ನಿಮ್ಮ ಕಾರಿಗೆ ‘ಬ್ಲ್ಯಾಕ್ ಸನ್ ಫಿಲ್ಮ್’ ಹಾಕಿದ್ದೀರಾ ? ಹಾಗಾದರೆ ಈ ಮಹತ್ವದ ಮಾಹಿತಿ ನಿಮಗಾಗಿ

ರೂಲ್ಸ್ ಇರುವುದೇ ಬ್ರೇಕ್ ಮಾಡುವುದಕ್ಕೆ ಎಂಬ ಟ್ರೆಂಡ್ ಅನ್ನು ಫಾಲೋ ಮಾಡುವ ಜನರೇ ಹೆಚ್ಚು. ದಂಡ ಕಟ್ಟಬೇಕಾಗುವ ಸನ್ನಿವೇಶ ಬಂದಾಗಲೆಲ್ಲ ಅದರಿಂದ ತಪ್ಪಿಸಿಕೊಳ್ಳುವ ಹಾದಿಯನ್ನೇ ಹೆಚ್ಚು ಚಿಂತಿಸುವುದು ಸಾಮಾನ್ಯ.

 

ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ಮಾಡಬೇಡಿ ಎಂದು ನಾಮಫಲಕ ಇದ್ದಲ್ಲೇ ನಿಂತು ಸಿಗರೇಟ್ ಸೇದುವ ಜನರೇ ಅಧಿಕ. ಶಾಲಾ ಕಾಲೇಜಿನ ಆವರಣದಲ್ಲಿ ನಿಧಾನವಾಗಿ ವಾಹನ ಚಾಲನೆ ಮಾಡಿ ಎಂದರೂ ಕ್ಯಾರೇ ಎನ್ನದೇ ಹೈ ಸ್ಪೀಡ್ ಅಲ್ಲಿ ಹೋಗುವ ಗಾಡಿಯನ್ನು ಕಂಡಾಗ ಅವರ ಜೀವ ಉಳಿದರೆ ಸಾಕು ಎಂದು ಕೊಳ್ಳುವುದುಂಟು. ಈ ಎರಡು ವರ್ಷಗಳಲ್ಲಿ ಕೋವಿಡ್ ಸಮಯದಲ್ಲಿ ಸಾರ್ವಜನಿಕ ಪ್ರದೇಶ, ಬಸ್ ನಲ್ಲಿ ಮಾಸ್ಕ್ ಧರಿಸದೆ ಹೋದಾಗ ದಂಡ ವಿಧಿಸಿರುವುದನ್ನು ನೆನಪಿಸಿಕೊಳ್ಳಬಹುದು.

ಸಾರ್ವಜನಿಕ ಹಿತಕ್ಕಾಗಿ ಇರುವಂತಹ ರಸ್ತೆ ನಿಯಮಗಳನ್ನು ಗಾಳಿಗೆ ತೂರಿ, ನಿಯಮಗಳನ್ನು ಪಾಲಿಸದೆ ಅಪಾಯಕ್ಕೆ ಆಹ್ವಾನ ತಂದು ಕೊಳ್ಳುವವರೇನೂ ಕಮ್ಮಿ ಇಲ್ಲ.
ಹೆಲ್ಮೆಟ್ ಧರಿಸದೆ ಬೈಕ್ ಏರಿ ಟ್ರಾಫಿಕ್ ಪೊಲೀಸ್ ಕಂಡ ತಕ್ಷಣ ಫೈನ್ ಕಟ್ಟುವ ಬದಲು ಬೈಕನ್ನು ರೂಟ್ ಬದಲಿಸಿ ಜೂಟ್ ಎಂದು ತಪ್ಪಿಸಿಕೊಂಡು ಟ್ರಾಫಿಕ್ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುವವರೂ ಕೂಡ ಇದ್ದಾರೆ.

ಬ್ಲ್ಯಾಕ್ ಸನ್ ಫಿಲ್ಮ್ಸ್ ಹಾಕಿಕೊಂಡಿರುವ ಕಾರುಗಳಿಗೆ ದಂಡ

ಹೈದರಾಬಾದ್ ನಗರದಲ್ಲಿ ಈಗಾಗಲೇ ಟ್ರಾಫಿಕ್ ಪೊಲೀಸರು ಬ್ಲ್ಯಾಕ್ ಸನ್ ಫಿಲ್ಮ್ಸ್ ಅಂದರೆ ಕಿಟಕಿಯ ಮೇಲೆ ಕಪ್ಪು ಬಣ್ಣದ ಫಿಲ್ಮ್ಸ್ ಇರುವ ಕಾರುಗಳಿಗೆ ದಂಡ ವಿಧಿಸುತ್ತಿದ್ದಾರೆ. ಸಂಚಾರಿ ಪೊಲೀಸ್ ತಂಡವು ಬ್ಲ್ಯಾಕ್ ಸನ್ ಫಿಲ್ಮ್ಸ್ ಹಾಕಿಕೊಂಡಿರುವ ವಾಹನಗಳನ್ನು ತಡೆದು ನಿಲ್ಲಿಸಿ ವಾಹನದ ಕಿಟಕಿಯ ಮೇಲಿರುವ ಈ ಫಿಲ್ಮ್ಸ್ ಅನ್ನು ತೆಗೆದು ವಾಹನದ ಚಾಲಕರಿಗೆ ಭಾರಿ ದಂಡವನ್ನು ವಿಧಿಸಿದ್ದಾರೆ.

ಕಾರಿನ ಕಿಟಕಿಗಳ ಮೇಲೆ ವಿಂಡ್ ಸ್ಕ್ರೀನ್ ಎಷ್ಟಿರಬೇಕು?
ಕಾನೂನಿನ ಪ್ರಕಾರ ಕಪ್ಪು ಬಣ್ಣದ ಬ್ಲ್ಯಾಕ್ ಸನ್ ಫಿಲ್ಮ್ಸ್ ಗಳ ಬಳಕೆಯನ್ನು ನಿಷೇಧಿಸಲಾಗಿದೆ. ಆದರೂ ವಿಂಡ್ ಸ್ಕ್ರೀನ್ ಮತ್ತು ಹಿಂಭಾಗದ ಕಿಟಕಿ ಗಾಜು ಕನಿಷ್ಠ 70 ಪ್ರತಿಶತದಷ್ಟು ಗೋಚರತೆಯನ್ನು ಹೊಂದಿದ್ದರೆ, ಬದಿಯ ಕಿಟಕಿಗಳು 50 ಪ್ರತಿಶತದಷ್ಟು ಗೋಚರತೆಯನ್ನು ಹೊಂದಿರುವ
ಟಿಂಡೆಡ್ ಗಾಜನ್ನು ಬಳಸಬಹುದು.

ಬ್ಲ್ಯಾಕ್ ಸನ್ ಫಿಲ್ಮ್ಸ್ ಅನ್ನು ತೆಗೆಯುವುದು ಹೇಗೆ?
ಬ್ಲ್ಯಾಕ್ ಸನ್ ಫಿಲ್ಮ್ಸ್ ಅನ್ನು ಕಾರಿನ ಕಿಟಕಿಗೆ ಅಳವಡಿಸಿದ್ದರೆ, ಅದನ್ನು ತೆಗೆದು ಹಾಕಲು ಬಯಸುವುದಾದರೆ ಸನ್ ಫಾಯಿಲ್ ನ ಅಂಟನ್ನು ಕರಗಿಸಲು ಹಿಟ್ ಗನ್ ಅಥವಾ ಹೇರ್ ಡ್ರೈಯರ್ ಅನ್ನು ಬಳಸಬಹುದು. ಈ ರೀತಿ ಮಾಡುವುದರಿಂದ ಗಾಜಿನ ಮೇಲೆ ಗೀರು ಬೀಳುವುದು ತಪ್ಪುತ್ತದೆ.

ಟಿಂಡೆಡ್ ಫಾಯಿಲ್ ಅನ್ನು ತೆಗೆದ ನಂತರ ಉಳಿದ ಅಂಟನ್ನು ತೊಡೆದು ಹಾಕಲು ಸಾಬೂನಿನ ನೀರನ್ನು ಬಳಸಬಹುದು.
ಸರ್ಕಾರ ಜಾರಿಗೆ ತರುವ ನಿಯಮಾವಳಿಗಳು ಜನರ ಸುರಕ್ಷ ತೆಯ ದೃಷ್ಟಿಕೋನವನ್ನು ಕೇಂದ್ರೀಕರಿಸಿ ಜನರ ಹಿತವನ್ನು ಬಯಸುವಾಗ ಜನರ ಸ್ಪಂದನೆ ಕೂಡ ಪರಿಗಣನೆಯಾಗುತ್ತದೆ.ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಸಾರ್ವಜನಿಕರು ಟ್ರಾಫಿಕ್ ರೂಲ್ಸ್ ಇತರೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮುಂದಾಗುವ ಅದೆಷ್ಟೋ ಅನಾಹುತಗಳಿಗೆ ಬ್ರೇಕ್ ನೀಡಬಹುದು.

Leave A Reply

Your email address will not be published.