Weight lifting : ಹೃದಯದ ಆರೋಗ್ಯಕ್ಕೆ ಬಾಡಿ ಬಿಲ್ಡಿಂಗ್ ಎಷ್ಟು ಲಾಭವಾಗುತ್ತೆ?
ಮನುಷ್ಯನ ದೇಹ ಒತ್ತಡ ರಹಿತವಾಗಿ ಆರೋಗ್ಯವಾಗಿರಲು ವ್ಯಾಯಮ ಮಾಡುವುದು ಅವಶ್ಯ. ಆದರೆ ಅತಿಯಾದರೆ ಅಮೃತವೂ ವಿಷ ಎಂಬ ಮಾತಿನಂತೆ ಅತಿಯಾದ ವ್ಯಾಯಮದಿಂದಲೂ ಕೂಡ ಸಮಸ್ಯೆಗಳು ಉದ್ಭವಿಸುತ್ತವೆ.
ವರ್ಕೌಟ್ ಮಾಡುವವರು ಜಿಮ್ ನಲ್ಲಿ ತರಬೇತುದಾರರ ಅಣತಿಯಂತೆ ದೇಹ ದಂಡಿಸುವುದು, ವಾರದ ಒಂದೆರಡು ದಿನ ತೂಕ ಎತ್ತುವ ಪ್ರಕ್ರಿಯೆ ನಡೆಯುವುದು ಸಾಮಾನ್ಯ. ದೇಹ ಫಿಟ್ ಆಗಿರಲು ಇಲ್ಲವೇ ಬಾಡಿ ಬಿಲ್ಡಿಂಗ್ ಮಾಡುವ ಸಲುವಾಗಿ ಹೆಚ್ಚಿನವರು ವರ್ಕೌಟ್ ನಲ್ಲಿ ತೊಡಗಿಸಿಕೊಂಡಿರುತ್ತಾರೆ.
ಹೃದಯದ ಆರೋಗ್ಯಕ್ಕೆ ದೈಹಿಕ ಚಟುವಟಿಕೆ ಹಾಗೂ ವ್ಯಾಯಾಮವು ಅತೀ ಅಗತ್ಯವಾಗಿದ್ದು, ಇದು ಅಪಧಮನಿ ಕಾಯಿಲೆಗಳಿಂದ ದೂರವಿಡುತ್ತದೆ. ದೇಹದ ಎಲ್ಲಾ ಮಾಂಸಖಂಡಗಳನ್ನು ಬಳಸಿಕೊಂಡು ಮಾಡುವಂತಹ ವ್ಯಾಯಾಮ ಅಥವಾ ದೈಹಿಕ ಚಟುವಟಿಕೆಯು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಪುಶ್ ಅಪ್ಸ್, ಸ್ಟೊಮಕ್ ಕ್ರಂಚ್, ಕಡಿಮೆ ಭಾರ ಎತ್ತುವುದು ವೇಗವಾಗಿ ನಡೆಯುವುದು ಹೃದಯಕ್ಕೆ ಒಳ್ಳೆಯ ಫಲಿತಾಂಶ ನೀಡುತ್ತದೆ.
ಇತ್ತೀಚೆಗೆ ಚಿಕ್ಕ ವಯಸ್ಸಿನಲ್ಲಿ ಹೃದ್ರೋಗ ಅಥವಾ ಹೃದಯಾಘಾತದಿಂದ ಸಾವನ್ನಪ್ಪುವುದು ಮತ್ತು ಹೃದ್ರೋಗದಿಂದ ಬಳಲುತ್ತಿರುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ವಿಶೇಷವಾಗಿ ನಲವತ್ತು ವಯಸ್ಸಿನ ನಂತರದ ಜನರಲ್ಲಿ ಹೃದ್ರೋಗ ಸಮಸ್ಯೆ ಹೆಚ್ಚು ಬಾಧಿಸುತ್ತಿದೆ. ಅದರಲ್ಲೂ ತಮ್ಮನ್ನು ಫಿಟ್ ಆಗಿಟ್ಟುಕೊಳ್ಳಲು ನಿರಂತರವಾಗಿ ಜಿಮ್‌ಗೆ ಹೋಗುವವರಲ್ಲಿ ಈ ಸಮಸ್ಯೆ ಹೆಚ್ಚಿದೆ. ಡಾ.ಪುನೀತ್ ರಾಜಕುಮಾರ್, ಚಿರಂಜೀವಿ ಸರ್ಜಾ ಸರ್ಜಾ ದೇಹವನ್ನು ಫಿಟ್ ಆಗಿ , ದೇಹವನ್ನು ದಂಡಿಸಿ ಸದೃಢ ಶರೀರ ಹೊಂದಿದ್ದವರು ಇದ್ದಕ್ಕಿದಂತೆ ಹೃದಯಾಘಾತವಾಗಿ ನಿಧನ ರಾದಾಗ ಜನತೆ ಆಶ್ಚರ್ಯದಿಂದ ದುಖಿತರಾಗಿದ್ದು ತಿಳಿದಿರುವ ವಿಚಾರ.
ತೂಕ ಎತ್ತುವಿಕೆ ನೇರ ದ್ರವ್ಯರಾಶಿ ಹೆಚ್ಚಿಸುತ್ತದೆ. ಹೃದಯ ರಕ್ತನಾಳದ ವ್ಯವಸ್ಥೆಯು ಹೆಚ್ಚು ರಕ್ತವನ್ನು ಪಂಪ್ ಮಾಡಿ ಅಪಧಮನಿಗಳ ಮೇಲಿನ ಒತ್ತಡ ಕಡಿಮೆ ಮಾಡುತ್ತದೆ. ತೂಕ ಎತ್ತುವುದು ಹೃದಯ ಮತ್ತು ಮೆದುಳಿಗೆ ಸಂಬಂಧಿಸಿದ ಮಾರಣಾಂತಿಕ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ. ಆದರೆ ಹೆಚ್ಚಿನ ತೂಕ ಎತ್ತುವುದು ಅಪಾಯ ಹೆಚ್ಚಿಸುತ್ತದೆ. ಹಾಗಾಗಿ ಕಡಿಮೆ ತೂಕ ಮಾತ್ರ ಎತ್ತುವುದು ಸೂಕ್ತ. ನಿಯಮಿತವಾಗಿ ಮಾಡುವಂತಹ ವ್ಯಾಯಾಮದಿಂದ ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಮಧುಮೇಹದಂತಹ ಸಮಸ್ಯೆಗೆ ಪರಿಹಾರ ಸಿಗುವುದು. ಹೃದಯದ ರಕ್ತನಾಳಗಳು ಹೆಚ್ಚು ಕ್ರಿಯಾ ಶೀಲವಾಗಿ ಹೃದಯದ ಪರಿಸ್ಥಿತಿ ಸುಧಾರಣೆ ಮಾಡುವುದು.
ಒಂದು ಅಧ್ಯಯನದ ಪ್ರಕಾರ, ವಾರಕ್ಕೆ ಒಂದು ಗಂಟೆಗಿಂತ ಕಡಿಮೆ ತೂಕ ಎತ್ತುವುದು ಹೃದಯಾಘಾತ ಅಥವಾ ಪಾರ್ಶ್ವವಾಯು ಅಪಾಯವನ್ನು 40 ರಿಂದ 70 ಪ್ರತಿಶತ ಕಡಿಮೆ ಮಾಡುತ್ತದೆ. ಈ ಅಧ್ಯಯನವು ಹೃದಯಾಘಾತ ಮತ್ತು ಪಾರ್ಶ್ವವಾಯು ಗಂಭೀರ ಆರೋಗ್ಯ ತೊಡಕುಗಳಿಗೆ ಸಂಬಂಧಿಸಿದ ಅಪಾಯ ಕಡಿಮೆ ಮಾಡುವಲ್ಲಿ ದೈಹಿಕ ಚಟುವಟಿಕೆ ಮಹತ್ವದ ಪಾತ್ರ ವಹಿಸುತ್ತದೆ ಎಂಬುದಾಗಿ ತಿಳಿದುಬಂದಿದೆ.
ಬದಲಾಗಿರುವ ಜೀವನಶೈಲಿ, ದೀರ್ಘಕಾಲ ಕುಳಿತು ಮತ್ತು ಕನಿಷ್ಠ ದೈಹಿಕ ಚಟುವಟಿಕೆ ಹೊಂದಿರುವ ಜನರು, ಹೃದಯಾಘಾತ, ಪಾರ್ಶ್ವವಾಯು ಆರೋಗ್ಯದ ತೊಂದರೆ ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯ ಹೊಂದಿದ್ದಾರೆ. ಧೂಮಪಾನ, ಅಧಿಕ ರಕ್ತದೊತ್ತಡ, ಮಧುಮೇಹ, ದೈಹಿಕ ನಿಷ್ಕ್ರಿಯತೆ, ಅಧಿಕ ತೂಕ ಮತ್ತು ಅಧಿಕ ರಕ್ತದ ಕೊಲೆಸ್ಟ್ರಾಲ್ ಅಪಾಯ ತಂದೊಡ್ಡುತ್ತವೆ. ಜೀವನಶೈಲಿ ಬದಲಾಯಿಸಿ, ಪ್ರತಿಯೊಬ್ಬರೂ ತಮ್ಮ ದೈನಂದಿನ ದಿನಚರಿಯಲ್ಲಿ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಮತ್ತೊಂದು ಅಧ್ಯಯನದ ವರದಿ ಪ್ರಕಾರ ವಾರಕ್ಕೆ ಒಂದು ಗಂಟೆಗೂ ಹೆಚ್ಚು ಕಾಲ ಶಕ್ತಿಯ ವ್ಯಾಯಾಮ ಮಾಡಿದವರಲ್ಲಿ ಮೆಟಾಬಾಲಿಕ್ ಸಿಂಡ್ರೋಮ್ ನ ಬೆಳವಣಿಗೆಯಲ್ಲಿ 29 ಪ್ರತಿಶತ ಕಡಿತ ಹೊಂದಿದೆ. ಇದು ಹೃದ್ರೋಗ, ಪಾರ್ಶ್ವವಾಯು ಮತ್ತು ಮಧುಮೇಹದ ಅಪಾಯ ಹೆಚ್ಚಿಸುತ್ತದೆ. ಹೈಪರ್ಕೊಲೆಸ್ಟರಾಲ್ಮಿಯಾ ಅಪಾಯ 32 ಪ್ರತಿಶತ ಕಡಿಮೆಯಾಗಿದೆ. ಕಾರ್ಡಿಯೋ ವ್ಯಾಯಾಮಕ್ಕಿಂತ ತೂಕ ಎತ್ತುವಿಕೆಯು ಹೃದಯದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ತೂಕ ಎತ್ತುವಿಕೆ ಅಪಾಯಕಾರಿ ಹೃದಯ ಕೊಬ್ಬಿನ ಪೆರಿಕಾರ್ಡಿಯಲ್ ಅಡಿಪೋಸ್ ಅಂಗಾಂಶದ ಪ್ರಮಾಣ ಕಡಿಮೆ ಮಾಡುತ್ತದೆ.
ದೇಹ ಆರೋಗ್ಯವಾಗಿರಲು ವಾರಕ್ಕೆ ಕೇವಲ 30 ರಿಂದ 60 ನಿಮಿಷಗಳ ಸಾಮರ್ಥ್ಯದ ತರಬೇತಿ ಸಾಕಾಗಿದ್ದು, ಈ ಅವಧಿಯಲ್ಲಿ ಕೆಲಸ ಮಾಡಿದವರು ವಿಶೇಷವಾಗಿ ಕ್ಯಾನ್ಸರ್ ಮತ್ತು ಹೃದ್ರೋಗದಿಂದ ಸಾಯುವ ಅಪಾಯವನ್ನು 10% ರಿಂದ 20% ರಷ್ಟು ಕಡಿಮೆ ಹೊಂದಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ. ಯಾವುದೇ ಒತ್ತಡ ಅಥವಾ ಕಠಿಣತೆ ಬಂದರೂ ಅದನ್ನು ತಡೆದುಕೊಳ್ಳುವಂತಹ ಶಕ್ತಿಯು ಹೃದಯಕ್ಕೆ ಸಿಗುವುದು. ನಿಯಮಿತವಾಗಿ ವ್ಯಾಯಾಮ ಮಾಡಿದರೆ ಅದರಿಂದ ರಕ್ತ ಸಂಚಾರವನ್ನು ಸರಿಯಾಗಿಸಿ, ಯಾವುದೇ ತಡೆ ಇದ್ದರೂ ಕೂಡ ನೈಸರ್ಗಿಕವಾಗಿ ನಿವಾರಣೆಯಾಗುವಲ್ಲಿ ನೆರವಾಗುತ್ತದೆ. ನಿಯಮಿತವಾಗಿ ವ್ಯಾಯಾಮ ಮಾಡಿ, ಅತಿಯಾದ ಭಾರವನ್ನು ಎತ್ತಿ ಮಾಡುವ ವ್ಯಾಯಮ ಕಡಿಮೆ ಮಾಡಿದರೆ ಹೃದಯ ಸಂಬಂಧಿ ಸಮಸ್ಯೆಗಳು ಬರುವುದನ್ನು ತಡೆಯಬಹುದು.