550 ರೂಪಾಯಿಯ ವಿಸ್ಕಿಗಾಗಿ ಜೊಲ್ಲು ಸುರಿಸಿಕೊಂಡು ಕಾದು ಕೂತಿದ್ದ ಮಹಿಳೆಗೆ 5.35 ಲಕ್ಷ ರೂ. ಪಂಗನಾಮ!
ಮದ್ಯ ಪ್ರಿಯರ ಹುಚ್ಚು ಒಂದೋ ಎರಡೋ. ಎಷ್ಟು ಹೊತ್ತಿಗಾದ್ರೂ ಯಾರಾದ್ರೂ ತಂದು ಕೊಟ್ರೆ ಒಳ್ಳೆದಿತ್ತು ಎಂದು ಅಂದುಕೊಳ್ಳುತ್ತಲೇ ಇರುತ್ತಾರೆ. ಅದೇ ರೀತಿ ಇಲ್ಲೊಂದು ಮಹಿಳೆಗೆ ರಾತ್ರಿ ವಿಸ್ಕಿ ಕುಡಿಯುವ ಮನಸ್ಸಾಗಿದೆ. ಆದ್ರೆ, ಹೊರಗಡೆ ಹೋಗಿ ಖರೀದಿಸಲು ಯಾಕೋ ಮುಜುಗರ. ಟೆನ್ಷನ್ ಯಾಕೆ? ಆನ್ಲೈನ್ ಡೆಲಿವರಿ ಇದೆಯಲ್ಲ ಅಂದುಕೊಂಡು ಆರ್ಡರ್ ಮಾಡಿದ್ದಾಳೆ. ಅಲ್ಲಿ ನಡೆದಿದ್ದು ನೋಡಿ ಎಡವಟ್ಟು.
ಇಂದಿನ ಆನ್ಲೈನ್ ವ್ಯವಹಾರ ಎಲ್ಲರಿಗೂ ಗೊತ್ತೇ ಇದೆ. ಉಪಕಾರಕ್ಕಿಂತ ವಂಚನೆಯೇ ಹೆಚ್ಚು. ಅದೇ ರೀತಿ ಬಾಯಲ್ಲಿ ನಿರೂರಿಸಿಕೊಂಡು ಇನ್ನೇನು ವಿಸ್ಕಿ ಬರುತ್ತದೆ ಎಂದು ಆಸೆ ಪಟ್ಟವಳಿಗೆ ಸಿಕ್ಕಿದ್ದು ಮಾತ್ರ ಶಾಕ್. ಹೌದು. 559 ರೂಪಾಯಿಯ ವಿಸ್ಕಿಯ ಆಸೆಯಿಂದ ಮಹಿಳೆ ಬರೋಬ್ಬರಿ ಐದೂವರೆ ಲಕ್ಷ ರೂಪಾಯಿ ಕಳೆದುಕೊಂಡಿದ್ದಾಳೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನೆಂದು ಮುಂದೆ ಓದಿ..
ಈ ಘಟನೆ ಮುಂಬೈನಲ್ಲಿ ನಡೆದಿದ್ದು, ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಮಹಿಳೆಗೆ ವಿಸ್ಕಿ ಕುಡಿಯಬೇಕು ಎನ್ನಿಸಿ, ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದಾಳೆ. ಆಕೆಗೆ ಒಂದು ನಂಬರ್ ಆನ್‌ಲೈನ್‌ನಲ್ಲಿ ಸಿಕ್ಕಿದೆ. ಅದಕ್ಕೆ ಕರೆ ಮಾಡಿದಾಗ ಅವರು “ಮೇಡಂ, ನಾನು ಅಂಗಡಿಯ ಮಾಲೀಕ. ಸದ್ಯ ಅಂಗಡಿಯ ಬಾಗಿಲು ಮುಚ್ಚಿದೆ. ನೀವೇನೂ ಚಿಂತೆ ಮಾಡಬೇಡಿ. ನಿಮಗೆ ಯಾವ ಬ್ರ್ಯಾಂಡ್ ಬೇಕು ಎಂದು ಹೇಳಿ, ನಾವು ಮನೆಗೇ ತಂದುಕೊಡುತ್ತೇವೆ ಎಂದಿದ್ದಾರೆ”.
ಬಳಿಕ, ಕ್ಯೂಆರ್ ಕೋಡ್ ಮೂಲಕ 550 ರೂಪಾಯಿ ಪಾವತಿಸುವಂತೆ ಕೇಳಿದ್ದಾರೆ. ವಿಸ್ಕಿ ಒಮ್ಮೆ ಸಿಕ್ರೆ ಸಾಕು ಅಂದುಕೊಂಡಿದ್ದಾಕೆ, ಆತನ ಸೂಚನೆಯಂತೆ ಕ್ಯೂಆರ್ ಕೋಡ್ ಮೂಲಕ 550 ರೂಪಾಯಿ ಕಳುಹಿಸಿದ್ದಾರೆ. ಆಗ ಆತ ಮೇಡಂ. ನಿಮಗೆ ಡೆಲಿವರಿ ಎಕ್ಸಿಕ್ಯೂಟಿವ್ ಶೀಘ್ರದಲ್ಲೇ ಕರೆ ಮಾಡುತ್ತಾರೆ ಎಂದಿದ್ದಾನೆ.
ನಂತರ ಇನ್ನೊಬ್ಬನ ಕರೆ ಬಂದಿದೆ. ನಾನು ಸೇಲ್ಸ್ ಎಕ್ಸಿಕ್ಯೂಟಿವ್ ಎಂದು ಹೇಳಿದ ಆತ, ಮದ್ಯವನ್ನು ಮನೆಗೆ ತಲುಪಿಸಲು ನೋಂದಣಿ ಕಡ್ಡಾಯವಾಗಿದೆ. ಅಂಗಡಿಯ ವ್ಯಕ್ತಿ ಅದಕ್ಕೆ ಸಹಾಯ ಮಾಡುತ್ತಾರೆ ಎಂದಿದ್ದಾನೆ. ನಂತರ ಇನ್ನೊಬ್ಬ ಕರೆ ಮಾಡಿ ನೋಂದಣಿಗಾಗಿ ಆನ್‌ಲೈನ್‌ನಲ್ಲಿ ಹಣ ಪಾವತಿಸುವಂತೆ ಹೇಳಿದ್ದಾನೆ. ಮಹಿಳೆ ಎಲ್ಲವನ್ನೂ ನಂಬಿಬಿಟ್ಟಿದ್ದಾರೆ. ಅವರು ಕೇಳಿದ ಕೆಲವೊಂದು ದಾಖಲೆ ನೀಡಿದ್ದಾಳೆ. ಸ್ವಲ್ಪ ಹೊತ್ತರಲ್ಲೇ ಆಕೆಯ ಖಾತೆಯಿಂದ 19,051 ರೂ. ವರ್ಗಾವಣೆಯಾದ ಮೆಸೇಜ್ ಬಂದಿದೆ. ಇದನ್ನು ನೋಡಿ ಮಹಿಳೆ ಶಾಕ್ ಆಗಿದ್ದಾಳೆ.
ನಂತರ ಅತ್ತ ಕಡೆಯಿಂದ ಕರೆ ಬಂದು, ಕ್ಷಮಿಸಿ ಟೆಕ್ನಿಕಲ್ ಸಮಸ್ಯೆಯಿಂದ ಹೀಗೆ ಆಗಿದೆ. ಹಣವನ್ನು ನಿಮ್ಮ ಖಾತೆಗೆ ವಾಪಸ್ ಹಾಕುತ್ತೇವೆ. ಅದಕ್ಕಾಗಿ ಒಂದು ಓಟಿಪಿ ಬರುತ್ತದೆ, ಹೇಳಿ ಎಂದಿದ್ದಾನೆ. ನಂತರ ಮಹಿಳೆಯ ಡೆಬಿಟ್ ಕಾರ್ಡ್ ನಂಬರ್, ಸಿವಿವಿ ಸಂಖ್ಯೆ ಎಲ್ಲಾ ಪಡೆದುಕೊಂಡಿದ್ದಾನೆ. ಮಹಿಳೆ ಎಲ್ಲರನ್ನೂ ನೀಡಿದ್ದಾಳೆ. ಬಳಿಕ ಮಹಿಳೆಯ ಖಾತೆಯಿಂದ ಹಂತ ಹಂತವಾಗಿ 5.35 ಲಕ್ಷ ರೂಪಾಯಿ ಕಟ್ ಆಗಿದೆ.
ನಂತರ ಮೋಸದ ಜಾಲಕ್ಕೆ ತಾನು ಬಿದ್ದಿದ್ದನ್ನು ಅರಿತ ಆಕೆ, ಏನೂ ಮಾಡಲಾರದೆ ಪೊಲೀಸರಿಗೆ ದೂರು ದಾಖಲು ಮಾಡಿದ್ದಾಳೆ. ಹೇಗಾದ್ರು ಮಾಡಿ, ನನ್ನ ಹಣ ವಾಪಸ್ ತರಿಸಿ ಎಂದು ಪಟ್ಟು ಹಿಡಿದಿದ್ದಾಳೆ. ಒಟ್ಟಾರೆ ಮಹಿಳೆಯ ವಿಸ್ಕಿ ಆಸೆ, ಲಕ್ಷ ಹಣವನ್ನೇ ನುಂಗುವಂತೆ ಮಾಡಿತು.