ಹೊಲದಲ್ಲಿ ಹೂತುಹಾಕಿದ್ದ ಶಿಶು ಜೀವಂತ!

Share the Article

ದಿನಕಳೆದಂತೆ ಮನುಷ್ಯರು ನೀಚರಾಗುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಯಾಕಂದ್ರೆ, ಹೀನ ಕೃತ್ಯಗಳ ಸಂಖ್ಯೆ ಏರಿಕೆ ಕಾಣುತ್ತಲೇ ಇದೆ. ಹೌದು. ಅದೆಷ್ಟೋ ದಂಪತಿಗಳು ಮಗುವಿಗಾಗಿ ಹಂಬಲಿಸುತ್ತ ಇದ್ದರೆ, ಇತ್ತ ಕಡೆ, ಶಿಶುವನ್ನು ಜೀವಂತವಾಗಿ ಹೂತು ಹೋಗಿರುವ ಅಮಾನವೀಯ ಘಟನೆ ನಡೆದಿದೆ.

ಆದ್ರೆ, ಆ ಮಗುವಿನ ಅದೃಷ್ಟ ಎಂಬಂತೆ ರೈತನೋರ್ವ ಪುಟ್ಟ ಕಂದನ ಪ್ರಾಣ ಉಳಿಸಿದ್ದಾರೆ. ಇಂತಹ ಮನಕಲಕುವ ಘಟನೆ ಗುಜರಾತ್​ನ ಸಬರಕಾಂತ್​ನ ಗಂಬೋಯಿ ಗ್ರಾಮದಲ್ಲಿ ನಡೆದಿದೆ.

ರೈತ ಹೀತೇಂದ್ರ ಸಿನ್ಹಾ ಎಂಬುವವರು ತಮ್ಮ ಹೊಲಕ್ಕೆ ಹೋದಾಗ ಈ ಕೃತ್ಯ ಬೆಳಕಿಗೆ ಬಂದಿದ್ದು, ಅವರ ಹೊಲದಲ್ಲಿ ಯಾರೋ ಶಿಶು ಹೂತು ಹಾಕಿ ಹೋಗಿದ್ದರು. ಅವಸರದಲ್ಲಿ ಹೂತು ಹಾಕಿದ್ದರಿಂದ ಮಗುವಿನ ಕೈ ಮೇಲೆ ಕಾಣಿಸುತ್ತಿತ್ತು. ಇದನ್ನು ನೋಡಿ ಗಾಬರಿಗೊಂಡ ಹೀತೇಂದ್ರ ಅವರು ಆ ಜಾಗವನ್ನು ಅಗೆದು ನೋಡಿದ್ದಾರೆ. ಪವಾಡ ಸದೃಶವೆಂಬಂತೆ ಮಗು ಇನ್ನೂ ಉಸಿರಾಡುತ್ತಿತ್ತು. ಕೂಡಲೇ ಅವರು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.

ಈ ಕುರಿತು ಅವರು ತಮ್ಮ ಅನುಭವ ಹಂಚಿಕೊಂಡಿದ್ದು, “ಬೆಳಗ್ಗೆ ಹೊಲ ನೋಡಲೆಂದು ನಾನು ಹೋಗಿದ್ದೆ. ಆಗ ಮಣ್ಣಿನಲ್ಲಿ ಶಿಶುವಿನ ಕೈ ಭಾಗ ಮಾತ್ರ ಕಾಣಿಸಿತು. ನಮ್ಮ ಜಮೀನಿನ ಪಕ್ಕದಲ್ಲಿರುವ ವಿದ್ಯುತ್ ಪೂರೈಕೆ ಕಚೇರಿಯ ಸಿಬ್ಬಂದಿಯ ನೆರವಿನಿಂದ ಶಿಶುವನ್ನು ಹೊರಕ್ಕೆ ತೆಗೆದೆ. ಶಿಶುವನ್ನು ತುಂಬಾ ಆಳದಲ್ಲಿ ಹೂತಿರಲಿಲ್ಲ. ಆದ್ದರಿಂದ ಇನ್ನೂ ಉಸಿರಾಡುತ್ತಿತ್ತು” ಎಂದಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಹೊಲದ ಮಾಲೀಕ ಹಾಗೂ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ಪೊಲೀಸರು ತನಿಖೆ ಆರಂಭಿಸಿದ್ದು, ಶಿಶುವಿನ ತಾಯಿ ಮತ್ತು ಪೋಷಕರನ್ನು ಪತ್ತೆ ಹೆಚ್ಚಲು ಕ್ರಮ ವಹಿಸಲಾಗಿದೆ ಎಂದು ಎಸ್​ಐ ಸಿ.ಎಫ್ ಠಾಕೂರ್​ ಹೇಳಿದ್ದಾರೆ.

Leave A Reply