ಪ್ರವೀಣ್ ನೆಟ್ಟಾರು ಹತ್ಯೆಗೆ ಬಳಸಿದ್ದ ಆಯುಧ ಎಲ್ಲಿಗೆ ಎಸೆದರು..?

Share the Article

ಮಂಗಳೂರು : ಬಿಜೆಪಿ ಯುವನಾಯಕ ಪ್ರವೀಣ್‌ ನೆಟ್ಟಾರು ಅವರನ್ನು ಕೊಲೆ ಮಾಡಿದ ಬಳಿಕ ಹಂತಕರು ಎರಡೂವರೆ ಕಿ.ಮೀ. ದೂರದ ಹೊಳೆ, ಕಾಡಿನ ನಡುವೆ ಕೊಲೆಗೆ ಬಳಸಿದ ಆಯುಧ ಎಸೆದಿರುವ ಅನುಮಾನ ಹುಟ್ಟಿಕೊಂಡಿದ್ದು, ಹಂತಕರು ಪರಾರಿಯಾಗಿರುವ ಈ ರಸ್ತೆ ಅನುಮಾನಕ್ಕೆ ಪುಷ್ಟಿ ನೀಡಿದೆ. ಪ್ರಮುಖ ಅರೋಪಿಗಳ ಬಂಧನವಾದರೂ ಕೊಲೆಗೆ ಬಳಸಿದ ಆಯುಧ ಇನ್ನೂ ಪತ್ತೆಯಾಗಿಲ್ಲ.

ಪ್ರವೀಣ್‌ಗೆ ಮಚ್ಚು ಬೀಸಿ ಆತ ನೆಲಕ್ಕುರುಳಿದ ಬೆನ್ನಲ್ಲೇ ಮೂವರು ಆರೋಪಿಗಳು ಅಂಕತಡ್ಕದ ರಿಯಾಜ್‌ನ ಬೈಕ್‌ನಲ್ಲಿ ಪರಾರಿಯಾಗಿದ್ದರು. ಮಾಸ್ತಿಕಟ್ಟೆ-ಪೆರುವಾಜೆ ರಸ್ತೆ ಮೂಲಕ ಸಂಚರಿಸಿ ಮೊದಲೇ 2 ಕಿ.ಮೀ. ದೂರದ ಕಾಡಿನ ಬಳಿ ನಿಲ್ಲಿಸಿದ ಬೈಕಿನಲ್ಲಿ ಬೇರೆಬೇರೆ ದಾರಿಯಲ್ಲಿ ಸಂಚರಿಸಿದ್ದರು. ರಿಯಾಜ್‌ಗೆ ಪರಿಚಿತ ರಸ್ತೆ ಇದಾಗಿದ್ದ ಕಾರಣ ಆತ ಮೊದಲೇ ಈ ರಸ್ತೆಯಲ್ಲಿ ತೆರಳುವ ಯೋಜನೆ ರೂಪಿಸಿದ್ದ ಎನ್ನಲಾಗಿದೆ.

ಮಾಸ್ತಿಕಟ್ಟೆಯಿಂದ ಪೆರುವಾಜೆ ದಾಟಿ ಕಾಪು ಕಾಡಿನ ಬಳಿಯಿಂದ ಕಾಡಿನ ನಡುವೆ ಬೆಳಂದೂರಿಗೆ ಸಂಪರ್ಕ ಕಲ್ಪಿಸಿರುವ ರಸ್ತೆಯಲ್ಲಿ ಓರ್ವ ಆರೋಪಿ ಸಂಚರಿಸಿರುವುದು ಬೆಳಕಿಗೆ ಬಂದಿದೆ. ಇನ್ನಿಬ್ಬರು ಮುಕ್ಕೂರು ಮಾರ್ಗವಾಗಿ ಸವಣೂರು ಅಥವಾ ಅಂಕತಡ್ಕಕ್ಕೆ ಸಂಚರಿಸಿದ್ದಾರೆ ಎನ್ನುವ ಮಾಹಿತಿ ಪೊಲೀಸರಿಗೆ ಲಭಿಸಿದೆ ಎನ್ನಲಾಗಿದೆ.

ಬಂಧಿತ ಆರೋಪಿಗಳಲ್ಲಿ ಒಬ್ಬನಾದ ಝಾಕಿರ್ ಸವಣೂರಿನವನಾಗಿದ್ದು ಅಲ್ಲಿಗೆ ತೆರಳಿ ಬೈಕ್‌ ಅಡಗಿಟ್ಟಿಸಿರಬಹುದು ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ.

ಪೆರುವಾಜೆ ರಸ್ತೆಯಲ್ಲಿನ ಪುದ್ದೂಟ್ಟು ಸೇತುವೆ ಬಳಿ ಗೌರಿ ಹೊಳೆಗೆ ಅಥವಾ ಕಾಪು, ಕಜೆ, ಬೆಳಂದೂರಿನ ದಟ್ಟ ಕಾಡಿಗೆ ಮಚ್ಚು ಎಸೆದಿರಬಹುದೇ ಎನ್ನುವ ಅನುಮಾನ ಇದೆ. ಇದಕ್ಕೆ ಪುಷ್ಟಿ ಎಂಬಂತೆ ಈ ರಸ್ತೆಯ ಇಕ್ಕೆಲಗಳ ಎಲ್ಲ ಸಿಸಿ ಕೆಮರಾಗಳ ದೃಶ್ಯಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಕೊಲೆ ನಡೆದ ದಿನ ಹೊಳೆ ತುಂಬಿ ಹರಿಯುತ್ತಿದ್ದು ಆರೋಪಿಗಳಿಗೆ ಆಯುಧ ಎಸೆಯಲು ಇದು ಪೂರಕವಾಗಿತ್ತು. ಕೃತ್ಯ ಎಸಗುವ ಮೊದಲೇ ಈ ಬಗ್ಗೆ ತೀರ್ಮಾನಿಸಿದ್ದರು ಎನ್ನಲಾಗಿದ್ದು ಈ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಘಟನೆ ನಡೆದ ಸ್ವಲ್ಪ ಹೊತ್ತಿನಲ್ಲೇ ಪೆರುವಾಜೆ- ಮುಕ್ಕೂರು-ಸವಣೂರು ಮಾರ್ಗವಾಗಿ ಬೈಕೊಂದು ಅತೀ ವೇಗದಲ್ಲಿ ಸಂಚರಿಸಿದ್ದನ್ನು ಹಲವರು ಗಮನಿಸಿದ್ದು, ಪೊಲೀಸರಿಗೆ ತಿಳಿಸಿದ್ದಾರೆ. ಮಾಸ್ತಿಕಟ್ಟೆಯಲ್ಲಿರುವ ಪೆರುವಾಜೆ ದೇವಸ್ಥಾನಕ್ಕೆ ಹೋಗುವ ರಸ್ತೆಯ ದ್ವಾರದ ಬಳಿ ರೈನ್ ಕೋಟ್‌ ಧರಿಸಿದ ಇಬ್ಬರು ಹೆಲ್ಮೆಟ್‌ ಧಾರಿಗಳು ಪ್ರವೀಣ್‌ ಅಂಗಡಿ ಕಡೆ ಮುಖ ಮಾಡಿ ನಿಂತಿದ್ದನ್ನು ಕಂಡವರಿದ್ದಾರೆ. ಹೀಗಾಗಿ ಈ ಎರಡು ಅಂಶಗಳು ಕೊಲೆಯ ಅನಂತರ ಪರಾರಿ ಆಗಲು ಈ ರಸ್ತೆ ಬಳಸಿರುವುದನ್ನು ದೃಢಪಡಿಸುತ್ತಿದೆ. ಇದೊಂದು ಅತ್ಯಂತ ಪ್ಲಾನ್ಡ್ ಮರ್ಡರ್ ಅನ್ನುವುದಕ್ಕೆ ಇದೂ ಒಂದು ಪ್ರಬಲ ಸಾಕ್ಷಿಯಾಗಿದೆ. ಸಾಮಾನ್ಯವಾಗಿ ಹತ್ಯೆ ನಡೆದ ನಂತರ ಹತ್ಯೆಗೆ ಬಳಸಿದ ಆಯುಧ ರಿಕವರ್ ಮಾಡೋದು ಪ್ರಬಲ ಸಾಕ್ಷಿ ಕಲೆಕ್ಟ್ ಮಾಡಿದಂತೆ. ಆರೋಪಿಗಳು ಆರೋಪವನ್ನು ಒಪ್ಪಿಕೊಂಡರೂ, ಬಳಸಿದ ಆಯುಧ ಹುದುಕುವುದನ್ನು ಪೋಲೀಸರು ಬಿಡೋದಿಲ್ಲ. ಹಾಗಾಗಿ ಈಗ ತಳವಾರ್ ನ ತಲಾಶ್ ನಲ್ಲಿದೆ ಖಾಕಿ ಪಡೆ. ಅದಕ್ಕಾಗೇ ಮಫ್ತಿಯಲ್ಲಿ ಬೆಟ್ಟ ಗುಡ್ಡ ಅಲೆಯುತ್ತಿದ್ದಾರೆ ನಮ್ಮ ಆರಕ್ಷಕರು. ಮಳೆಯನ್ನು ಕೂಡಾ ಲೆಕ್ಕಿಸದೆ ನೊರೆಯುಕ್ಕಿಸುತ್ತಾ ಹರಿಯುವ ನದಿ ಕೊಳ್ಳಗಳ ಸುತ್ತಲೂ ಹುಡುಕುತ್ತಿದ್ದಾರೆ.

Leave A Reply