Kantara : ಕಾಂತಾರ ಸಿನಿಮಾದ ಜೀವಾಳ ‘ವರಹ ರೂಪಂ’ ಟ್ಯೂನ್ ಕದ್ದ ಆರೋಪ | ಸಂಗೀತ ನಿರ್ದೇಶಕರ ಸ್ಪಷ್ಟನೆ
ಕಾಂತಾರ ಸಿನಿಮಾ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಎಲ್ಲೆಡೆ ಪ್ರಶಂಸೆಗಳ ಮಹಾಪೂರವೇ ಹರಿಯುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಕಾಂತಾರ’ ಹಿಟ್ ಲಿಸ್ಟ್ ಸೇರಿದೆ. ದಿನದಿಂದ ದಿನಕ್ಕೆ ಸಿನಿಮಾ ದೊಡ್ಡಮಟ್ಟದಲ್ಲಿ ಎಲ್ಲಾ ಕಡೆ ದಾಪುಗಾಲು ಇಡುತ್ತಿದೆ. ಕರಾವಳಿಯ ದೈವಿಕ ಚಿತ್ರ ಎಲ್ಲಾ ಕಡೆ ಜನಮನ ಸೆಳೆಯುತ್ತಿದೆ.
ಈ ಎಲ್ಲಾ ಸಕ್ಸಸ್ ಗಳ ಮಧ್ಯೆ ‘ಕಾಂತಾರ’ ಸಿನಿಮಾ ಮೇಲೆ ಅಪವಾದವೊಂದು ಕೇಳಿಬಂದಿದೆ. ‘ವರಹ ರೂಪಂ’ ಎಂಬ ಹಾಡನ್ನು ಕದ್ದಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಈ ಬಗ್ಗೆ ಸ್ವತಃ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರು ಡಿಜಿಟಲ್ ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಪ್ರೇಕ್ಷಕರು ಅಜನೀಶ್ ಸಾಂಗ್ಸ್ ಹಾಗೂ ಬಿಜಿಎಂ ಬಗ್ಗೆ ಹೆಚ್ಚೇ ಚರ್ಚೆ ಮಾಡುತ್ತಿದ್ದಾರೆ. ಅದರಲ್ಲೂ ‘ವರಹ ರೂಪಂ’ ಹಾಡು ಈ ಚಿತ್ರದ ಹಾರ್ಟ್ ಬೀಟ್ ಎಂದೇ ಹೇಳಬಹುದು. ಆದರೆ ಇದು ಮಲಯಾಳಂನ ‘ನವರಸಂ’ ಎನ್ನುವ ಆಲ್ಬಮ್ ಸಾಂಗ್ ನಿಂದ ಟ್ಯೂನ್ ಕದ್ದು ಅಜನೀಶ್ ಈ ಪದ್ಯ ಮಾಡಿದ್ದಾರೆ ಎನ್ನುವುದು ಕೆಲವರ ವಾದ. ಹಾಗಾಗಿ ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಿಡುಗಡೆಯಾದಾಗಿನಿಂದಲೇ ಭಾರೀ ಚರ್ಚೆ ನಡೀತಿದೆ.
ಈ ಬಗ್ಗೆ ಅಜನೀಶ್ ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿದ್ದು, ಅವರು ಹೇಳಿರುವ ಪ್ರಕಾರ, “ನವರಸಂ’ ಆಲ್ಬಮ್ ಸಾಂಗ್ಗೂ ‘ಕಾಂತಾರ’ ಚಿತ್ರದ ‘ವರಹ ರೂಪಂ’ ಸಾಂಗ್ಗೂ ಸಾಕಷ್ಟು ಸಾಮ್ಯತೆಯಿದೆ. ಈ ಕಾರಣಕ್ಕೆ ಅನುಮಾನ ಮೂಡುವುದು ಸಹಜ. ಆದರೆ ಆಲ್ಬಮ್ ಸಾಂಗ್ ಮಾಡಿದವರು ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಯಾಕೆಂದರೆ ಒಬ್ಬ ಸಂಗೀತ ನಿರ್ದೇಶಕನಿಗೆ ಯಾವುದು ಕಾಪಿ? ಯಾವುದು ಕಾಪಿ ಅಲ್ಲ ಎನ್ನುವುದು ಗೊತ್ತಾಗುತ್ತದೆ” ಎಂದು ಹೇಳಿದ್ದಾರೆ.
“ವರಹ ರೂಪಂ ಹಾಗೂ ನವರಸಂ. ಎರಡೂ ಹಾಡುಗಳ ಸಂಯೋಜನೆ ಬೇರೆ ಬೇರೆ. ಆ ರಾಕ್ಬ್ಯಾಂಡ್ ಸ್ಟೈಲ್ನಿಂದ ಇನ್ಸ್ಪೈರ್ ಆಗಿದ್ದೀವಿ. ಆದರೆ ನಮ್ಮ ಹಾಡಿನ ಸಂಯೋಜನೆಯೇ ಬೇರೆ. ಸ್ಟೈಲ್ ವಿಚಾರದಲ್ಲಿ ‘ವರಹ ರೂಪಂ’ ಸಾಂಗ್ ಕೇಳಿ ಇನ್ಸ್ಪೈರ್ ಆಗಿರೋದು ನಿಜ. ಅದು ಯಾವ ರೀತಿ ಅಂದರೆ ಬರೀ ಸ್ಟೈಲ್. ಅದು ಬಿಟ್ಟು ಅದಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ.”
‘ನವರಸಂ’ ಸಾಂಗ್ ರೀತಿ ರಾಕ್ ಬ್ಯಾಂಡ್, ಗಿಟಾರ್ ಸ್ಟೈಲ್ನಲ್ಲಿ ಮಾಡಬೇಕು ಎಂದುಕೊಂಡೆ. ನಾವು ತೋಡಿ, ವರಾಳಿ, ಮುಖಾರಿ ರಾಗಗಳನ್ನು ಬಳಸಿ ಈ ಸಾಂಗ್ ಮಾಡಿದ್ದೇವೆ. ರಾಗಗಳ ಛಾಯೆ ಒಂದೇ ರೀತಿ ಇರುವುದರಿಂದ ಕೇಳವವರಿಗೆ ಸಾಮ್ಯತೆ ಎನ್ನಿಸಬಹುದು. ಆದರೆ ಸಂಯೋಜನೆ ಬೇರೆ, ಟ್ಯೂನ್ ಬೇರೆ. ರಿದಮ್ಸ್, ಇನ್ಸ್ಟ್ರೂಮೆಂಟ್ಸ್ ಇರೋದನ್ನೇ ಬಳಸೋಕೆ ಸಾಧ್ಯ. ನಾನು ಎಲೆಕ್ಟ್ರಿಕ್ ಗಿಟಾರ್ ಬಳಸಿದ್ದೀನಿ”.
” ಇದು ಪ್ಯೂರ್ ಕರ್ನಾಟಿಕ್ ಕ್ಲಾಸಿಕಲ್ ಕಂಪೋಸಿಷನ್. ಆಲ್ಬಮ್ ಸಾಂಗ್ ಮಾಡಿದವರು ಈ ಬಗ್ಗೆ ಕೇಳಿಲ್ಲ. ಯಾಕೆಂದರೆ ಇದು ಕಾಪಿ ಅಲ್ಲ ಎಂದು ಅವರಿಗೂ ಗೊತ್ತು. ಅವರಿಗೂ ಈಗಾಗಲೇ ಈ ಸಾಂಗ್ ರೀಚ್ ಆಗಿರುತ್ತದೆ. ಇದೇ ಬೇರೆ ಕಂಪೋಸಿಷನ್ ಎನ್ನುವುದು ಅವರಿಗೂ ಗೊತ್ತಿರುತ್ತದೆ” ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ.