು. ಅಂತಿಮ ಒಂದು ಎಸೆತಕ್ಕೆ ಒಂದು ರನ್ನಿನ ಆವಶ್ಯಕತೆ ಇರುವ ವೇಳೆ ಶ್ರೀ ವಾರಿಯರ್ಸ್ ತಂಡದ ಸದಸ್ಯ ಒಂದು ಅಂಕ ಸಂಪಾದಿಸುತ್ತಲೇ ತಂಡವನ್ನು ವಿಜಯದ ದಡ ಸೇರಿಸಿದರು. ಅಂತಿಮ ಹಂತದ ತನಕವು ಪ್ರಬಲ ಪೈಪೋಟಿ ನೀಡಿದ ರೈ ರೈಡರ್ಸ್ ರನ್ನರ್ಸ್ ಪಡೆಯಿತು. ಕುಂಡಡ್ಕ ನ್ಯೂ ಶೈನ್ ತಂಡವು ತೃತೀಯ ಸ್ಥಾನ ಪಡೆಯಿತು.
ಉತ್ತಮ ಸಾಧನೆಗಾಗಿ ವಿವಿಧ ವಿಭಾಗದಲ್ಲಿ ಕಾನಾವು ಶ್ರೀ ವಾರಿಯರ್ಸ್ ತಂಡದ ದೀಕ್ಷಿತ್, ಮೋಹಿತ್, ರೈ ರೈಡರ್ಸ್ ಕನ್ನೆಜಾಲು ತಂಡದ ಸುರೇಶ್, ಪುರುಷೋತ್ತಮ ಕುಂಡಡ್ಕ, ರಾಮಚಂದ್ರ ಚೆನ್ನಾವರ ಅವರು ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು.
*ಉದ್ಘಾಟನೆ, ಬಹುಮಾನ ವಿತರಣೆ*
ಪಂದ್ಯಾಕೂಟವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿದ *ಮುಕ್ಕೂರು ಜ್ಯೋತಿ ಯುವಕ ಮಂಡಲದ ಮಾಜಿ ಅಧ್ಯಕ್ಷ ಸತ್ಯ ಪ್ರಸಾದ್ ಕಂಡಿಪ್ಪಾಡಿ ಮಾತನಾಡಿ,* ಆಸಕ್ತ ಕ್ರೀಡಾಪಟುಗಳು ಒಂದೆಡೆ ಸೇರಿ ಆಯೋಜಿಸಿದ ಎಂಪಿಎಲ್ ಕ್ರಿಕೆಟ್ ಪಂದ್ಯಾಕೂಟ ಎಲ್ಲ ದೃಷ್ಟಿಯಿಂದ ಯಶಸ್ಸು ಕಂಡಿದೆ. ಕ್ರೀಡಾಪಟುಗಳು ಶಿಸ್ತು, ಸಂಯಮ, ಪರಿಶ್ರಮದೊಂದಿಗೆ ಸಾಧನೆ ತೋರಬೇಕು ಎಂದರು.
*ಸಭಾಧ್ಯಕ್ಷತೆ ವಹಿಸಿದ್ದ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ,* ಇಂದಿನ ಕ್ರಿಕೆಟ್ ಪಂದ್ಯಾಕೂಟ ಅರ್ಥಪೂರ್ಣ ರೀತಿಯಲ್ಲಿ ಆಯೋಜನೆಕೊಂಡಿದೆ. ಐಪಿಎಲ್ ಮಾದರಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಪಂದ್ಯಾಕೂಟ ನಡೆಸಿರುವ ಮುಕ್ಕೂರಿನ ಯುವಕರ ತಂಡದ ಸಾಧನೆ ಪ್ರಶಂಸನೀಯ ಎಂದರು.
*ಮುಕ್ಕೂರು ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ ಮಾತನಾಡಿ,* ಯುವ ಪ್ರತಿಭೆಗಳಿಗೂ ಅವಕಾಶ ನೀಡಿರುವುದು ಉತ್ತಮ ಸಂಗತಿ. ಅವರ ಕ್ರೀಡಾಸಕ್ತಿಯ ಉದ್ದೀಪನಕ್ಕೆ ಎಂಪಿಎಲ್ ಪಂದ್ಯಾವಳಿ ಒಳ್ಳೆಯ ವೇದಿಕೆ ಎಂದರು.
*ಎಂಪಿಎಲ್ ಸಂಘಟಕ ಪುರುಷೋತ್ತಮ ಕುಂಡಡ್ಕ ಮಾತನಾಡಿ,* ಕ್ರಿಕೆಟ್ ಆಯೋಜನೆ ಅಂದರೆ ಆಯೋಜಕರು ಹಣ ಮಾಡುವ ಪ್ರಯತ್ನ ಎಂದು ಕೆಲವರು ಭಾವಿಸುತ್ತಾರೆ. ಇಲ್ಲಿ ದುಡ್ಡಿನ ಆಸೆ ಇಲ್ಲ. ಕ್ರೀಡಾ ಆಸಕ್ತಿ ಮಾತ್ರ ಇರುತ್ತದೆ. ಸಂಘಟನೆಯ ಹಿಂದೆ ಅಪಾರ ಶ್ರಮ, ಆರ್ಥಿಕ ಖರ್ಚು ವೆಚ್ಚ ಇರುತ್ತದೆ ಎಂದ ಅವರು ಪ್ರಥಮ ವರ್ಷದ ಕ್ರಿಕೆಟ್ ಪಂದ್ಯಾವಳಿ ಯಶಸ್ಸಿಗೆ ಸಹಕರಿಸಿದ ಸರ್ವರಿಗೆ ಕೃತಜ್ಞತೆಗಳನ್ನು ಅರ್ಪಿಸಿದರು.
*ವೇದಿಕೆಯಲ್ಲಿ ಕಂರ್ಬುತ್ತೋಡಿ ಶ್ರೀ ವಾರಿಯರ್ಸ್ ತಂಡದ ಮಾಲಕ ದಿನೇಶ್ ಕಂರ್ಬುತ್ತೋಡಿ, ಕನ್ನೆಜಾಲು ರೈ ರೈಡರ್ಸ್ ತಂಡದ ಮಾಲಕ ಕಾರ್ತಿಕ್ ರೈ ಕನ್ನೆಜಾಲು, ಮುಕ್ಕೂರು ಗೋಲ್ಡನ್ ಈಗಲ್ಸ್ ತಂಡದ ಮಾಲಕ ಸಚಿನ್ ರೈ ಪೂವಾಜೆ, ಮುಕ್ಕೂರು-ಪೆರುವಾಜೆ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಕಿರಣ್ ಚಾಮುಂಡಿಮೂಲೆ, ಪ್ರಗತಿಪರ ಕೃಷಿಕ ವಿಕಾಸ್ ರೈ ಕುಂಜಾಡಿ ಉಪಸ್ಥಿತರಿದ್ದರು.*
*ಐದು ತಂಡಗಳ*
*ನಡುವೆ ಲೀಗ್ ಸ್ಪರ್ದೆ*
ಒಟ್ಟು ಐದು ತಂಡಗಳ ಮಧ್ಯೆ ಲೀಗ್ ಮಾದರಿಯಲ್ಲಿ ಸ್ಪರ್ಧೆ ನಡೆಯಿತು. ಕಾನಾವು ಶ್ರೀ ವಾರಿಯರ್ಸ್ ತಂಡ, ಕನ್ನೆಜಾಲು ರೈ ರೈಡರ್ಸ್ ತಂಡ, ಮುಕ್ಕೂರು ಗೋಲ್ಡನ್ ಈಗಲ್ಸ್ ತಂಡ, ಕುಂಡಡ್ಕ ನ್ಯೂ ಶೈನ್ ತಂಡ, ಜಾಲ್ಪಣೆ ಸ್ಟೈಕರ್ಸ್ ತಂಡವು ಪಂದ್ಯಾಕೂಟದಲ್ಲಿ ಭಾಗವಹಿಸಿತು. ಲೀಗ್ ಹಂತದಲ್ಲಿ ಪ್ರತಿ ತಂಡವು ನಾಲ್ಕು ಪಂದ್ಯವನ್ನು ಆಡಿತು. ರಮೇಶ್ ಬೆಳ್ಳಾರೆ ವೀಕ್ಷಕ ವಿವರಣೆ ನೀಡಿದರು.