ಕೋರೋನಾ ಸೋಂಕಿತರ ಸುಶ್ರೂಷೆಗೈದ ನರ್ಸ್ ಗೆ ವೈರಸ್ ಸೋಂಕು | ಗುಣಮುಖರಾದ 93 ವರ್ಷದ ವೃದ್ಧ ದಂಪತಿ

ತಿರುವನಂತಪುರ, ಮಾ. 31: ಕೋರೋನಾ ವೈರಸ್ ರೋಗವು ನಮಗೆಲ್ಲಾ ಗೊತ್ತಿರುವಂತೆ ವಯೋವೃದ್ಧರನ್ನು ಅತಿಯಾಗಿ ಕಾಡಿ ಅವರನ್ನು ಸಾವಿಗೀಡಾಗುವಂತೆ ಮಾಡುತ್ತದೆ. ವೃದ್ಧರಲ್ಲಿ, 65 ವರ್ಷ ಮೇಲ್ಪಟ್ಟ ವ್ಯಕ್ತಿಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಸಹಜವಾಗಿ ವೈರಾಣು ಅವರ ದೇಹವನ್ನು ಆಕ್ರಮಿಸಿ ಸಾವನ್ನು ತಂದೊಡ್ಡುತ್ತದೆ.

ಆದರೆ ಕೇರಳದ ತಿರುವನಂತಪುರದಲ್ಲಿ 93 ವರ್ಷದ ಮತ್ತು 88 ವರ್ಷದ ಜೋಡಿ ತಂದು ಕರೋನಾ ವೈರಸ್ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ವರದಿಯಾಗಿದೆ.

ಈ ಮೊದಲು ವೃದ್ಧ ದಂಪತಿಗಳನ್ನು ಕೇರಳದ ತಿರುವನಂತಪುರದ ಎರಡು ಪ್ರತ್ಯೇಕ ಕೋಣೆಗಳಲ್ಲಿ ಹಾಕಿ ಟ್ರೀಟ್ಮೆಂಟ್ ಶುರು ಮಾಡಲಾಗಿತ್ತು. ಆದರೆ ಈ ರೋಗಿಗಳು ಗಲಿಬಿಲಿಗೊಂಡಿದ್ದರು. ಆನಂತರ ಅವರಿಬ್ಬರನ್ನು ಪರಸ್ಪರ ನೋಡುವಂತೆ, ಅವರ ರೂಮುಗಳ ಮಧ್ಯೆ ಗಾಜಿನ ಬಾಗಿಲು ಇರುವ ರೂಮುಗಳಿಗೆ ಶಿಫ್ಟ್ ಮಾಡಲಾಯಿತು. ಆನಂತರ ಅವರ ಆರೋಗ್ಯದಲ್ಲಿ ಗಣನೀಯ ಪ್ರಮಾಣದ ಚೇತರಿಕೆ ಕಂಡುಬಂದಿದ್ದು ಕೊರೋನವೈರಸ್ ರೋಗದ ಟ್ರೀಟ್ಮೆಂಟ್ ನಲ್ಲಿ ಮಾನಸಿಕ ಸಿದ್ಧತೆಯ ಅಗತ್ಯವನ್ನೂ ಪ್ರತಿಪಾದಿಸಿದೆ.

ಮೊದಮೊದಲು ಶುಶ್ರೂಷೆ ಪಡೆದುಕೊಳ್ಳಲು, ಆಹಾರ ಸೇವಿಸಲು ಕೂಡ ಅಸಹಕಾರ ತೋರುತ್ತಿದ್ದ ಈ ದಂಪತಿಗಳು ಆನಂತರ ಪೂರ್ತಿಯಾಗಿ ಸಹಕರಿಸಿ ಈಗ ಪೂರ್ತಿ ಗುಣಮುಖರಾಗುವಂತೆ ಹೆಜ್ಜೆ ಇಡುತ್ತಿದ್ದಾರೆ ಎಂದೋ ಕೇರಳದ ಆರೋಗ್ಯ ಮಂತ್ರಿ ಕೇಕೆ ಶೈಲಜಾ ಅವರು ಹೇಳಿದ್ದಾರೆ.

ಇದರ ಮಧ್ಯೆ ಒಂದು ದುರದೃಷ್ಟವಶಾತ್ ಘಟನೆ ನಡೆದಿದೆ. ಈ ವೃದ್ಧ ದಂಪತಿಗಳನ್ನು ತನ್ನ ಸ್ವಂತ ಕುಟುಂಬವೆಂಬಂತೆ ಅಂತಃಕರಣದಿಂದ ಮಾಡಿದ ಕೇರಳದ ಆಸ್ಪತ್ರೆಯ ನರ್ಸ್ ಒಬ್ಬರಿಗೆ ಈ ಮಾರಕ ಕೋರೋನಾ ವೈರಸ್ ಸೋಂಕು ತಗಲಿದೆ. ಆದ್ದರಿಂದ ಆಕೆಯನ್ನು ಸೋಂಕು ಪತ್ತೆಯಾದ ಕೂಡಲೇ ಚಿಕಿತ್ಸೆಗಾಗಿ ಕೊಟ್ಟಾಯಂನ ಮೆಡಿಕಲ್ ಕಾಲೇಜಿಗೆ ಸೇರಿಸಲಾಗಿದೆ. ನರ್ಸ್ ಗೆ ಕರೆ ಮಾಡಿದ ಕೇರಳದ ಆರೋಗ್ಯ ಮಂತ್ರಿ ಕೇಕೆ ಶೈಲಜಾ ಅವರು ಇಡೀ ಆರೋಗ್ಯ ಇಲಾಖೆಯ ನಿಮ್ಮ ಜೊತೆಗಿರುತ್ತದೆ ಎಂದು ಧೈರ್ಯ ತುಂಬಿದ್ದಾರೆ.

ಕೇರಳದಲ್ಲಿ ದೇಶದಲ್ಲಿ ಅತಿ ಹೆಚ್ಚು ಅಂದರೆ 194 ಕೇಸುಗಳು ಪತ್ತೆಯಾಗಿದ್ದರೂ ಅಲ್ಲಿ ಒಟ್ಟು 2 ಸಾವಾಗಿದೆ. ದೇಶದಲ್ಲಿ ಈವರೆಗೆ ಒಟ್ಟು 1251 ಸೋಂಕಿತರಾಗಿದ್ದಾರೆ ಮತ್ತು 34 ಮಂದಿ ಮೃತರಾಗಿದ್ದಾರೆ. ದೇಶದಲ್ಲಿ ಒಟ್ಟು ಗುಣಮುಖರಾಗಿ ಮನೆಗೆ ಮರಳಿದವರು 102 ಜನ.

Leave A Reply

Your email address will not be published.