#Fact Check : ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಬಣ್ಣದ ಕಂಬಳಿಹುಳದ ಪೋಸ್ಟ್ | ತಜ್ಞರೇ ಕೊಟ್ಟರು ಸ್ಪಷ್ಟನೆ
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಪೋಸ್ಟ್‌ಗಳಿಂದಾಗಿ ವರ್ಣರಂಜಿತ ಕಂಬಳಿಹುಳ ಇದೀಗ ವಿಲನ್ ಆಗಿ ಪರಿಣಮಿಸಿದೆ.
ಕಣ್ಣಾರೆ ಕಂಡರೂ ಪರಾಂಬರಿಸಿ ನೋಡಬೇಕು ಎಂಬ ಮಾತಿದೆ. ಸಾಮಾಜಿಕ ಜಾಲತಾಣದಲ್ಲಿ ಏನೇ ನಡೆದರೂ ವಿಶೇಷ ಎಂಬ ರೀತಿಯಲ್ಲಿ ನೂರಾರು ವೀಡಿಯೋಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಹೆಚ್ಚಿನ ವಿಡಿಯೋಗಳು ನೈಜ ವೀಡಿಯೋಗಳಿಗೆ ಎಡಿಟ್ ಮಾಡಿ ತಿರುಚಿ, ಇರುವ ಸುಳ್ಳು ವಿಷಯವನ್ನೇ ಸತ್ಯ ಎಂದು ಬಿಂಬಿಸುವ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ.
ಕಬ್ಬಿನ ಗದ್ದೆಯಲ್ಲಿ ಹೆಚ್ಚಾಗಿ ಕಂಡುಬರುವ ಕಂಬಳಿ ಹುಳದಿಂದ ಸಾವು ಸಂಭವಿಸಿದೆ ಎಂಬ ಒಕ್ಕಣೆಯೊಂದಿಗೆ ಹುಳು ಹಾಗೂ ಮನುಷ್ಯನ ಮೃತದೇಹದ ಚಿತ್ರವಿರುವ ಸಂದೇಶ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದು ರಾಜ್ಯದಾದ್ಯಂತ ರೈತರಲ್ಲಿ ಭೀತಿ ಮೂಡಿಸಿದ್ದು, ಕಂಬಳಿಹುಳ ತಳಿಯನ್ನು ಕೊಲ್ಲುವ ಸಲುವಾಗಿ ತಜ್ಞರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ
ಅನೇಕ ಕೃಷಿ ತಜ್ಞರು ಮತ್ತು ಕೀಟಶಾಸ್ತ್ರಜ್ಞರು ಹೇಳಿರುವ ಪ್ರಕಾರ ಚಿಟ್ಟೆಹುಳು ಅಥವಾ ಕಂಬಳಿಹುಳಗಳು ನಿರುಪದ್ರವಿಯಾಗಿದ್ದು ಅವುಗಳನ್ನು ಸ್ಪರ್ಶಿಸಿದಾಗ ಚರ್ಮದ ಮೇಲೆ ಕಿರಿಕಿರಿಯಾಗುತ್ತದೆ ಎಂದು ತಿಳಿಸಿರುವುದಲ್ಲದೆ, ಕಂಬಳಿಹುಳುಗಳಿಂದ ಸಾವು ಸಂಭವಿಸುತ್ತದೆ ಎನ್ನುವ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ.
ರೈತರ ಮನದಲ್ಲಿ ಗೊಂದಲ ಸೃಷ್ಟಿಸುವ ನಿಟ್ಟಿನಲ್ಲಿ ಕಿಡಿಗೇಡಿಗಳು ಸುಳ್ಳು ವರದಿ ನೀಡುವುದು ಹೊಸತೇನಲ್ಲ. ರೈತರು ಮತ್ತು ಅವರ ಸುರಕ್ಷತೆಗೆ ಸಂಬಂಧಿಸಿದ ಪೋಸ್ಟ್‌ಗಳು ಕೆಲವೇ ಸಮಯದಲ್ಲಿ ವೈರಲ್ ಆಗುತ್ತಿದ್ದು, ಈ ವಿಧದ ಕಂಬಳಿಹುಳುಗಳು ಎಲ್ಲೆಡೆ ಕಂಡುಬರುವುದಿಲ್ಲ ಇವುಗಳು ಪಶ್ಚಿಮ ಘಟ್ಟಗಳ ದಟ್ಟ ಅರಣ್ಯದ ಕೆಲವು ಭಾಗಗಳಲ್ಲಿ ಮಾತ್ರ ಕಂಡುಬರುತ್ತವೆ. ಹಾಗಾಗಿ ಕಬ್ಬಿನ ಗದ್ದೆಗಳಲ್ಲಿ ಈ ಕೀಟಗಳು ಕಾಣಿಸುವ ಸಾಧ್ಯತೆ ಇಲ್ಲ ಎಂದು ಕೃಷಿ ತಜ್ಞರು ಸ್ಪಷ್ಟ ಪಡಿಸಿದ್ದಾರೆ.
ಅನೇಕ ಕೀಟಗಳ ಬಗ್ಗೆ ಸಾಮಾನ್ಯ ಜನರಿಗೆ ತಿಳಿಯದೆ ಇರುವುದೇ ಸಮಸ್ಯೆ ಹೆಚ್ಚಾಗಲು ಕಾರಣವಾಗಿದ್ದು,
ಹೀಗಾಗಿಯೇ ಈ ರೀತಿಯ ಪೋಸ್ಟ್‌ಗಳು ಕೌತುಕದ ರೀತಿಯಲ್ಲಿ ವೈರಲ್ ಆಗುತ್ತವೆ. ಪ್ರಾಣಿಗಳು ಅಥವಾ ಕೀಟಗಳ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಅವುಗಳ ನಾಶಕ್ಕೆ ಪ್ರಚೋದನೆ ನೀಡುತ್ತಿದ್ದಾರೆ. ಇಂತಹ ಬೆಳವಣಿಗೆಗಳ ಮೇಲೆ ಸೈಬರ್ ಕ್ರೈಮ್ ಪೊಲೀಸರು ನಿಗಾ ಇಡಬೇಕೆಂದು ಕೃಷಿತಜ್ಞರು ಒತ್ತಾಯಿಸಿದ್ದಾರೆ.