ಉಸಿರುಗಟ್ಟಿಸಿ ನಿವೃತ್ತ ಶಿಕ್ಷಕಿಯ ಕೊಂದು ಚಿನ್ನಾಭರಣ ದರೋಡೆ

ಬೆಂಗಳೂರು: ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ನಿವೃತ್ತ ಶಿಕ್ಷಕಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿ ಚಿನ್ನಾಭರಣವನ್ನು ದರೋಡೆ ಮಾಡಿರುವ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

 

ಬೆಂಗಳೂರಿನ ಅಂಬಾಭವಾನಿ ದೇವಸ್ಥಾನದ ಬಳಿಯ ಪ್ರಸನ್ನ ಕುಮಾರಿ (61) ಕೊಲೆಯಾದವರು.

ವಿಜಯವಾಡ ಮೂಲದ ಪ್ರಸನ್ನ ಕುಮಾರಿಯವರು ಚಿಂತಾಮಣಿಯ ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಇತ್ತೀಚಿಗೆ ಅವರು ನಿವೃತ್ತಿಯಾಗಿದ್ದರು. ನಿವೃತ್ತಿಯ ಬಳಿಕ ಒಂಟಿಯಾಗಿ ಜೀವನವನ್ನು ಸಾಗಿಸುತ್ತಿದ್ದ ಪ್ರಸನ್ನ ಕುಮಾರಿಯ ಮನೆಗೆ ನಿನ್ನೆ ರಾತ್ರಿ ಬಂದಿದ್ದ ದುಷ್ಕರ್ಮಿಗಳು ಆಕೆಯ ಕೈಕಾಲು ಕಟ್ಟಿ ಉಸಿರುಗಟ್ಟಿಸಿ ಕೊಲೆಗೈದು ಮನೆಯಲ್ಲಿದ್ದ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ತಡರಾತ್ರಿ ಕೊಲೆ ನಡೆದಿರುವ ಸಾಧ್ಯತೆ ಬಗ್ಗೆ ಶಂಕಿಸಲಾಗಿದ್ದು, ವಿದ್ಯಾರಣ್ಯಪುರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave A Reply

Your email address will not be published.