ಉರಿಯುತ್ತಿರುವ ಅಗ್ನಿಕುಂಡದಂತಾದ ಉಕ್ರೇನ್ !! | ರಷ್ಯಾದ ವಾಯು, ಕ್ಷಿಪಣಿ ದಾಳಿಗಳಿಂದ ನಲುಗಿ ಹೋಗುತ್ತಿರುವ ಉಕ್ರೇನ್ ನಲ್ಲಿ ನಿನ್ನೆ ಮೃತಪಟ್ಟವರ ಸಂಖ್ಯೆ ಎಷ್ಟು ಗೊತ್ತಾ ??
ರಷ್ಯಾದ ದಾಳಿಗೆ ಉಕ್ರೇನ್ ತತ್ತರಿಸಿಹೋಗುತ್ತಿದೆ. ನಿನ್ನೆ ಉಕ್ರೇನ್ ಪ್ರವೇಶಿಸಲು ಯಶಸ್ವಿಯಾಗಿರುವ ರಷ್ಯಾ ಸೇನೆ, ಜಗತ್ತು ಕಂಡ ಘನಘೋರ ಪರಮಾಣು ದುರಂತಕ್ಕೆ ಕಾರಣವಾದ ‘ಚರ್ನೋಬಿಲ್ ಘಟಕ’ವನ್ನೂ ವಶಪಡಿಸಿಕೊಂಡಿದೆ. ಉಕ್ರೇನ್ ವಿರುದ್ಧ ಪೂರ್ಣ ಪ್ರಮಾಣದಲ್ಲಿ ದಾಳಿ ಆರಂಭಿಸಿರುವ ರಷ್ಯಾ, ತನ್ನ ವಾಯು, ಕ್ಷಿಪಣಿ ದಾಳಿಯೊಂದಿಗೆ ಉಕ್ರೇನ್ ನ ಉತ್ತರ, ಪೂರ್ವ, ದಕ್ಷಿಣದ ಗಡಿಯುದ್ದಕ್ಕೂ ದಾಳಿ ನಡೆಸುತ್ತಿದ್ದು ಉಕ್ರೇನ್ ನ ಮಿಲಿಟರಿ ಸೌಲಭ್ಯಗಳನ್ನು ನಾಶಪಡಿಸುತ್ತಿದೆ.
ಒಂದು ಕಡೆ ರಷ್ಯಾದಿಂದ ನಿರಂತರ ದಾಳಿ ಆಗುತ್ತಿದ್ದರೆ, ಮತ್ತೊಂದೆಡೆ ಉಕ್ರೇನ್ ಕೂಡಾ ಯುದ್ದದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದೆ. ರಷ್ಯಾ ದಾಳಿ ಆರಂಭಿಸಿದಾಗಿನಿಂದ ಈವರೆಗೂ ಸೈನಿಕರು, ನಾಗರಿಕರು ಸೇರಿದಂತೆ 137 ಜನರು ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶುಕ್ರವಾರ ಮುಂಜಾನೆ ವೀಡಿಯೋ ಭಾಷಣದಲ್ಲಿ ತಿಳಿಸಿದ್ದಾರೆ.
ಉಕ್ರೇನ್ ರಾಜಧಾನಿ ಕೈವ್ ಮತ್ತು ಇತರ ಪ್ರಮುಖ ನಗರಗಳನ್ನು ವಶಪಡಿಸಿಕೊಳ್ಳಲು ರಷ್ಯಾ ಉದ್ದೇಶಿಸಿರಬಹುದು ಮತ್ತು ಅಂತಿಮವಾಗಿ ಹೆಚ್ಚು ಸ್ನೇಹಪರ ಸರ್ಕಾರವನ್ನು ಸ್ಥಾಪಿಸಲು ರಷ್ಯಾ ಉದ್ದೇಶಿಸಿರಬಹುದು ಎಂದು ಯುಎಸ್ ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಉಕ್ರೇನಿಯನ್ ಪಡೆಗಳು ಮತ್ತೆ ಹೋರಾಟಕ್ಕಿಳಿದಾಗ ನಾಗರಿಕರು ರೈಲುಗಳು ಮತ್ತು ಕಾರುಗಳಲ್ಲಿ ಪಲಾಯನ ಮಾಡುತ್ತಿದ್ದಾರೆ. ಅಮೆರಿಕ ಮತ್ತಿತರ ಯೂರೋಪಿಯನ್ ಮುಖಂಡರು ಆರ್ಥಿಕ ನಿರ್ಬಂಧ ವಿಧಿಸುವುದರೊಂದಿಗೆ ರಷ್ಯಾಗೆ ಪ್ರತೀಕಾರ ನೀಡಲು ಮುಂದಾಗಿದ್ದಾರೆ. ಪೂರ್ವ ಭಾಗದತ್ತ ನ್ಯಾಟೋ ಪಡೆ ಧಾವಿಸಿದ್ದು, ಮುಂದಿನ ಬೆಳವಣಿಗೆಗಳು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.