ರಸ್ತೆ ಬದಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಅತಿ ವೇಗವಾಗಿ ಬಂದು ಡಿಕ್ಕಿ ಹೊಡೆದ ಕಾರು|ಸ್ಥಳದಲ್ಲೇ ಮೂವರು ಮೃತ್ಯು-ಮಗುವಿನ ಸ್ಥಿತಿ ಗಂಭೀರ

Share the Article

ತುಮಕೂರು: ರಸ್ತೆ ಬದಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಅತಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದ್ದು,ಈ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಮೂವರು ಮೃತಪಟ್ಟು, ಮಗುವೊಂದು ಗಂಭೀರವಾಗಿ ಗಾಯಗೊಂಡಿದೆ.

ಈ ಭೀಕರ ಅಪಘಾತ ಭಾನುವಾರ ಬೆಳಗ್ಗೆ ತುಮಕೂರು ತಾಲೂಕಿನ ಕಟ್ಟಿಗೇನಗಹಳ್ಳಿ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸಂಭವಿಸಿದ್ದು,ಕಾರಿನಲ್ಲಿ 7 ಮಂದಿ ಪ್ರಯಾಣಿಸುತ್ತಿದ್ದರು. ಕಟ್ಟಿಗೇನಗಹಳ್ಳಿ ಗೇಟ್ ನ ರಸ್ತೆಬದಿ ಪೂನಾ ಕಡೆ ತೆರಳಲು ಲಾರಿಯೊಂದು ನಿಂತಿತ್ತು. ತುಮಕೂರು ಕಡೆಯಿಂದ ಶಿರಾದತ್ತ ತೆರಳುತ್ತಿದ್ದ ಕಾರು ಲಾರಿಗೆ ಡಿಕ್ಕಿಯಾಗಿದೆ.ಕಾರಿನಲ್ಲಿದ್ದವರ ಪೈಕಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದು, ಮತ್ತೋರ್ವ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಗಾಯಗೊಂಡಿರುವ ಮಗುವಿನ ಸ್ಥಿತಿ ಚಿಂತನಾಜನಕವಾಗಿದ್ದು, ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಈ ಭೀಕರ ಅಪಘಾತದಲ್ಲಿ ಮೃತಪಟ್ಟಿರುವವರನ್ನು ಬೆಂಗಳೂರಿನ ಅನ್ನಪೂರ್ಣ (55), ಅದಿತಿ (32) ಹಾಗೂ ಆರತಿ ಎಂದು ಗುರುತಿಸಲಾಗಿದೆ.

ಲಾರಿಗೆ ಢಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.ಕಾರಿನಲ್ಲಿದ್ದವರ ಪೈಕಿ ಇನ್ನು ಮೂವರು ಮಕ್ಕಳಿಗೆ ಯಾವುದೇ ರೀತಿಯ ತೊಂದರೆಗಳಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.ಘಟನೆಯ ಸುದ್ದಿ ತಿಳಿದ ಕೂಡಲೇ ಕೋರಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave A Reply