Gadgets : ನೀವು ಬಳಸುವ ಮೊಬೈಲ್ ಯಾವ ರೀತಿಯ ಅಪಾಯ ಉಂಟು ಮಾಡಬಲ್ಲದು? ಕಂಡು ಹಿಡಿಯುವ ಸುಲಭ ವಿಧಾನ ಇಲ್ಲಿದೆ
ದಿನನಿತ್ಯದ ದಿನಚರಿಯಲ್ಲಿ ಮೊಬೈಲ್ ಎಂಬ ಸಾಧನ ಅವಿಭಾಜ್ಯವಾಗಿಬಿಟ್ಟಿದೆ. ಅರೆಕ್ಷಣ ಬಿಟ್ಟಿರಲಾಗದಷ್ಟು ಜನರ ಮನದಲ್ಲಿ ಮೊಬೈಲ್ ಖಾಯಂ ಸ್ಥಾನ ಪಡೆದುಕೊಂಡುಬಿಟ್ಟಿದೆ. ಸ್ವಲ್ಪ ಹೊತ್ತು ಮೊಬೈಲ್ ಬಳಸದೆ ಇದ್ದರೆ ಏನೋ ಕಳೆದುಕೊಂಡ ಭಾವ ಅನೇಕರನ್ನು ಕಾಡುತ್ತದೆ. ಒಂದು ಮೊಬೈಲ್ ಖರೀದಿಸುವಾಗ ಫೋನ್ನಲ್ಲಿರುವ ಪ್ರೊಸೆಸರ್, ಕ್ಯಾಮೆರಾದ ವಿಶೇಷಣಗಳ ಮೇಲೆ ಅಲ್ಲದೆ ಬ್ಯಾಟರಿಯ ಸಾಮರ್ಥ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇವೆ. ಆದರೆ ಮೊಬೈಲ್ ನ ಅತಿಯಾದ ಬಳಕೆಯಿಂದಾಗುವ ಸಮಸ್ಯೆಯ ಬಗ್ಗೆ ನಿರ್ಲಕ್ಷ್ಯ ತೋರುವವರೆ ಹೆಚ್ಚು. ಹೆಚ್ಚಿನ ತರಂಗಾಂತರವಿರುವ ಸಿಗ್ನಲ್ಗಳನ್ನು ಸ್ವೀಕರಿಸಿಲು ಮತ್ತು ಹೊರಸೂಸಲು ಸಾಧ್ಯವಿರುವಂತಹ ಮೊಬೈಲ್ ಫೋನ್ಗಳು ದಿನನಿತ್ಯದಲ್ಲಿ ಹೆಚ್ಚು ಬಳಕೆ ಯಾಗುತ್ತಿದ್ದು, ಇದು ಹೊರಹಾಕುವ ವಿಕಿರಣಗಳು ದೇಹಕ್ಕೆ ಹಾನಿಕರ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಮೊಬೈಲ್ ರೇಡಿಯೇಷನ್ (ಫೋನ್ಗಳ ವಿಕಿರಣ) ತೀವ್ರತೆಯ ಮಾಪನವೇ ಎಸ್ ಆರ್ ಎಸ್ ( Specific Absorption Rate ). ಅಂದರೆ ಮೊಬೈಲ್ ಫೋನ್ ಬಳಸುವಾಗ ದೇಹಕ್ಕೆ ತಾಕುವ ರೇಡಿಯೋ ಫ್ರೀಕ್ವೆನ್ಸಿ ಅಥವಾ ತೀವ್ರ ತರಂಗಾಂತರದ ಉಷ್ಣತೆಯ ಅಳತೆಯನ್ನು ಎಸ್ ಆರ್ ಎಸ್ನಲ್ಲಿ ಸೂಚಿಸಲಾಗುತ್ತದೆ. SAR ಮೌಲ್ಯವು ಅದನ್ನ ಬಳಸುವಾಗ ದೇಹವು ಎಷ್ಟು ರೇಡಿಯೊ ಆವರ್ತನವನ್ನ ಹೀರಿಕೊಳ್ಳುತ್ತದೆ ಎಂಬುದನ್ನು ಹೇಳುತ್ತದೆ.ಹಾಗಾಗಿ ಗ್ರಾಹಕರು ಫೋನ್ ಖರೀದಿಸುವಾಗ, ವಿಶೇಷಣಗಳನ್ನ ಪರಿಶೀಲಿಸಿ , SAR ಮೌಲ್ಯವನ್ನು ಗಮನಿಸುವುದು ಉತ್ತಮ.
ಎಸ್ ಎ ಆರ್ ನ್ನು ವಾಟ್ಸ್ / ಕಿಲೋಗ್ರಾಂನಲ್ಲಿ ಹೇಳಲಾಗುತ್ತದೆ. ಎಫ್ಸಿಸಿಯ ನಿಯಮವನುಸರಿಸಿ ಒಂದು ಮೊಬೈಲ್ ಹೊರ ಸೂಸುವ ವಿಕಿರಣದ ಗರಿಷ್ಠ ಅಳತೆ 1.6 ವಾಟ್ ಕಿಲೋಗ್ರಾಂ ಆಗಿದ್ದು, ಇದು ಕಡಿಮೆಯಿದ್ದಷ್ಟು ದೇಹಕ್ಕೆ ಒಳ್ಳೆಯದು. ಫೋನ್ನ SAR ಮೌಲ್ಯವನ್ನು ಪರಿಶೀಲಿಸಲು ಹಲವಾರು ಮಾರ್ಗಗಳಿವೆ. ಮೊದಲನೆಯದಾಗಿ, ಫೋನ್ನ ಬಳಕೆದಾರರ ಕೈಪಿಡಿಯನ್ನು ಪರಿಶೀಲಿಸಿ ತಿಳಿಯಬಹುದು. ಅಲ್ಲದೆ ಕೆಲವು ಕಂಪನಿಗಳು ತಮ್ಮ ಅಧಿಕೃತ ವೆಬ್ಸೈಟ್ನಲ್ಲಿ ಫೋನ್ ವಿಶೇಷಣಗಳೊಂದಿಗೆ SAR ಮೌಲ್ಯವನ್ನು ನಮೂದಿಸುತ್ತವೆ. ಇದಲ್ಲದೆ, ಸ್ಮಾರ್ಟ್ ಫೋನ್ ನಲ್ಲಿ *#07# ಎಂದು ಡಯಲ್ ಮಾಡಿದರೆ ಎಸ್ಎಆರ್ ಎಷ್ಟಿದೆ ಎಂದು ಅರಿಯಲು ಸಾಧ್ಯ. ಕೆಲವೊಂದು ಫೋನ್ಗಳಲ್ಲಿ ಸೆಟ್ಟಿಂಗ್ಗೆ ಹೋಗಿ ಎಬೌಟ್ ಫೋನ್ ಎಂಬಲ್ಲಿ ಲೀಗಲ್ ಇನ್ಫಾರ್ಮೇಷನ್ ಪಟ್ಟಿಯಲ್ಲಿ ಎಸ್ಎಆರ್ ಪ್ರಮಾಣ ತಿಳಿಯಬಹುದು.
ನಮ್ಮ ಕಣ್ಣುಗಳು ದೇಹದ ಅತ್ಯಂತ ಸೂಕ್ಷ್ಮ ಭಾಗಗಳಲ್ಲಿ ಒಂದಾಗಿದೆ, ಮೊಬೈಲ್ನ ಪರದೆಯನ್ನು ಹೆಚ್ಚು ಕಾಲ ನೋಡುವುದು ಗಂಭೀರ ಸಮಸ್ಯೆಗೆ ಕಾರಣವಾಗಿ, ಇದು ತೀವ್ರ ತಲೆನೋವು, ಕಣ್ಣುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಫೋನ್ ಬಳಸುವಾಗ ಸ್ವಲ್ಪ ಸಮಯದ ವಿರಾಮ ತೆಗೆದುಕೊಳ್ಳುವುದು ಬಹಳ ಉತ್ತಮ. ಫೋನ್ನ ಹಾನಿಕಾರಕ ಕಿರಣಗಳು ಚರ್ಮದ ಮೇಲೂ ಪರಿಣಾಮ ಬೀರುತ್ತದೆ. ರಾತ್ರಿ ಹೆಚ್ಚಿನ ಸಮಯದವರೆಗೆ ಮೊಬೈಲ್ ಬಳಕೆ ಮಾಡುವುದರಿಂದ ನಿದ್ರಾ ಹೀನತೆ ಸಮಸ್ಯೆ ಉಂಟಾಗುತ್ತದೆ.