PFI : ರಾಷ್ಟ್ರೀಯ ತನಿಖಾ ಸಂಸ್ಥೆ( NIA) ಯಿಂದ ಪಿಎಫ್ ಐ ಸದಸ್ಯರ ವಿಚಾರಣೆ | NIA 23 ತಂಡಗಳಿಂದ ಬೆಳ್ಳಂಬೆಳಗ್ಗೆ ದಾಳಿ
ಇಂದು ಬೆಳ್ಳಂಬೆಳಗ್ಗೆ NIA ( ಎನ್ ಐಎ) ತಂಡ ಆಂಧ್ರಪ್ರದೇಶ, ತೆಲಂಗಾಣದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿರುವ ಕುರಿತು ವರದಿಯಾಗಿದೆ. ಹಿಂಸಾಚಾರ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ಪ್ರಚೋದಿಸುವ ಸಂಬಂಧದಲ್ಲಿ ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾ (ಪಿಎಫ್‌ಐ) ಸದಸ್ಯರನ್ನು ವಿಚಾರಣೆಗೆ ತೆಗೆದುಕೊಂಡಿದ್ದಾರೆ.
23 ತಂಡಗಳ ಎನ್‌ಐಎ ಅಧಿಕಾರಿಗಳು ನಿಜಾಮಾಬಾದ್, ಕರ್ನೂಲ್, ಗುಂಟೂರು ಮತ್ತು ನೆಲ್ಲೂರು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಶೋಧಕಾರ್ಯ ಮಾಡಿದೆ. ಈ ದಾಳಿಯ ಉದ್ದೇಶ ಮೂಲಗಳ ಪ್ರಕಾರ, ಪ್ರದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳ ಮಾಹಿತಿಗೆ ಸಂಬಂಧಿಸಿದ್ದಾಗಿದೆ.
ಪಿಎಫ್ ಐ ಜಿಲ್ಲಾ ಸಂಚಾಲಕ ಶಾದುಲ್ಲಾ ಮತ್ತು ಸದಸ್ಯರಾದ ಮೊಹಮ್ಮದ್ ಇಮ್ರಾನ್ ಮತ್ತು ಮೊಹಮ್ಮದ್ ಅಬ್ದುಲ್ ಮೊಬಿನ್ ಅವರನ್ನು ವಿಚಾರಣೆಗಾಗಿ ಅಧಿಕಾರಿಗಳು ಕರೆದೊಯ್ದಿದ್ದಾರೆ. ಕರಾಟೆ ಕಲಿಸುವ ನೆಪದಲ್ಲಿ ಹಿಂಸಾಚಾರ ಮತ್ತು ಕಾನೂನುಬಾಹಿರ ಚಟುವಟಿಕೆಗಳು/ತರಬೇತಿಗೆ ಪ್ರಚೋದನೆ ನೀಡಿದ್ದಕ್ಕಾಗಿ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ.
ಎನ್ ಐಎ ಅಧಿಕಾರಿಗಳ ಶೋಧ ಮಾಡುವಾಗ, ನಂದ್ಯಾಲ್ ಮತ್ತು ಕರ್ನೂಲ್‌ನಲ್ಲಿ ಹಲವಾರು ಸ್ಥಳೀಯರು ಅಲ್ಲಿಗೆ ಆಗಮಿಸಿದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಿದ್ದು, ಹಾಗೂ ಅವರನ್ನು ವಾಪಾಸ್ ಹೋಗಿ ಎಂಬ ಘೋಷಣೆಗಳನ್ನು ಕೂಗಿದ್ದಾರೆ.
ಕಳೆದ ಮೂರು ತಿಂಗಳಿಂದ ನಾಪತ್ತೆಯಾಗಿರುವ ಇಲ್ಯಾಜ್ ಎಂಬ ವ್ಯಕ್ತಿಯ ನಿವಾಸವನ್ನು ಅಧಿಕಾರಿಗಳು ಶೋಧಿಸುತ್ತಿದ್ದಾರೆ. ಈತ ಭಯೋತ್ಪಾದಕ ಚಟುವಟಿಕೆಗಳೊಂದಿಗೆ ಸಂಪರ್ಕ ಹೊಂದಿದ್ದು, ಖಾಜಾ ನಗರದಲ್ಲಿ ಟಿಫಿನ್ ಅಂಗಡಿ ನಡೆಸುತ್ತಿದ್ದ ಎನ್ನಲಾಗಿದೆ. ಅಧಿಕಾರಿಗಳು ಈಗ ಇಲ್ಯಾಜ್ ಕುಟುಂಬ ಸದಸ್ಯರ ವಿಚಾರಣೆ ನಡೆಸುತ್ತಿದ್ದಾರೆ.