10 ತಿಂಗಳ ಮಗುವನ್ನು ಅಲ್ಲೇ ಬಿಟ್ಟು ಕಾಲುವೆಗೆ ಜಿಗಿದು ಯುವಕನ ಪ್ರಾಣ ಉಳಿಸಿದ ಗಟ್ಟಿಗಿತ್ತಿ ಮಹಿಳೆ! | ಹೀಗಿದೆ ನೋಡಿ ಇವರ ಸಾಹಸಮಯ ಕಾರ್ಯ..

ಅದೃಷ್ಟ ಚೆನ್ನಾಗಿದ್ದರೆ ಎಂತಹ ಅಪಾಯದಿಂದಲೂ ಪಾರಾಗಬಹುದೆಂಬ ಮಾತಿದೆ. ಅದರಂತೆ ಇಲ್ಲೊಬ್ಬ 25 ವರ್ಷದ ಯುವಕನಿಗೆ ಮಹಿಳೆಯೊಬ್ಬರು ಸಹಾಯ ಮಾಡಿ ಪ್ರಾಣವನ್ನೇ ಉಳಿಸಿದ್ದು, ಅದೃಷ್ಟದಿಂದ ಪಾರಾಗಿದ್ದಾನೆ.

ಹೌದು. ತನ್ನ 10 ತಿಂಗಳ ಮಗುವನ್ನು ನೆಲದ ಮೇಲೆ ಮಲಗಿಸಿ, ಕಾಲುವೆಗೆ ಜಿಗಿದು ಯುವಕನನ್ನು ರಕ್ಷಿಸಿದ್ದಾರೆ ಸಾಹಸಿ ಮಹಿಳೆ. ಇಂತಹದೊಂದು ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನೆಂದು ನೀವೇ ನೋಡಿ..

30 ವರ್ಷದ ರುಬಿನಾ ಕಂಜರಾ ಎಂಬ ಮಹಿಳೆಯೇ ಆ ಗಟ್ಟಿಗಿತ್ತಿ. ಈಕೆ ಗುರುವಾರ ಬಟ್ಟೆ ಒಗೆಯಲು ತನ್ನ 10 ತಿಂಗಳ ಮಗುವನ್ನು ಹೊತ್ತುಕೊಂಡು ಕಾಲುವೆ ಬಳಿ ಹೋಗಿದ್ದರು. ಇದೇ ಸಂದರ್ಭದಲ್ಲಿ ಭೋಪಾಲ್ ಜಿಲ್ಲೆಯ ಕದೈಯಾಕಲಾ ಗ್ರಾಮದ ನಿವಾಸಿ 25 ವರ್ಷದ ರಾಜು ಅಹಿರ್ವಾರ್ ಮತ್ತು ಆತನ ಸ್ನೇಹಿತ ಜಿತೇಂದ್ರ ಅಹಿರ್ವಾರ್, ಹೊಲಕ್ಕೆ ಕೀಟನಾಶಕಗಳನ್ನು ಸಿಂಪಡಿಸಲು ನೆರೆಯ ಖಜುರಿಯಾ ಗ್ರಾಮಕ್ಕೆ ತೆರಳಿದ್ದರು.

ಆದ್ರೆ, ಅಂದು ಧಾರಾಕಾರ ಮಳೆ. ಹೀಗಾಗಿ ಕೆಲಸಕ್ಕೆ ಹೋಗಿದ್ದ ಯುವಕರಿಬ್ಬರು ವಾಪಸ್ಸು ಬರುವಾಗ ಎರಡು ಗ್ರಾಮಗಳನ್ನು ಬೇರ್ಪಡಿಸುವ ಕಾಲುವೆ ಉಕ್ಕಿ ಹರಿಯುತ್ತಿತ್ತು. ಇದರಿಂದಾಗಿ ಇಬ್ಬರೂ ಪರ್ಯಾಯ ಮಾರ್ಗದಲ್ಲಿ ತಮ್ಮ ಗ್ರಾಮವನ್ನು ತಲುಪಲು ಯೋಚಿಸಿ, ಬೈಕ್‌ಗೆ ಕೀಲಿಗಳನ್ನು ಇನ್ನೊಂದು ಬದಿಗೆ ಎಸೆಯಲು ಪ್ರಯತ್ನಿಸಿದರು. ಆದರೆ, ಕೀಗಳು ಮಾತ್ರ ಹರಿಯುವ ನೀರಿನಲ್ಲಿ ಬಿದ್ದು ಕಣ್ಮರೆಯಾಯಿತು.

ಇಷ್ಟೆಲ್ಲಾ ಘಟನೆಗಳನ್ನು ನೋಡುತ್ತಿದ್ದ ರುಬೀನಾ, ಯುವಕರಿಗೆ ಎಚ್ಚರಿಕೆ ನೀಡುತ್ತಿದ್ದರು. ಆದರೂ, ಇವರ ಮಾತಿಗೆ ಕಿವಿಕೊಡದೆ ಇಬ್ಬರು ಕೂಡ ಕಾಲುವೆಯನ್ನು ದಾಟಲು ನಿರ್ಧರಿಸಿದರು. ಅಷ್ಟರಲ್ಲೇ ಕಾಲುವೆ ಒಳಗೆ ಇಳಿಯುತ್ತಿದ್ದಂತೆ ಸಮತೋಲನ ಕಳೆದುಕೊಂಡು ನೀರಿನಲ್ಲಿ ಮುಳುಗಲು ಆರಂಭಿಸಿದರು. ರಾಜು ‘ದೀದಿ ದೀದಿ’ ಎಂದು ರುಬಿನಾ ಬಳಿ ಸಹಾಯಕ್ಕಾಗಿ ಕೂಗಿಕೊಂಡನು.

ರಾಜು ಅಳುವ ಶಬ್ದವನ್ನು ಕೇಳಿ ಒಂಚೂರು ಹಿಂದೆ ಮುಂದೆ ಯೋಚಿಸದೆ ತನ್ನ ಮಗುವನ್ನು ಅಲ್ಲಿಯೇ ನೆಲದ ಮೇಲೆ ಇಟ್ಟು ಕಾಲುವೆ ಹಾರಿ, ರಾಜುನನ್ನು ಬದುಕುಳಿಸಿದರು. ಆದರೆ, ರಾಜು ಸ್ನೇಹಿತ ಜೀತೇಂದ್ರನ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದರಿಂದ ಆತನನ್ನು ಕಾಪಾಡಲು ಸಾಧ್ಯವಾಗಲಿಲ್ಲ. ಮರು ದಿನ ಬೆಳಗ್ಗೆ ಆತನ ಮೃತದೇಹವನ್ನು ಜಿಲ್ಲಾ ಆಡಳಿತ ಹೊರ ತೆಗೆಸಿತು.

ಘಟನೆಯ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ರಬೀನಾ, ಅವನು ‘ದೀದಿ ಬಚಾವೋ’ ಎಂದು ಕೂಗುತ್ತಿದ್ದನು, ನಾನು ಎರಡು ಬಾರಿ ಯೋಚಿಸಲಿಲ್ಲ, ಅವನು ನನ್ನ ಹಳ್ಳಿಯವನು, ನನಗೆ ಅವನು ಗೊತ್ತಿತ್ತು, ನನಗೂ ಈಜು ತಿಳಿದಿತ್ತು ಮತ್ತು ನಾನು ಅವನನ್ನು ಉಳಿಸುತ್ತೇನೆ ಎಂಬ ಭರವಸೆ ಇತ್ತು. ಹೀಗಾಗಿ ನಾನು ಪ್ರಯತ್ನಿಸಿ, ಬಚಾವ್​ ಮಾಡುವಲ್ಲಿ ಯಶಸ್ವಿಯಾದೆ. ಆದರೆ, ಆತನ ಸ್ನೇಹಿತನನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ರುಬಿನಾ ಹೇಳಿದ್ದಾರೆ.

ಇಂತಹ ಸಾಹಸಗಿತ್ತಿ ಮಹಿಳೆಯ ಧೈರ್ಯವನ್ನು ಮೆಚ್ಚಿ ಪೊಲೀಸರು ನಗದು ಬಹುಮಾನವನ್ನು ನೀಡಿದ್ದಾರೆ. ಅಲ್ಲದೆ, ರಬೀನಾ ಅವರ ಸಹೋದರ ಪೊಲೀಸರ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ಅವರಿಗೂ ಸಹ ಬಹುಮಾನ ಬಂದಿದೆ. ಒಟ್ಟಾರೆ, ಈ ಗಟ್ಟಿಗಿತ್ತಿಯ ಸಾಹಸಿ ಎನ್ನುವ ಹೊಗಳಿಕೆಯ ಜೊತೆಗೆ ಪ್ರಾಣವನ್ನು ಉಳಿಸಿದ ಹೆಮ್ಮೆ ತನ್ನದಾಗಿಸಿಕೊಂಡಿದ್ದಾಳೆ.

Leave A Reply

Your email address will not be published.