ಪೊಲೀಸರನ್ನೇ ಅಟ್ಟಾಡಿಸಿಕೊಂಡು ಹೋದ ನಾಗರಾಜ!!! ಯಾಕೆ ಗೊತ್ತೇ?
ಅಪರಾಧಿಗಳ ಹೆಡೆ ಮುರಿ ಕಟ್ಟಿ, ಭಯ ಹುಟ್ಟಿಸುವ ಪೋಲಿಸ್ ಪಡೆಯನ್ನೇ ನಡುಗಿಸಿದ ನಾಗರಾಜ. ಹೌದು ಪೊಲೀಸರೆಂದರೆ ದೈರ್ಯವಂತರು, ಸಾಹಸಿಗರು ಎಂಬ ಭಾವನೆ ಸಾಮಾನ್ಯರಲ್ಲಿ ಇದೆ. ಆದರೆ ಇದರ ತದ್ವಿರುದ್ದ ಪ್ರಕರಣವೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರಪ್ರದೇಶ ಜಾಲೌನ್ ಪೊಲೀಸ್ ಠಾಣೆಯಲ್ಲಿ ನಾಗರಹಾವು ಕಾಣಿಸಿಕೊಂಡಿದ್ದು, ಪೊಲೀಸರು ಹೆದರಿ ಅತ್ತಿಂದಿತ್ತ ಇತ್ತಿಂದಿತ್ತ ಓಡಾಡಲಾರಂಭಿಸಿದ್ದು ಹಾವನ್ನು ಹಿಡಿಯುವ ವಿಧಾನ ತಿಳಿಯದೆ ಪೇಚಿಗೆ ಸಿಲುಕಿದ ಘಟನೆ ನಡೆದಿದೆ. ಕೊನೆಗೆ ಪರಿಹಾರೋಪಾಯವಾಗಿ ಹಾವು ಹಿಡಿಯುವವರನ್ನು ಕರೆಸಲಾಗಿದೆ.
ಉತ್ತರ ಪ್ರದೇಶದ ಪೊಲೀಸರು ಠಾಣೆಯಲ್ಲಿ ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದಾಗ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಈ ನಾಗರಹಾವು ಅಲ್ಲಿದ್ದವರ ಮೇಲೆ ದಾಳಿ ಮಾಡಲು ಹವಣಿಸಿದೆ. ಇದರಿಂದ ಹೆದರಿದ ಪೊಲೀಸರು ಪ್ರಾಣ ಉಳಿಸಿಕೊಳ್ಳಲು ಠಾಣೆಯ ತುಂಬಾ ಓಡಾಡಿದ್ದಾರೆ.
ಕೊನೆಗೆ ಭಯದಿಂದ ಪ್ರಾಣ ರಕ್ಷಣೆಗಾಗಿ ಹಾವು ಹಿಡಿಯುವವರನ್ನು ಠಾಣೆಗೆ ಕರೆಸಿದ್ದಾರೆ.
ಹಾವನ್ನು ಶಾಂತಗೊಳಿಸಿದ ನಂತರ ಪೆಟ್ಟಿಗೆಯಲ್ಲಿ ಬಂಧಿಸಲಾಗಿದ್ದು, ಆದರೆ ಪೆಟ್ಟಿಗೆಗೆ ಹಾಕುವಾಗಲೂ ಈ ನಾಗರಾವು ಭುಸಗುಡುತ್ತಲೇ ಇತ್ತು. ಅಂತೂ ಉಗ್ರಪ್ರತಾಪಿ ನಾಗಪ್ಪನನ್ನು ಹಾವು ಹಿಡಿಯುವವರು ಶಾಂತಗೊಳಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನೋಡುಗರಿಗೆ ಹಾಸ್ಯಾಸ್ಪದ ಸಂಗತಿ ಎನಿಸಿದರೂ ಬೆಕ್ಕಿಗೆ ಆಟ ಇಲಿಗೆ ಪ್ರಾಣಸಂಕಟ ಎಂಬಂತಹ ಪರಿಸ್ಥಿತಿ ಪೊಲೀಸರಿಗೆ ಎದುರಾಗಿ ಕೊನೆಗೂ ಹಾವು ಹಿಡಿಯುವವರಿಂದ ಜೀವ ಉಳಿಯಿತು ಎಂದು ಖಾಕಿ ಪಡೆ ನಿಟ್ಟುಸಿರು ಬಿಟ್ಟಿದ್ದಾರೆ.