ಧ್ವಜಾರೋಹಣವಾದ ಕೆಲವೇ ಗಂಟೆಗಳಲ್ಲಿ ಟಿಆರ್‌ಎಸ್ ಮುಖಂಡನ ಬರ್ಬರ ಹತ್ಯೆ

ಹೈದರಾಬಾದ್: ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್‌ಎಸ್)ಯ ಮುಖಂಡನನ್ನು ನಾಲ್ವರು ಅಪರಿಚಿತ ವ್ಯಕ್ತಿಗಳು ಕೊಚ್ಚಿ ಕೊಲೆ ಮಾಡಿದ್ದಾರೆ. ಟಿಆರ್‌ಎಸ್ ನಾಯಕ ಸ್ವಾತಂತ್ರ್ಯ ದಿನದ ಹಿನ್ನೆಲೆ ಖಮ್ಮಂ ಜಿಲ್ಲೆಯ ಮಂಡಲದ ತೆಲದರುಪಲ್ಲಿ ಗ್ರಾಮದಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಿ ಹಿಂದಿರುಗುತ್ತಿದ್ದ ವೇಳೆ ಘಟನೆ ನಡೆದಿದೆ.

 

ಟಿಆರ್‌ಎಸ್ ನಾಯಕ ತಮ್ಮಿನೇನಿ ಕೃಷ್ಣಯ್ಯ ಅವರು ಧ್ವಜಾರೋಹಣ ಮಾಡಿ ಬೈಕ್‌ನಲ್ಲಿ ಹಿಂದಿರುಗುತ್ತಿದ್ದ ವೇಳೆ ತೆಲದರುಪಲ್ಲಿ ಗ್ರಾಮದ ಪ್ರವೇಶ ದ್ವಾರದಲ್ಲಿ ಆಟೋರಿಕ್ಷಾದಲ್ಲಿ ಬಂದ ನಾಲ್ವರು ಅಪರಿಚಿತರು ನಾಯಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಖಮ್ಮಂ ಜಿಲ್ಲೆಯ ಸಹಾಯಕ ಪೊಲೀಸ್ ಕಮಿಷನರ್(ಎಸಿಪಿ) ತಿಳಿಸಿದ್ದಾರೆ.

ನಾಲ್ವರು ಕೃತ್ಯ ಎಸಗಿ ಪರಾರಿಯಾಗಿರುವ ಬಗ್ಗೆ ಮಾಹಿತಿ ದೊರಕಿದ್ದು, ಅವರ ಪತ್ತೆಗೆ 4 ತಂಡಗಳನ್ನು ರಚಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಲಾಗಿದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ನಾಯಕ ತಮ್ಮಿನೇನಿ ಕೃಷ್ಣಯ್ಯ ಅವರು ಕೆಲವು ದಿನಗಳ ಹಿಂದೆ ಸಿಪಿಎಂ ತೊರೆದು ಟಿಆರ್‌ಎಸ್ ಸೇರಿದ್ದರು. ಘಟನೆಯ ಬಳಿಕ ಕೋಪಗೊಂಡ ಜನರು ಸಿಪಿಎಂ ನಾಯಕ ತಮ್ಮಿನೇನಿ ಕೋಟೇಶ್ವರ್ ರಾವ್ ಅವರ ನಿವಾಸದ ಮುಂದೆ ಜಮಾಯಿಸಿ ಕಲ್ಲು ತೂರಾಟ ನಡೆಸಿದ್ದಾರೆ. ಪರಿಣಾಮ ನಾಯಕರ ನಿವಾಸದ ಕೆಲವು ಭಾಗಗಳಿಗೆ ಹಾನಿಯಾಗಿದೆ
ನಾವು ಗುಂಪನ್ನು ಚದುರಿಸಿ, ಸಾಕ್ಷ್ಯಾಧಾರಗಳ ಮೇಲೆ ಪ್ರಕರಣಗಳನ್ನು ದಾಖಲಿಸಿದ್ದೇವೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಹಾಗೂ ತನಿಖೆ ನಡೆಯುತ್ತಿದೆ. ತೆಲದರುಪಲ್ಲಿ ಗ್ರಾಮ ಪಂಚಾಯಿತಿಯಲ್ಲಿ 144 ಸೆಕ್ಷನ್ ವಿಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Leave A Reply

Your email address will not be published.