ಕೇಂದ್ರ ಸರಕಾರದ ಸುಕನ್ಯಾ ಸಮೃದ್ಧಿ ಯೋಜನೆಯ ನಿಯಮದಲ್ಲಿ ಇಂದಿನಿಂದಲೇ ಆಗಲಿದೆ ಮಹತ್ವದ ಬದಲಾವಣೆ!
ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಹೆತ್ತವರಿಗೆ ಅನುಕೂಲ ಆಗಲಿ ಎಂದೇ ಕೇಂದ್ರ ಸರಕಾರ ಸುಕನ್ಯಾ ಸಮೃದ್ಧಿ ಯೋಜನೆಯನ್ನು ರೂಪಿಸಿದೆ. ಹೆಣ್ಣು ಮಕ್ಕಳಿಗಾಗಿ ಪೋಷಕರು ಬಂಡವಾಳ ಹೂಡುವ ಮೂಲಕ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ 10 ವರ್ಷಗಳ ಕಾಲ ಹೂಡಿಕೆ ಮಾಡಬಹುದು. ಅಥವಾ ಒಂದೇ ಬಾರಿ ಹಣ ಠೇವಣಿ ಇಡಬಹುದು. 10 ವರ್ಷದ ನಂತರ ಆ ಹಣದ ಮೇಲೆ ಬಡ್ಡಿ ಸೇರಿ ಹೆಣ್ಣು ಮಕ್ಕಳಿಗೆ ದೊಡ್ಡ ಮೊತ್ತ ಲಭಿಸುತ್ತದೆ.
ಇದೀಗ ಸುಕನ್ಯಾ ಸಮೃದ್ಧಿ ಯೋಜನೆಯ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಇಂದಿನಿಂದಲೇ ಜಾರಿಗೆ ಬಂದಿದೆ. ಈ ಮೊದಲು ಸುಕನ್ಯಾ ಸಮೃದ್ಧಿ ಯೋಜನೆ ಒಂದೇ ಕುಟುಂಬದ ಇಬ್ಬರು ಹೆಣ್ಣು ಮಕ್ಕಳಿಗೆ ಮಾತ್ರ ಸೀಮಿತವಾಗಿತ್ತು. ಇಬ್ಬರು ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆದರೆ ಅವರಿಗೆ ಸೆಕ್ಷನ್ 80ಸಿ ಪ್ರಕಾರ ತೆರಿಗೆ ವಿನಾಯಿತಿ ಲಭಿಸುತ್ತಿತ್ತು. ನಂತರ ಮಕ್ಕಳಿಗೆ ಈ ಸೌಲಭ್ಯ ಸಿಗುತ್ತಿರಲಿಲ್ಲ.
ಆದರೆ ಇದೀಗ ಸುಕನ್ಯಾ ಸಮೃದ್ಧಿ ಯೋಜನೆಯ ನಿಯಮದಲ್ಲಿ ಬದಲಾವಣೆ ಮಾಡಲಾಗಿದ್ದು, ಒಂದು ವೇಳೆ ಅವಳಿ ಜವಳಿ ಹೆಣ್ಣು ಮಗು ಜನಿಸಿದರೆ ಆ ಎರಡೂ ಮಕ್ಕಳು ಹಾಗೂ ಮೊದಲು ಹುಟ್ಟಿದ ಮಗುವಿಗೂ 80ಸಿ ಸೆಕ್ಷನ್ ಅಡಿ ತೆರಿಗೆ ವಿನಾಯಿತಿ ಲಭಿಸಿದೆ. ಅಂದರೆ ಒಟ್ಟಾರೆ ಮೂರು ಮಕ್ಕಳಿಗೆ ಈ ಸೌಲಭ್ಯ ಪಡೆಯಬಹುದಾಗಿದೆ.
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ನೋಂದಾಯಿತ ಮಗು ಅವಧಿಗೂ ಮುನ್ನ ಮೃತಪಟ್ಟರೆ ಅಥವಾ ವಿಳಾಸ ಬದಲಾದರೆ ಸ್ವಯಂ ಆಗಿ ಖಾತೆ ರದ್ದಾಗುತ್ತದೆ. ಇದು ಇವರೆಗೂ ಇದ್ದ ನಿಯಮ. ಆದರೆ ಇದೀಗ ಜೀವ ಹಾನಿಯಂತಹ ಕಾಯಿಲೆ ಇರುವ ಮಗುವಿನ ಹೆಸರಿನಲ್ಲಿ ಖಾತೆ ಇದ್ದರೆ ಅಥವಾ ಪೋಷಕರು ಇಲ್ಲದಿದ್ದರೆ ಆ ಖಾತೆ ಕೂಡ ರದ್ದಾಗುತ್ತದೆ.
ಸುಕನ್ಯಾ ಸಮೃದ್ಧಿ ಯೋಜನೆಯಡಿ ಖಾತೆ ತೆರೆದರೆ ಅದು ಮಗುವಿಗೆ 21 ವರ್ಷ ಪೂರೈಸಿದಾಗ ಪೂರ್ಣ ಹಣ ಬರುತ್ತದೆ. ಆದರೆ 18 ವರ್ಷ ನಂತರ ಬಾಲಕಿ ಶಿಕ್ಷಣಕ್ಕಾಗಿ ಈ ಖಾತೆಯಿಂದ ಸ್ವಲ್ಪ ಹಣ ಪಡೆಯಬಹುದಾಗಿದೆ. ಸುಕನ್ಯ ಸಮೃದ್ಧಿ ಯೋಜನೆಯಡಿ ಖಾತೆ ತೆರೆದರೆ ಶೇ.7.6ರಷ್ಟು ಬಡ್ಡಿ ಲಭಿಸುತ್ತದೆ. ಅಂಚೆ ಕಚೇರಿಯಲ್ಲಿ ಸಾಮಾನ್ಯವಾಗಿ ಇತರೆ ಯೋಜನೆಗಳಿಗೆ ನೀಡುವ ಬಡ್ಡಿದರಕ್ಕಿಂತ ಹೆಚ್ಚಿನ ಬಡ್ಡಿ ದರವನ್ನು ಈ ಯೋಜನೆಯಲ್ಲಿ ಮಾತ್ರ ನೀಡಲಾಗುತ್ತದೆ. ಕನಿಷ್ಠ 1000 ರೂ. ಮಾಸಿಕ ಕಂತು ಪಾವತಿಸಿದರೆ ತಿಂಗಳಿಗೆ 12 ಸಾವಿರ ರೂ. ಠೇವಣಿ ಲೆಕ್ಕಕ್ಕೆ ಬರುತ್ತದೆ. 21 ವರ್ಷ ಆಗುವಾಗ 10 ಲಕ್ಷ ಸುಮಾರಿಗೆ ಹಣ ಪಡೆಯಬಹುದಾಗಿದೆ.