ಪ್ರೊ ಕಬಡ್ಡಿ ಫೈನಲ್ ಕದನ | ಬಲಿಷ್ಠ ಪಾಟ್ನಾ ಪೈರೇಟ್ಸ್‌ ಪತನ,  ಚಾಂಪಿಯನ್‌ ಆಗಿ ಹೊರ ಹೊಮ್ಮಿದ ದಬಾಂಗ್‌ ಡೆಲ್ಲಿ !!

ಬೆಂಗಳೂರು: ಚುರುಕುತನ, ಪವರ್, ಸ್ಪೀಡ್, ಎದುರು ತಂಡದ 7 ಜನರ ಮನಸ್ಸು ಮತ್ತು ದೇಹವನ್ನು ಮೈಕ್ರೋ ಸೆಕುಂಡಿನಲ್ಲಿ ಅಭ್ಯಸಿಸಿ, ವ್ಯೂಹವನ್ನು ಭೇದಿಸಿಕೊಂಡು ಬರುವ ಕುಶಾಗ್ರಮತಿ ಬುದ್ದಿ ಇದ್ದವನು ಮಾತ್ರ ಕಬಡ್ಡಿ ಆಡಬಲ್ಲನು. ಅಂತಹ conquor ಆಟ ಇವತ್ತಿನಿಂದ ನಮ್ಮ ಸಂಜೆ ರಾತ್ರಿಗಳನ್ನು ಬೋರ್ ಹೊಡೆಸಲಿದೆ ಅನ್ನುವುದೊಂದೆ ಬೇಜಾರದ ಸಂಗತಿ. ಕಾರಣ ಪ್ರೊ ಕಬಡ್ಡಿ 8 ಮುಕ್ತಾಯ ಆಗಿದೆ.
ಪ್ರೊ ಕಬಡ್ಡಿ ಸೀಸನ್ ವಿನ್ ಎಂಟಕ್ಕೆ ತೆರೆ ಬಿದ್ದಿದೆ. ದಬಾಂಗ್‌ ಡೆಲ್ಲಿ ಕಬಡ್ಡಿ ಕ್ಲಬ್ ತಂಡವು ಮೊತ್ತ ಮೊದಲ ಸಲ ಪ್ರೊ ಕಬಡ್ಡಿ ಕಿರೀಟ ಹೆಗಲೇರಿಸಿಕೊಂಡು ಹೆಮ್ಮೆಯಿಂದ ಬೀಗಿದೆ. ನಿನ್ನೆ ಶುಕ್ರವಾರ ನಡೆದ ತೀವ್ರ ಪೈಪೋಟಿಯ ಎಲೆಕ್ಟ್ರಿ ಫೈಯಿಂಗ್ ಮುಖಾಮುಖಿಯಲ್ಲಿ ಅದು 3 ಬಾರಿಯ ಚಾಂಪಿಯನ್‌ ಹಾಗೂ ನಾಲ್ಕು ಬಾರಿ ಫೈನಲ್ ಪ್ರವೇಶಿಸಿದ ದೈತ್ಯ ತಂಡ ಪಾಟ್ನಾ ಪೈರೇಟ್ಸ್‌ ತಂಡವನ್ನು ಬಗ್ಗುಬಡಿದು ಪ್ರಶಸ್ತಿ ಬಾಚಿಕೊಂಡಿದೆ. ರೋಚಕ ಹೋರಾಟದಲ್ಲಿ 37-36 ಅಂತರದಿಂದ ಕೊನೆಗೆ ವಿಜಯಲಕ್ಷ್ಮಿ ದಿಲ್ಲಿ ತಂಡದ ಕೊರಳಿಗೆ ಮಾಲೆ ಹಾಕಿದ್ದಳು.

ನಿನ್ನೆ ಪಂದ್ಯ ನಡೆಯುತ್ತಿದ್ದಂತೆ ಹಗ್ಗಜಗ್ಗಾಟ ಜೋರಾಗಿ ನಡೆದಿತ್ತು. ಒಂದು ತಂಡವು ಒಂದು ಅಂಕ ಪಡೆದರೆ ಇನ್ನೊಂದು ತಂಡವು ಮತ್ತೊಂದು ಅಂಕವನ್ನು ಕೂಡಿಸಿ ಕೊಳ್ಳುತ್ತಿತ್ತು. ಮಧ್ಯಂತರದವರೆಗೆ ಹೆಚ್ಚುಕಮ್ಮಿ ಸಮಸಮಕ್ಕೆ ಆಟ ಮುಂದುವರೆದಿತ್ತು. ಆದರೂ ಮೊದಲ 20 ನಿಮಿಷಗಳ ಆಟ ಮುಗಿದು ಮಧ್ಯಂತರದ ಸಮಯದಲ್ಲಿ ಡೆಲ್ಲಿ ಹಿಂದೆ ಬಿದ್ದಿತ್ತು. ಎಂದಿನಂತೆ ಪಾಟ್ನಾ ಮುನ್ನಡೆಯನ್ನು ಕಾಯ್ದುಕೊಂಡು ಆತ್ಮವಿಶ್ವಾಸದಿಂದ ಆಟ ಮುಂದುವರಿಸಿತ್ತು.

ಆದರೆ ವಿರಾಮದ ತನಕ ಹಿನ್ನಡೆಯಲ್ಲೇ ಇದ್ದ ಡೆಲ್ಲಿ ದ್ವಿತೀಯಾರ್ಧದಲ್ಲಿ ಮೈ ಕೊಡವಿಕೊಂಡು ಎದ್ದು ನಿಂತಿತ್ತು. ಸೊಂಟಕ್ಕೆ ಸ್ಪ್ರಿಂಗ್ ಅನ್ನು ಕಟ್ಟಿಕೊಂಡೇ ಎದುರಾಳಿ ಅಂಕಣ ಕೆಳಗಿಳಿಯುವ ನವೀನ್ ಎಕ್ಸ್ಪ್ರೆಸ್ ಖ್ಯಾತಿಯ ನವೀನ್ ಕುಮಾರ್ ಪಾಟ್ನಾದ ಬಲಿಷ್ಠ ಡಿಫೆನ್ಸ್ ವ್ಯೂಹವನ್ನು ಗಲಿಬಿಲಿ ಗೊಳಿಸಿದ್ದ. ನವೀನ್ ಗೆ ಸಾಥ್ ನೀಡಿದ ಆಲ್‌ರೌಂಡರ್‌ ವಿಜಯ್‌ ಕೆಲವು ಅನೂಹ್ಯವಾದ ಮಿಂಚಿನಂತಹ ನಡೆಯ ಮೂಲಕ ಪಾಟ್ನಾಕ್ಕೆ ಬಿಟ್ಟುಕೊಟ್ಟಿದ್ದ. ಆ ಮೂಲಕ ಒಟ್ಟು14 ಅಂಕ ಗಳಿಸಿದ್ದರು ವಿಜಯ್. ವಿಜಯ್ ಮತ್ತು ಈ ಋತುವಿನಲ್ಲಿ 200 ರೈಡಿಂಗ್‌ ಅಂಕ ಗಳಿಸಿದ ನವೀನ್ ಕುಮಾರ್ ಈ ಪಂದ್ಯದ ಹೀರೋಗಳಾಗಿ ಮೆರೆದರು. ಈ ಸೀಸನ್ ನಲ್ಲಿ ಅತಿಹೆಚ್ಚು ಟ್ಯಾಕಲ್ ಮಾಡಿದ ಮಂಜಿತ್ ಚಿಲ್ಲರ್ ಸೀಸನ್ ಈ ಸೀಸನ್ ಉದ್ದಕ್ಕೂ ತಮ್ಮ ಅನುಭವವನ್ನು ಮತ್ತು ಅಮೂಲ್ಯ ಅಂಕಗಳನ್ನು ಕೊಡ ಮಾಡಿದ್ದರು. ಕಳೆದ ವರ್ಷವೂ ಫೈನಲ್‌ ಪ್ರವೇಶಿಸಿದ್ದ ಡೆಲ್ಲಿ, ಬೆಂಗಾಲ್‌ ವಾರಿಯರ್ ವಿರುದ್ಧ ಕೊನೆಯ ಕ್ಷಣದಲ್ಲಿ ಎಡವಿ ಗಾಯ ಮಾಡಿಕೊಂಡಿತ್ತು. ಈ ಸಾರಿ ಬಲಿಷ್ಠವಾಗಿ ಯುವ ಆಟಗಾರ ಗಳನ್ನು ಹಾಕಿಕೊಂಡು ಬಂದ ಡೆಲ್ಲಿ ಪ್ರಶಸ್ತಿ ಬಾಚಿಕೊಂಡಿದೆ. ಪಾಟ್ನಾ ಪರ ಸದಾ ಆಕ್ಟೀವ್ ಆಗಿ ಆಡುವ ರೈಡರ್‌ ಸಚಿನ್‌ ತುದಿಗಾಲಿನಲ್ಲಿ ಜಿದ್ದಿನಿಂದ ನಿಂತು ಆಡಿದರೂ ಪಾಟ್ನಾ ಗೆಲುವು ಪಡೆಯಲಾಗಳಿಲ್ಲ. ಸಚಿನ್ 10 ಮತ್ತು ಗುಮನ್‌ ಸಿಂಗ್‌ 9 ಅಂಕ ಗಳಿಸಿ ಗಮನ ಸೆಳೆದಿದ್ದರು.
ಕೊನೆಯ 10 ನಿಮಿಷದಲ್ಲಿ ದಿಲ್ಲಿ 24-24 ಸಮಬಲಕ್ಕೆ ತಂದಾಗ ಪಂದ್ಯದ ಕುತೂಹಲ ತುತ್ತುದಿಗೆ ತಲುಪಿತ್ತು. ಅಂತಿಮ ಹಂತದಲ್ಲಿ ಪಂದ್ಯ ಯಾವುದೇ ತಿರುವನ್ನು ಪಡೆಯುವ ರೀತಿಯಲ್ಲಿ ತೂಗುಯ್ಯಾಲೆಯ ಸ್ಥಿತಿಯಲ್ಲಿ ಇತ್ತು.

ಅಂತಿಮ 6 ನಿಮಿಷದಲ್ಲಿ ಪಂದ್ಯದ ಕೌತುಕವನ್ನು ಪಂದ್ಯ ನೋಡಿದವರು ಸಕ್ಕತ್ತಾಗಿ ಅನುಭವಿಸಿರುತ್ತಾರೆ. ಕುರ್ಚಿಯ ತುದಿಯಲ್ಲಿ ಕೂತು ವೀಕ್ಷಿಸುವಂತೆ ಮಾಡಿತ್ತು ಅಮೂಲ್ಯ ನಿಮಿಷಗಳು. ಆಗ ವಿಜಯ್‌ ಸೂಪರ್‌ ರೈಡ್‌ ಮೂಲಕ 3 ಅಂಕ ಗಳಿಸಿ ಡೆಲ್ಲಿಯ ಮುನ್ನಡೆಯನ್ನು 35-30ಕ್ಕೆ ಏರಿಸಿದರು. ಆಗ ಪಾಟ್ನಾದ ಪತನ ಖಚಿತವಾಯಿತು. ಆದರೂ ಆಟ ಯಾವುದೇ ಗತಿಗೆ ತಲುಪುವ ಸಾಧ್ಯತೆ ಇತ್ತು. ಐದು ಅಂಕಗಳ ಮುನ್ನಡೆಯು ಕೊನೆಯ ಹಂತಕ್ಕೆ ಬರುವಾಗ ಕೇವಲ ಒಂದು ಅಂಕಗಳು ಉಳಿದಿದ್ದು, ಒಂದು ಅಂಕಗಳ ವಿಜಯದೊಂದಿಗೆ ಪ್ರೊ ಕಬಡ್ಡಿ ಸೀಸನ್ 8 ಜಯಮಾಲೆ ದಬಾಂಗ್ ಡೆಲ್ಲಿ ಕಬಡ್ಡಿ ಕ್ಲಬ್ ಪರವಾಗಿ ಒಲಿದಿತ್ತು.

ಡೆಲ್ಲಿ ಪರ ವಿಜಯ್ ಮಲಿಕ್ 8 ರೈಡ್, 1 ಟೇಕಲ್, 5 ಬೋನಸ್ ಸಹಿತ 14 ಅಂಕ ಮತ್ತು ನವೀನ್ ಕುಮಾರ್ 11 ರೈಡ್, 2 ಬೋನಸ್ ಅಂಕ ಸಹಿತ ಒಟ್ಟು 13 ಪಾಯಿಂಟ್ ಕಲೆಹಾಕಿ ಗೆಲುವಿನ ರೂವಾರಿಯಾದರು. ಇತ್ತ ಪಾಟ್ನಾ ಪರ ಸಚಿನ್ 7 ರೈಡ್, 1 ಟೇಕಲ್, 2 ಬೋನಸ್ ಸಹಿತ ಸೂಪರ್ 10 ಪೂರೈಸಿ ಮಿಂಚಿದರೂ ಆ ಹೋರಾಟ ವ್ಯರ್ಥವಾಯಿತು.
ಪಾಟ್ನಾ ಪೈರೇಟ್ಸ್ 29 ರೈಡ್, 4 ಟೇಕಲ್, 2 ಆಲೌಟ್ ಮತ್ತು 1 ಇತರೆ ಅಂಕ ಸಹಿತ ಒಟ್ಟು 36 ಅಂಕ ಕಲೆಹಾಕಿತು. ಡೆಲ್ಲಿ 27 ರೈಡ್, 2 ಸೂಪರ್ ರೈಡ್, 4 ಟೇಕಲ್, 2 ಆಲೌಟ್ ಮತ್ತು 4 ಇತರೆ ಅಂಕ ಸಹಿತ 37 ಅಂಕ ಸಂಪಾದಿಸಿ 1 ಅಂಕದ ಜಯ ದಾಖಲಿಸಿ ಪ್ರೊ ಕಬಡ್ಡಿ 8 ಆವೃತ್ತಿಯ ಪ್ರಶಸ್ತಿಗೆ ಮುತ್ತಿಕ್ಕಿತು.

Leave A Reply

Your email address will not be published.