ಪ್ರಪಂಚದ ಈ ಅದ್ಭುತ ಸ್ಥಳಗಳಲ್ಲಿ ಸೆಲ್ಫಿ ಕ್ಲಿಕ್ಕಿಸುವಂತಿಲ್ಲ | ಆಶ್ಚರ್ಯವಾದರೂ ಇದು ಸತ್ಯ…ಆದರೆ ಇದಕ್ಕೆಲ್ಲ ಕಾರಣವಿದೆ!
ಇತ್ತೀಚಿನ ಮಾಡರ್ನ್ ಯುಗದಲ್ಲಿ ಎಲ್ಲರೂ ಎಲ್ಲಾದರೂ ಪ್ರವಾಸಕ್ಕೆ ಹೋದರೆ ಸೆಲ್ಫಿ ಕ್ಲಿಕ್ಕಿಸುವುದು ಸಾಮಾನ್ಯ. ಅದೊಂದು ರೀತಿಯ ಜೀವನದ ಒಂದು ಭಾಗ ಎಂದೇ ಹೇಳಬಹುದು. ಸ್ನೇಹಿತರು, ಕುಟುಂಬಸ್ಥರು, ಪ್ರೀತಿಪಾತ್ರರೊಂದಿಗೆ ಸೆಲ್ಫಿ ಕ್ಲಿಕ್ಕಿಸುವುದು ಕೂಡಾ ಖುಷಿಯ ಕ್ಷಣವೂ ಹೌದು. ಸುಂದರವಾದ ಮನಮೋಹಕ ತಾಣಗಳಲ್ಲಿ ಸೆಲ್ಫಿ ಕ್ಲಿಕ್ ಮಾಡದಿದ್ದರೆ ಹೋದ ಜಾಗದ ಮಜಾ ಇರುವುದಿಲ್ಲ. ಆದರೆ, ನಿಮಗೆ ಈ ವಿಷಯ ಕೇಳಿ ಅಚ್ಚರಿಯಾಗಬಹುದು. ಏನೆಂದರೆ ಕೆಲವು ಕಡೆ ಸೆಲ್ಫಿ ಕ್ಲಿಕ್ಕಿಸುವುದು ನಿಷೇಧ. ಅದಕ್ಕೆ ಕಾರಣ ಕೂಡಾ ಇದೆ. ಇತ್ತೀಚಿನ ದಿನಗಳಲ್ಲಿ ಸೆಲ್ಫಿಯಿಂದಲೇ ಸಾಕಷ್ಟು ದುರಂತಗಳು ನಡೆದಿದೆ. ಅಪಾಯಕಾರಿ ಜಾಗದಲ್ಲಿ ಸೆಲ್ಫಿ ಕ್ಲಿಕ್ಕಿಸಲು ಹೋದವರು ತುಂಬಾ ಜನಾನೇ ಇದ್ದಾರೆ. ಸೆಲ್ಫಿ ಕ್ಲಿಕ್ಕಿಸುವುದು ಕೆಟ್ಟ ಹವ್ಯಾಸವೇನಲ್ಲ. ಆದರೆ, ಎಚ್ಚರಿಕೆಯಿಂದ ಕ್ಲಿಕ್ಕಿಸಿದರೆ ಉತ್ತಮ ಅಷ್ಟೇ. ಎಚ್ಚರಿಕೆ ವಹಿಸದೇ ಇದ್ದರೆ ಯಾವಾಗ ಬೇಕಾದರೂ ಅಪಾಯ ಸಂಭವಿಸ ಬಹುದು. ಇದೇ ಕಾರಣಕ್ಕೆ ಕೆಲವು ಕಡೆಗಳಲ್ಲಿ ಸೆಲ್ಫಿ ಮತ್ತು ಸೆಲ್ಫಿ ಸ್ಟಿಕ್‌ಗಳನ್ನು ನಿಷೇಧ ಮಾಡಲಾಗಿದೆ. ಅಂತೆಯೇ, ಅಂತಹ ಕೆಲವು ಸ್ಥಳಗಳ ಬಗೆಗಿನ ಮಾಹಿತಿ ಇಲ್ಲಿದೆ.
ಮುಂಬೈ ಇಲ್ಲಿ ಸೆಲ್ಫಿ ಗೆ ಸಂಪೂರ್ಣ ನಿಷೇಧವಿಲ್ಲ. ಆದರೆ ಇಲ್ಲಿ ಕೆಲವೊಂದು ಸ್ಥಳಗಳಲ್ಲಿ ಪೊಲೀಸರ ಗಸ್ತು ಇರುತ್ತದೆ. ಮರೈನ್ ಡ್ರೈವ್‌ನಂತಹ ಪ್ರದೇಶದಲ್ಲಿ ಪೊಲೀಸರು ತೀವ್ರ ಗಮನ ಇಟ್ಟಿದ್ದಾರೆ. ಇದಕ್ಕೆ ಕಾರಣ ಇದೆ. ಕಳೆದ ಹಲವು ವರ್ಷಗಳಿಂದ ಸೆಲ್ಫಿಯ ಕಾರಣದಿಂದ ಇಲ್ಲಿ ಸುಮಾರು ದುರಂತಗಳು ನಡೆದಿದ್ದವು. ಹಲವಾರು ಮಂದಿ ಕ್ಲಿಕ್ಕಿಸುವಾಗ ಆಯತಪ್ಪಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ ಈ ಕಾರಣದಿಂದ ಪ್ರವಾಸಿಗರ ಸುರಕ್ಷತೆಯ ಕಾರಣದಿಂದ ಮರೈನ್ ಡ್ರೈವ್ ಮತ್ತು ಚೌಪಾಟಿ ಬೀಚ್‌ನಂತಹ ಸ್ಥಳಗಳಲ್ಲಿ ಸೆಲ್ಫಿಯನ್ನು ನಿಷೇಧ ಮಾಡಲಾಗಿದೆ.
ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್‌ನ ಲಯನ್ ಪಾರ್ಕ್‌ನಲ್ಲಿ ಕೂಡಾ ಸೆಲ್ಫಿಯನ್ನೇ ನಿಷೇಧಿಸಲಾಗಿದೆ. ಈ ಲಯನ್ ಪಾರ್ಕ್‌ಗೆ ಸಾಕಷ್ಟು ಸಂಖ್ಯೆಯಲ್ಲಿ ಸಂದರ್ಶಕರು ಬರುತ್ತಾರೆ. ಹೀಗೆ ಬರುವ ಕೆಲ ಪ್ರವಾಸಿಗರು ವಯಸ್ಕ ಸಿಂಹ ಮತ್ತು ಕರಡಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಆದರೆ ಇದು ಅಪಾಯಕಾರಿ ಎಂಬ ಅರಿವು ಎಲ್ಲರಿಗೂ ಇದೆ. ಸಿಂಹದೊಂದಿಗೆ ಸೆಲ್ಫಿ ಖುಷಿ ನೀಡಬಹುದು. ಆದರೆ, ಇದು ಅಷ್ಟೇ ಅಪಾಯಕಾರಿ ಕೂಡಾ ಹೌದು. ಪ್ರವಾಸಿಗರ ಈ ಅಪಾಯಕಾರಿ ಮೋಹವನ್ನು ಕಂಡ ಪಾರ್ಕ್ ಆಡಳಿತ ಇಲ್ಲಿ ಸೆಲ್ಫಿ ತೆಗೆಯುವುದನ್ನು ನಿಷೇಧಿಸಿದೆ.
ಥೈಲ್ಯಾಂಡಿನ ಫುಕೆಟ್ ದ್ವೀಪದಲ್ಲಿದೆ ಮೈ ಖಾವೋ ಬೀಚ್. ಈ ಕಡಲ ತೀರದಲ್ಲಿ ಕೂಡಾ ಯಾವುದೇ ಪ್ರವಾಸಿಗರು ಸೆಲ್ಫಿ ಕ್ಲಿಕ್ಕಿಸುವ ಹಾಗಿಲ್ಲ. ಯಾರಿಗೂ ಗೊತ್ತಿಲ್ಲದೇ ಸೆಲ್ಫಿ ಕ್ಲಿಕ್ಕಿಸಿದರೂ ಸಿಕ್ಕಿಬಿದ್ದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಏಕೆಂದರೆ, ಈ ಬೀಚ್ ಫುಕೆಟ್ ಅಂತಾರಾಷ್ಟ್ರೀಯ ವಿಮಾನದ ಬಹಳ ಹತ್ತಿರದಲ್ಲಿದೆ. ಹೀಗಾಗಿ, ಕಡಿಮೆ ಎತ್ತರದಲ್ಲಿ ವಿಮಾನ ಹಾರುವಾಗ ಈ ವಿಮಾನಗಳು ತಮ್ಮ ಫೋಟೋದಲ್ಲಿ ಕಾಣಿಸಿಕೊಳ್ಳುವ ರೀತಿಯಲ್ಲಿ ಪ್ರವಾಸಿಗರು ಫೋಟೋ ಕ್ಲಿಕ್ಕಿಸುತ್ತಿದ್ದರು. ಕೆಲವರು ವಿಮಾನವನ್ನು ಹಿಡಿಯುವಂತೆ ಪೋಸ್ ಕೊಟ್ಟು ಫೋಟೋ ಸೆರೆ ಹಿಡಿಯುತ್ತಿದ್ದರು. ಇವೆಲ್ಲಾ ಪೈಲಟ್‌ನ ಏಕಾಗ್ರತೆಗೆ ಭಂಗ ತಂದು ಗಮನ ಬೇರೆಡೆ ಸೆಳೆಯುವಂತೆ ಮಾಡಬಹುದು ಮತ್ತು ಅಪಘಾತಕ್ಕೂ ಕಾರಣವಾಗಬಹುದು ಎಂಬ ಕಾರಣವೇ ಸೆಲ್ಫಿ ನಿಷೇಧಸಲು ಮೂಲ ಕಾರಣ. ಕಡಿಮೆ ಎತ್ತರದಲ್ಲಿ ವಿಮಾನ ಹಾರುತ್ತಿದ್ದಾಗ ಇಲ್ಲಿ ಸೆಲ್ಫಿ ಕ್ಲಿಕ್ಕಿಸುವುದೇ ಹಿಂದೆ ಟ್ರೆಂಡ್ ಆಗಿತ್ತು.
ಡಿಸ್ನಿ ವರ್ಲ್ಡ್‌ಗೆ ನಿಜಕ್ಕೂ ವಿಸ್ಮಯಕಾರಿ ಸ್ಥಳ ಜೊತೆಗೆ ಸಾಕಷ್ಟು ಮಂದಿ ಇಲ್ಲಿ ಖುಷಿಯ ಕ್ಷಣವನ್ನು ಅನುಭವಿಸುತ್ತಾರೆ. ಆದರೆ, ಇಲ್ಲಿಗೆ ಹೋಗುವಾಗ ಒಂದು ವಿಷಯ ನಿಮಗೆ ತಿಳಿದಿರಬೇಕು. ಅದುವೇ ಡಿಸ್ನಿ ವರ್ಲ್ಡ್ನಲ್ಲಿ ಸೆಲ್ಫಿ ಸ್ಟಿಕ್ ಬಳಸುವಂತಿಲ್ಲ…! ಸೆಲ್ಫಿ ಸ್ಟಿಕ್‌ಗಳು ಅಥವಾ ಕ್ಯಾಮೆರಾ ಹಾಗೂ ಫೋನ್‌ಗಳನ್ನು ಎತ್ತರದಲ್ಲಿ ಹಿಡಿಯುವಂತೆ ಸಹಾಯ ಮಾಡುವ ಯಾವುದೇ ವಸ್ತುಗಳನ್ನು ಇಲ್ಲಿ ಬಳಸುವಂತೆ ಇಲ್ಲ. ಸೆಲ್ಫಿ ಕ್ಲಿಕ್ಕಿಸಬಹುದು. ಆದರೆ, ಸೆಲ್ಫಿ ಸ್ಟಿಕ್ ಬಳಸುವಂತಿಲ್ಲ. ಸೆಲ್ಫಿ ಸ್ಟಿಕ್‌ನಿಂದ ಅದನ್ನು ಹಿಡಿದುಕೊಂಡವರಿಗೆ ಮತ್ತು ಬೇರೆಯವರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಇಂತಹದ್ದೊಂದು ಕ್ರಮವನ್ನು ಇಲ್ಲಿ ಮಾಡಲಾಗಿದೆ. ಹಾಗಾಗಿ ಸಂದರ್ಶಕರು ಉದ್ಯಾನವನದ ಪ್ರವೇಶದ್ವಾರದಲ್ಲಿರುವ ಲಾಕರ್‌ನಲ್ಲೇ ಸೆಲ್ಫಿ ಸ್ಟಿಕ್ ಇಡಲು ಕೇಳಿಕೊಳ್ಳಲಾಗಿದೆ.
ಕ್ಯಾಲಿಫೋರ್ನಿಯಾದ ತಾಹೋ ಸರೋವರದ ಬಳಿಯೂ ಸೆಲ್ಫಿಗೆ ನಿಷೇಧವಿದೆ. ಕರಡಿಗಳೇ ಹೆಚ್ಚಿರುವ ಇಲ್ಲಿ, ಕರಡಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಲು ಯತ್ನಿಸುತ್ತಿದ್ದರು. ಇದು ಪ್ರಾಣಿಗಳು ಮತ್ತು ಸಂದರ್ಶಕರನ್ನು ಅಪಾಯ ತರುತ್ತಿತ್ತು. ಇಂತಹ ಸಂದರ್ಭದಲ್ಲಿ ಒಂದೊಮ್ಮೆ ಕರಡಿಗಳು ಕೆರಳಿದರೆ ಅಪಾಯಕಟ್ಟಿಟ್ಟ ಬುತ್ತಿ. ಇದೇ ಕಾರಣಕ್ಕೆ ಇಲ್ಲೆಲ್ಲಾ ಸೆಲ್ಫಿ ಕ್ಲಿಕ್ಕಿಸುವುದನ್ನು ನಿಷೇಧಿಸಲಾಗಿದೆ.
ಸ್ಪೇನ್‌ನಲ್ಲಿ ನಡೆಯುವ `ರನ್ನಿಂಗ್ ಆಫ್ ದಿ ಬುಲ್’ ವೇಳೆ ಸೆಲ್ಫಿ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಯಾಕೆಂದರೆ, ಗೂಳಿ ಬೆದರಿಸುವ ಸಂದರ್ಭದಲ್ಲಿ ಸಾಕಷ್ಟು ಮಂದಿ ಸೆಲ್ಫಿ ಕ್ಲಿಕ್ಕಿಸುತ್ತಿದ್ದರು. ಇದರಿಂದ ಅಪಾಯವೂ ಎದುರಾಗುತ್ತಿತ್ತು. ಇದೇ ಕಾರಣದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವವರು ಗಾಯಗೊಳ್ಳದಂತೆ, ಇವರಿಗೆ ಯಾವುದೇ ಅಪಾಯ ಸಂಭವಿಸಬಾರದು ಎಂಬ ಕಾರಣಕ್ಕೆ ಈ ನಿಯಂತ್ರಣವನ್ನು ಹೇರಲಾಗಿದೆ. ಈ ಹಿಂದೆ ಸಂಭವಿಸಿದ ದುರಂತಗಳ ಕಾರಣದಿಂದ ಇಂತಹ ನಿಯಮವನ್ನು ಇಲ್ಲಿ ಜಾರಿ ತರಲಾಗಿದೆ. ಜತೆಗೆ, ಸೆಲ್ಫಿ ಕ್ಲಿಕ್ಕಿಸಿದರೆ ಇಲ್ಲಿ ದಂಡವನ್ನೂ ವಿಧಿಸಲಾಗುತ್ತದೆ.