ಬ್ರಿಟನ್ ರಾಷ್ಟ್ರದ ರಾಣಿ ಎರಡನೇ ಎಲಿಜಬೆತ್ ನಿಧನ

ಬ್ರಿಟನ್ ರಾಷ್ಟ್ರದ ರಾಣಿ ಎರಡನೇ ಎಲಿಜಬೆತ್ ( 96 ವರ್ಷ) ಅವರು ಅನಾರೋಗ್ಯದ ಕಾರಣದಿಂದ ಗುರುವಾರ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಸುದ್ದಿ ಇಂದು ಬೆಳಗ್ಗಿನಿಂದಲೂ ವರದಿ ಬರುತ್ತಲೇ ಇತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.

ರಾಣಿ ಅವರಿಗೆ ಬರ್ ಮೊರಾಲ್ ನಲ್ಲಿ ವೈದ್ಯಕೀಯ ಶುಶ್ರೂಷೆ ನೀಡಲಾಗುತ್ತಿತ್ತು. ಅವರ ನಿಧನ ವಾರ್ತೆಯನ್ನು ಬಂಕಿಂಗ್ ಹ್ಯಾಮ್ ಅರಮನೆ ಪ್ರಕಟಿಸುತ್ತಿದ್ದಂತೆ ಬ್ರಿಟನ್​ನಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. 

1952 ರಲ್ಲಿ ರಾಣಿಯಾಗಿ ಪಟ್ಟ ಅಲಂಕರಿಸಿದ್ದ ಎರಡನೇ ಎಲಿಜಬೆತ್ ರಾಣಿ ಬ್ರಿಟನ್ ದೇಶದ ಇತಿಹಾಸದಲ್ಲೇ ಅತಿ ಸುದೀರ್ಘ ಕಾಲ ಆಡಳಿತ ನಡೆಸಿದ ವ್ಯಕ್ತಿ ಎಂಬ ದಾಖಲೆ ಬರೆದಿದ್ದಾರೆ. 70 ವರ್ಷಗಳಿಂದಲೂ ಅವರು ರಾಣಿಯಾಗಿ ಅಧಿಕಾರ ನಡೆಸಿದ್ದಾರೆ.

ಕಳೆದ ವರ್ಷ ಎಲಿಜಬೆತ್‌ ರಾಣಿಯ ಪತಿ ಫಿಲಿಪ್ (99) ನಿಧನ ಹೊಂದಿದ್ದರು. ಎರಡನೇ ಎಲಿಬಬೆತ್‌ಗೆ ನಾಲ್ವರು ಮಕ್ಕಳಿದ್ದು, ವೇಲ್ಸ್ ರಾಜಕುಮಾರ್ ಚಾರ್ಲ್ಸ್ ಮೊದಲನೆಯ ಪುತ್ರ, ಹಾಗೆಯೇ, ಪ್ರಿನ್ಸ್ ಆಂಡ್ರ್ಯೂ, ಪ್ರಿನ್ಸ್ ಎಡ್ವರ್ಡ್ ಮತ್ತು ರಾಜಕುಮಾರಿ ಆನ್ ಅವರು ಇತರ ಮೂವರು ಮಕ್ಕಳು

ಕಳೆದ ವರ್ಷದ ಅಕ್ಟೋಬರ್ ತಿಂಗಳಿಂದಲೂ ರಾಣಿ ಎಲಿಜಬೆತ್ ಅವರ ಆರೋಗ್ಯ ಸ್ಥಿತಿ ಕ್ಷೀಣಿಸಿತ್ತು. ಮಾಹಿತಿಗಳ ಪ್ರಕಾರ,ಅವರಿಗೆ ನಡೆಯಲು ಮತ್ತು ನಿಂತುಕೊಳ್ಳಲೂ ಕಷ್ಟ ಎಂಬಂತಹ ಮಾತುಗಳು ಕೇಳಿಬರುತ್ತಿದ್ದವು. ವಯೋಸಹಜ ಅನಾರೋಗ್ಯದಿಂದ ಅವರು ಬಳಲುತ್ತಿದ್ದಾರೆನ್ನಲಾಗಿದೆ.

Leave A Reply

Your email address will not be published.