ಲ್ಯಾಪ್ ಟಾಪ್ ರಿಪೇರಿಗೆಂದು ಮನೆಗೆ ಬಂದವ ಮಾಡಿದ ಖತರ್ನಾಕ್ ಕೆಲಸ!

Share the Article

ಬೆಂಗಳೂರು: ಇತ್ತೀಚೆಗೆ ಅಂತೂ ಕಿರಾತಕರ ಸಂಖ್ಯೆ ಹೆಚ್ಚೇ ಆಗಿದ್ದು, ಯಾವ ರೀತಿಲಿ ಪಂಗನಾಮ ಹಾಕುವುದೆಂದು ಕಾದು ಕೂತಿರುತ್ತಾರೆ. ಸಾಮಾನ್ಯವಾಗಿ ನಾವೆಲ್ಲ ಮೊಬೈಲ್, ಲ್ಯಾಪ್ ಟಾಪ್ ಗಳನ್ನು ರಿಪೇರಿಗೆಂದು ಕೊಡುತ್ತೇವೆ. ಆದರೆ ಇಂತಹ ಸಂದರ್ಭದಲ್ಲಿ ನಾವು ಎಷ್ಟು ಜಾಗರೂಕತೆಯಿಂದ ಇದ್ದರೂ ಸಾಲದು, ಸ್ವಲ್ಪ ಯಾಮಾರಿದರೆ ಏನಾಗಲಿದೆ ಎಂಬುದಕ್ಕೆ ಉದಾಹರಣೆಯಾಗಿದೆ ಈ ಘಟನೆ.

ಹೌದು.ಮೊಬೈಲ್​, ಲ್ಯಾಪ್​ಟಾಪ್​ಗಳನ್ನು ರಿಪೇರಿಗೆ ಕೊಡುವಾಗ ಬಹಳ ಎಚ್ಚರಿಕೆ ವಹಿಸಬೇಕು. ಯಾಕೆಂದರೆ ವೈಯಕ್ತಿಕ ಮಾಹಿತಿಗಳು, ಫೋಟೋ ಅಥವಾ ವಿಡಿಯೋಗಳಿದ್ದರೆ ಅವುಗಳ ಬಗ್ಗೆ ಗಮನಹರಿಸಬೇಕು. ಇದೇ ರೀತಿ ಇಲ್ಲೊಬ್ಬ ವ್ಯಕ್ತಿ ಲ್ಯಾಪ್‌ಟಾಪ್ ರಿಪೇರಿ ಮಾಡಲೆಂದು, ಮನೆಗೆ ಬಂದಿದ್ದಾಗ ಮಹಿಳೆಯ ಖಾಸಗಿ ಪೋಟೋ ಪಡೆದಿದ್ದ. ಬಳಿಕ ಫೋಟೋ ತೋರಿಸಿ ಬ್ಲಾಕ್​ಮೇಲ್ ಮಾಡಿದ್ದ. ಇದೀಗ ಈ ಆರೋಪದ ಮೇರೆಗೆ ಆ ಖತರ್ನಾಕ್​ ವ್ಯಕ್ತಿಯೊಬ್ಬನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಪ್ರವೀಣ್​ ರಾವ್​ ಎಂದು ಗುರುತಿಸಲಾಗಿದೆ.

ಈತ ದಾಸರಹಳ್ಳಿಯ ಮಹೇಶ್ವರಿ ನಗರದ ನಿವಾಸಿಯಾಗಿದ್ದು, ಲ್ಯಾಪ್​ಟಾಪ್​ ರಿಪೇರಿ ಮಾಡಿಕೊಡಲು ಬಂದವನು ಅದರಲ್ಲಿದ್ದ ಮಹಿಳೆಯ ಖಾಸಗಿ ಫೋಟೋಗಳನ್ನು ಪಡೆದುಕೊಂಡು ಬ್ಲಾಕ್​ಮೇಲ್​ ಮಾಡಲು ಆರಂಭಿಸಿದ್ದ. ಅಲ್ಲದೆ, ಖಾಸಗಿ ಪೋಟೋಗಳನ್ನು ಮಹಿಳೆಯ ಪತಿಯ ಮೊಬೈಲ್​ಗೆ ಶೇರ್ ಮಾಡಿದ್ದ.

ಅಷ್ಟೇ ಅಲ್ಲದೆ, ಠಾಣೆಗೆ ದೂರು ಕೊಟ್ಟರೆ ಜೀವ ತಗೆಯುವುದಾಗಿ ಬೆದರಿಕೆ ಹಾಕಿದ್ದ. ಕೊನೆಗೂ ಆತನ ಕಾಟ ತಡೆಯಲಾರದೆ ಮಹಿಳೆ ದೂರು ನೀಡಿದ್ದಳು. ಕಾರ್ಯಾಚರಣೆಗೆ ಇಳಿದ ಬಾಗಲಗುಂಟೆ ಪೊಲೀಸರು ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ. ಈ ಸಂಬಂಧ ಬಾಗಲಗುಂಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply