PPF, KVP, ಅಂಚೆ ಠೇವಣಿ ಈ ಸಣ್ಣ ಉಳಿತಾಯ ಯೋಜನೆಯ ಈಗಿನ ಬಡ್ಡಿದರ ಎಷ್ಟು ? ಇಲ್ಲಿದೆ ಉತ್ತರ
ಪ್ರತಿಯೊಬ್ಬರಿಗೂ ಕೂಡ ಹೂಡಿಕೆ ಎಂಬುದು ಅತ್ಯವಶ್ಯವಾಗಿದ್ದು, ಭವಿಷ್ಯದಲ್ಲಿ ಎದುರಾಗುವ ಹಣಕಾಸಿನ ತೊಡಕುಗಳನ್ನು ನಿವಾರಿಸಲು ನಿಶ್ಚಿತ ಲಾಭದ ಜೊತೆಗೆ ಆರ್ಥಿಕ ಭದ್ರತೆಯ ಹೊರೆಯನ್ನು ಇಳಿಸುವ ಮೂಲಗಳಲ್ಲಿ ಠೇವಣಿ ಮಾಡುವುದು ಸಾಮಾನ್ಯ.
ಪಿಪಿಎಫ್ ಖಾತೆಯು ಸುರಕ್ಷತೆ, ಆದಾಯ ಮತ್ತು ತೆರಿಗೆ-ಉಳಿತಾಯ ಪ್ರಯೋಜನಗಳ ಉತ್ತಮ ಲಾಭ ಒದಗಿಸುತ್ತದೆ. ಆಗಾಗ ಬದಲಾಗುವ ಬಡಿದ್ದರಗಳಿಂದ ಯಾವುದರಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಬಹುದು ಎಂಬ ಅನುಮಾನ ಹಲವರನ್ನು ಕಾಡದಿರದು. ಹಾಗಾಗಿ ಬಡ್ಡಿ ದರಗಳ ಬಗ್ಗೆ ಮಾಹಿತಿ ತಿಳಿದಿರುವುದು ಉತ್ತಮ.
ಇತ್ತೀಚೆಗೆ ಕೆಲವು ತಿಂಗಳುಗಳಿಂದ ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೊ ದರವನ್ನು ಹೆಚ್ಚಿಸುತ್ತಿರುವುದರಿಂದ ದೇಶದಲ್ಲಿ ವಿವಿಧ ಠೇವಣಿ ಮತ್ತು ಸಾಲಗಳ ಮೇಲಿನ ಬಡ್ಡಿದರಗಳಲ್ಲಿ ಬದಲಾವಣೆಯಾಗಿದ್ದು, ಕೆಲ ಹೂಡಿಕೆಗಳ ಬಡ್ಡಿದರ ಹೆಚ್ಚಳವಾಗಿದ್ದನ್ನು ಗಮನಿಸಿರಬಹುದು.
ಸಾರ್ವಜನಿಕ ಭವಿಷ್ಯ ನಿಧಿ, ಉಳಿತಾಯ ಠೇವಣಿ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು ಮತ್ತು ಸುಕನ್ಯಾ ಸಮೃದ್ಧಿ ಖಾತೆ ಯೋಜನೆ ಸೇರಿದಂತೆ ಇತರ ಯೋಜನೆಗಳ ಮೇಲಿನ ಬಡ್ಡಿ ದರಗಳು ಹಿಂದಿನ ದರದಂತೆ ಇದ್ದು, ಯಾವುದೇ ಬದಲಾವಣೆಯಾಗಿಲ್ಲ.
ಈ ನಡುವೆ , ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳಲ್ಲಿ ಕೊಂಚ ಮಟ್ಟಿಗೆ ಬದಲಾಗಿದ್ದು, ಎರಡು ವರ್ಷಗಳ ಕಾಲ ಸ್ಥಿರವಾಗಿದ್ದ ಕಿಸಾನ್ ವಿಕಾಸ್ ಪತ್ರ -ಕೆವಿಪಿ (Kisan Vikas Patra -KVP) ಮತ್ತು ಸಮಯ ಠೇವಣಿ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ (Small Savings Schemes) ಮೇಲಿನ ಬಡ್ಡಿ ದರಗಳನ್ನು ಸರ್ಕಾರವು ಪರಿಷ್ಕರಿಸಿದ್ದು, ಅಕ್ಟೋಬರ್-ಡಿಸೆಂಬರ್ 2022 ಕ್ಕೆ 30 ಮೂಲಾಂಶಗಳವರೆಗೆ ಬದಲಾವಣೆಯಾಗಿದೆ.
ಸಣ್ಣ ಉಳಿತಾಯ ಯೋಜನೆಗಳು ಮತ್ತು ಅವುಗಳ ಇತ್ತೀಚಿನ ಬಡ್ಡಿ ದರಗಳ ಬಗ್ಗೆ ಮಾಹಿತಿ ಇಲ್ಲಿದೆ
ಜನರಲ್ಲಿ ಹೂಡಿಕೆಯನ್ನು ಪ್ರೋತ್ಸಾಹಿಸಲು ಬ್ಯಾಂಕ್, ಹಣಕಾಸು ಸಂಸ್ಥೆಗಳು ವಿವಿಧ ಉಳಿತಾಯ ಯೋಜನೆಗಳನ್ನು ರೂಪಿಸಿದ್ದು, ಸಣ್ಣ ಉಳಿತಾಯ ಠೇವಣಿಗಳು (savings deposits), ಸಾಮಾಜಿಕ ಭದ್ರತಾ ಯೋಜನೆಗಳು (social security schemes) ಮತ್ತು ಮಾಸಿಕ ಆದಾಯ ಯೋಜನೆ (monthly income plan) ಗಳನ್ನು ಒಳಗೊಂಡಿವೆ.
ಉಳಿತಾಯ ಯೋಜನೆಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು,ಕೆಲ ಉಳಿತಾಯ ಠೇವಣಿಗಳಲ್ಲಿ 1ರಿಂದ 3 ವರ್ಷಗಳ ಕಾಲ ಹೂಡಿಕೆ ಮಾಡಬಹುದಾಗಿದ್ದು, 5 ವರ್ಷದ ಮರುಕಳಿಸುವ ಠೇವಣಿಗಳು ಕೂಡ ಇದೆ. ಇವುಗಳ ಜೊತೆಗೆ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು (NSC) ಮತ್ತು ಕಿಸಾನ್ ವಿಕಾಸ್ ಪತ್ರದಂತಹ (Kisan Vikas Patra) ಉಳಿತಾಯ ಪ್ರಮಾಣಪತ್ರಗಳೂ ಕೂಡ ಸೇರಿವೆ.
ಎಲ್ಲ ವರ್ಗಗಳಿಗೂ, ಎಲ್ಲ ವಯೋಮಾನದವರಿಗು ನೆರವಾಗುವಂತೆ ವಿವಿಧ ಹೂಡಿಕಾ ಸೌಲಭ್ಯಗಳಿದ್ದು, ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಸಾರ್ವಜನಿಕ ಭವಿಷ್ಯ ನಿಧಿ (Public Provident Fund), ಸುಕನ್ಯಾ ಸಮೃದ್ಧಿ ಖಾತೆ (Sukanya Samriddhi Account) ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆ (Senior Citizens Savings Scheme) ಸೇರಿವೆ. ಮಾಸಿಕ ಆದಾಯ ಯೋಜನೆಯು ಮಾಸಿಕ ಆದಾಯ ಖಾತೆಯನ್ನು ಒಳಗೊಂಡಿರುತ್ತದೆ.
ಹಣಕಾಸು ಸಚಿವಾಲಯದ ಇತ್ತೀಚಿನ ಅಧಿಸೂಚನೆಯ ಪ್ರಕಾರ ದರಗಳನ್ನು 10-30 ಬೇಸಿಸ್ ಪಾಯಿಂಟ್ಗಳ ವ್ಯಾಪ್ತಿಯಲ್ಲಿ ಹೆಚ್ಚಿಸಲಾಗಿದ್ದು, ಕಿಸಾನ್ ವಿಕಾಸ್ ಪತ್ರ (ಕೆವಿಪಿ), ಹಿರಿಯ ನಾಗರಿಕರ ಉಳಿತಾಯ ಯೋಜನೆ, ಮಾಸಿಕ ಆದಾಯ ಖಾತೆ ಯೋಜನೆ ಮತ್ತು ಎರಡು ಮತ್ತು ಮೂರು ವರ್ಷಗಳ ಕಾಲ ಠೇವಣಿಗಳಿಗೆ ಬಡ್ಡಿ ದರಗಳನ್ನು ಪರಿಷ್ಕರಿಸಲಾಗಿದೆ.
ಅಂಚೆ ಕಛೇರಿಯ ಉಳಿತಾಯ ಠೇವಣಿಗಳು ವಾರ್ಷಿಕ 4 ಪ್ರತಿ ಶತದಷ್ಟು ಬಡ್ಡಿ ದರ ನೀಡುವುದನ್ನು ಮುಂದುವರಿಸಿದ್ದು, 1 ವರ್ಷದ ಅವಧಿಯ ಠೇವಣಿಗಳಿಗೆ 5.5 ಶೇಕಡಾ ಬಡ್ಡಿ ಮುಂದುವರೆದಿದ್ದು, 2 ವರ್ಷಗಳ ಅವಧಿಯ ಠೇವಣಿಗಳಿಗೆ 20 ಬೇಸಿಸ್ ಪಾಯಿಂಟ್ಗಳಿಂದ ಹೆಚ್ಚಿಸಲಾಗಿದ್ದು, ಸದ್ಯ ಬಡ್ಡಿದರ ಶೇಕಡಾ 5.7 ರಷ್ಟಿದೆ.
3-ವರ್ಷಗಳ ಠೇವಣಿಗಳಿಗೆ 5.8 ಶೇಕಡಾ ಬಡ್ಡಿ ದರವಿದ್ದು, 30 ಬೇಸಿಸ್ ಪಾಯಿಂಟ್ಗಳನ್ನು ಹೆಚ್ಚಿಸಲಾಗಿದೆ. . ಐದು ವರ್ಷಗಳ ಸಮಯದ ಠೇವಣಿಗಳ ಮೇಲಿನ ಬಡ್ಡಿ 5.8 ಶೇಕಡವಿದ್ದು,ವರ್ಷಕ್ಕೆ 6.7 ಪ್ರತಿಶತದಷ್ಟು ಲಾಭವನ್ನು ನೀಡುತ್ತದೆ.
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು (ಎನ್ಎಸ್ಸಿ) ಶೇ. 6.8 ಬಡ್ಡಿ ದರವು, ಸುಕನ್ಯಾ ಸಮೃದ್ಧಿ ಖಾತೆಯು ಶೇ. 7.6 ಮೊದಲಿದ್ದ ಅದೇ ಬಡ್ಡಿ ದರಗಳನ್ನು ಮುಂದುವರೆಸಿದೆ. ಇದರ ಜೊತೆಗೆ ಪಿಪಿಎಫ್ನ ಬಡ್ಡಿ ದರವೂ 7.1 ಶೇಕಡಾ ಇದ್ದು, ಇದರಲ್ಲಿಯೂ ಯಾವುದೇ ಬದಲಾವಣೆಯಾಗಿಲ್ಲ.
ಸರ್ಕಾರವು ಕಿಸಾನ್ ವಿಕಾಸ್ ಪತ್ರದ ಬಡ್ಡಿ ದರಗಳು ಮತ್ತು ಅವಧಿ ಎರಡನ್ನೂ ಪರಿಷ್ಕರಿಸಿದೆ. 124 ತಿಂಗಳ ಮೆಚುರಿಟಿ ಅವಧಿಗೆ ಶೇಕಡಾ 6.9 ದರದಲ್ಲಿ ಬಡ್ಡಿ ಪಾವತಿಸಲಾಗುತ್ತಿದ್ದಲ್ಲಿ, ಇದೀಗ, 123 ತಿಂಗಳ ಮೆಚುರಿಟಿ ಅವಧಿಗೆ ಶೇಕಡಾ 7 ರಷ್ಟು ಬಡ್ಡಿ , ಮಾಸಿಕ ಆದಾಯ ಖಾತೆಯು ವಾರ್ಷಿಕವಾಗಿ ಈ ಹಿಂದೆ ಶೇಕಡಾ 6.6 ರಷ್ಟು ಬಡ್ಡಿ ದರ ಹೊಂದಿತ್ತು. ಆದರೀಗ, 6.7 ಪ್ರತಿಶತ ಬಡ್ಡಿಯನ್ನು ನೀಡುತ್ತಿದೆ.
ಹೂಡಿಕೆ ಮಾಡುವಾಗ ಯೋಜನೆಯ ಹೆಚ್ಚಿನ ಲಾಭ ಪಡೆಯಲು , ಬಡ್ಡಿದರದ ಜೊತೆಗೆ ಅವಧಿ ಮುಖ್ಯ ಪಾತ್ರ ವಹಿಸುತ್ತದೆ. ಹಾಗಾಗಿ ಅವುಗಳ ಬಗ್ಗೆ ಅರಿತು ಉಳಿತಾಯ ಮಾಡುವುದು ಉತ್ತಮ.