ಕೊಯಿಲ ಪಶುಸಂಗೋಪಾನ ಇಲಾಖಾ ಜಾಗದ ಮುಖಾಂತರ ಹಾದುಹೋಗಿರುವ ರಸ್ತೆ ಕಾಂಕ್ರಿಟಿಕರಣ |
ಎರಡು ದಶಕಗಳ ಬೇಡಿಕೆಗೆ ಸ್ಪಂದನೆ

ವಿಶೇಷ ವರದಿ : ಪ್ರವೀಣ್‌ರಾಜ್ ಕೊಯಿಲ

ಕಡಬ: ಕೊಯಿಲ ಪಶುಸಂಗೋಪಾನ ಇಲಾಖಾ ಜಾಗದ ಮುಖಾಂತರ ಹಾದು ಹೋಗಿರುವ ಸಾರ್ವಜನಿಕ ರಸ್ತೆಯನ್ನು ಕ್ಷೇತ್ರದ ಶಾಸಕ, ಸಚಿವ ಎಸ್ ಅಂಗಾರ ಅನುದಾನಲ್ಲಿ ಕಾಂಕ್ರಿಟಿಕರಣಗೊಳಿಸಿ ಸುಸಜ್ಜಿತವಾಗಿ ಅಭಿವೃದ್ದಿಪಡಿಸಲಾಗಿದೆ. ಆ ಮೂಲಕ ಈ ಭಾಗದ ಜನತೆಯ ಎರಡು ದಶಕಗಳ ಬೇಡಿಕೆಯನ್ನು ಪೂರೈಸಲಾಗಿದೆ.
1.6 ಕಿಮಿ ಉದ್ದದ ರಸ್ತೆಯನ್ನು ಶಾಸಕರ ನಿಧಿಯಿಂದ ಸುಮಾರು 1.40 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ದಿಪಡಿಸಲಾಗಿದೆ. ರಸ್ತೆ ಅಧಿಕೃತ ಉದ್ಘಾಟನೆಗೊಳ್ಳದಿದ್ದರೂ ವಾಹನ ಸಂಚಾರಕ್ಕೆ ಗುತ್ತಿಗೆದಾರರು ಇತ್ತೀಚೆಗೆ ಅವಕಾಶ ಕಲ್ಪಿಸಿದ್ದಾರೆ. .
ಕೊಯಿಲ ಗ್ರಾಮದಲ್ಲಿ ಸಾವಿರ ಎಕ್ರೆಗಿಂತಲೂ ಹೆಚ್ಚು ಜಾಗದಲ್ಲಿ ಜಾನುವಾರು ಸಂರ್ವದನಾ ಕೇಂದ್ರವು 50ರ ದಶಕದಲ್ಲಿ ಆರಂಭಗೊಂಡಿತ್ತು.
ಇಲಾಖೆ ಅನುಷ್ಠಾನವಾದ ಬೆನ್ನೆಲ್ಲೆ ಇಲ್ಲಿ ಹಾದು ಹೋಗಿರುವ ರಸ್ತೆಯನ್ನು ಡಾಮರಿಕರಣಗೊಳಿಸಿ ಅಭಿವೃದ್ದಿಪಡಿಸಲಾಗಿತ್ತು. ವಾಹನ ಓಡಾಟವೂ ವಿರಳವಾಗಿತ್ತು. ಹಾಗಾಗಿ ಅಂದಿನ ಕಾಲಕ್ಕೆ ರಸ್ತೆ ಸುಸಜ್ಜಿತವಾಗಿತ್ತು. ವಾಹನಗಳ ಓಡಾಟ ಏರಿಕೆಯಾದಂತೆ ರಸ್ತೆ ಕೆಟ್ಟು ಹೋಗಲು ಆರಂಭವಾಯಿತು. ಬಳಿಕ ಕಳೆದ ಇಪ್ಪತ್ತು ವರ್ಷದ ಹಿಂದೆ ತೇಪೆ ಕಾರ್ಯ ನಡೆದರೂ ಸಮರ್ಪಕ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿತ್ತು.
ಬಳಿಕ ಈ ಭಾಗದ ಜನತೆ ಸುಸಜ್ಜಿತ ರಸ್ತೆಗೆ ಜನಪ್ರತಿನಿಧಿಗಳಲ್ಲಿ ಬೇಡಿಕೆಯಿಡುತ್ತಲೇ ಬಂದಿದ್ದರು. ಕಾನೂನಿನ ತೊಡಕಿನಿಂದಾಗಿ ಇಲಾಖೆ ರಸ್ತೆಯನ್ನು ಅಭಿವೃದ್ದಿ ಪಡಿಸಲು ಸ್ಥಳಿಯಾಡಳಿತಕ್ಕೂ ಬಿಟ್ಟುಕೊಟ್ಟಿರಲಿಲ್ಲ.
ಕೆಲ ವರ್ಷಗಳ ಹಿಂದೆ ಜಿಲ್ಲಾಧಿಕಾರಿ ಇಲಾಖೆಗೆ ಭೇಟಿ ನೀಡಿದ ಸಂದರ್ಭ ಸ್ಥಳಿಯರು ರಸ್ತೆ ಅಭಿವೃದ್ದಿಗೆ ಬೇಡಿಕೆಯಿಟ್ಟಾಗ ಜಿಲ್ಲಾಡಳಿತದಿಂದ 2 ಲಕ್ಷ ರೂ ತೇಪೆ ಕಾರ್ಯಕ್ಕೆ ನೀಡುವುದಾಗಿ ಹೇಳಿದ್ದರು. ಆದರೆ ಅದೂ ಕೂಡ ಭರವಸೆಯಾಗಿ ಉಳಿಯಿತು. ಜನರ ಹೋರಾಟ ಮುಂದುವರಿಯುತ್ತೇ ಇತ್ತು. ಇತ್ತೀಚೆಗೆ ಗ್ರಾಮ ಪಂಚಾಯಿತಿ ಚುನಾವಣಾ ಸಂದರ್ಭ ಇದೇ ರಸ್ತೆಯಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರ್ ರಾರಾಜಿಸಿತ್ತು. ಅದಾಗಲೇ ರಸ್ತೆ ಅಭಿವೃದ್ದಿಯ ಭರವಸೆಗಳು ಹೆಚ್ಚಾದವು.
ಎಸ್ .ಆರ್. ಕೆ ಲ್ಯಾಡರ‍್ಸ್ ಮಾಲಕ , ರಸ್ತೆಯ ಗುತ್ತಿಗೆದಾರ ಕೇಶವ ಅಮೈ ಹಾಗೂ ಸ್ಥಳಿಯ ನಾಯಕರ ಸತತ ಪ್ರಯತ್ನದಿಂದ ಇಲಾಖೆಯಲ್ಲಿದ್ದ ಕಾನೂನಿನ ತೊಡಕಗಳನ್ನು ನಿವಾರಿಸಿಕೊಂಡು ಕ್ಷೇತ್ರದ ಶಾಸಕರು ಅನುದಾನ ನೀಡಿರುವುದರ ಮೂಲಕ ರಸ್ತೆ ಅಭಿವೃದ್ದಿಗೊಂಡಿದೆ.
ಸಂವರ್ಧನ ಕ್ಷೇತ್ರದ ಪೂರ್ವ ,ಪಶ್ಚಿಮ , ದಕ್ಷಿಣಕ್ಕೆ ಆನೆಗುಂಡಿ, ಕೊಯಿಲ, ಬೇಂಗದಪಡ್ಪು, ಪುಣಿಕೆತ್ತಡಿ, ಕಲ್ಕಾಡಿ, ಪೊಸಳಕ್ಕೆ, ಸುದೆಂಗಳ, ಕೊನೆಮಜಲು, ಪಾಣಿಗ, ಬರಮೇಲು, ಪಲ್ಲಡ್ಕ, ಆತೂರು ಬೈಲು, ಪಟ್ಟೆ, ಕಾಯರಕಟ್ಟ, ನೂಜಿ, ಪುತ್ಯೆ, ಬರಮೇಲು ಮೊದಲಾದ ಪ್ರದೇಶದಲ್ಲಿ ೩೦೦ಕ್ಕೂ ಹೆಚ್ಚು ಕುಟುಂಬ ವಾಸಿಸುತ್ತಿದೆ. ಇವರೆಲ್ಲರು ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಗೋಕುಲ ನಗರದಿಂದ ಆರಂಭಗೊಂಡು ಕ್ಷೇತ್ರದ ಮುಖಾಂತರ ಹಾದು ಹೋಗಿರುವ ಈ ರಸ್ತೆಯನ್ನು ಅವಲಂಭಿಸಿದ್ದಾರೆ. ಅಲ್ಲದೆ ತಲಾ ಎರಡು ದೈವಸ್ಥಾನ, ದೇವಸ್ಥಾನ , ಒಂದು ಮದ್ರಸಾ, ಮೂರು ಅಂಗನವಾಡಿ, ಒಂದು ಹಿರಿಯ ಪ್ರಾಥಮಿಕ ಶಾಲೆಗಳಿಗೂ ಇಲಾಖಾ ಜಾಗದಲ್ಲಿ ಹಾದು ಹೋದ ಈ ಪ್ರಮುಖ ರಸ್ತೆ ನೇರ ಸಂಪರ್ಕ ಕೊಂಡಿಯಾಗಿದೆ. ರಸ್ತೆ ಅಭಿವೃದ್ದಿಯಿಂದ ಈ ಭಾಗದ ಜನತೆ ಖುಷಿ ಪಟ್ಟಿದ್ದಾರೆ.
ಇಲಾಖಾ ಜಾಗದ ಮುಖಾಂತರ ಹಾದು ಹೋಗಿರುವ ರಸ್ತೆ ಅಭಿವೃದ್ದಿಗೆ ಶಾಸಕರು ಅನುದಾನ ನೀಡಿ ಅಭಿವೃದ್ದಿಗೆ ಒತ್ತು ನೀಡಿರುವುದು ಈ ಭಾಗದ ಜನತೆಗೆ ಸಂತಸ ತಂದಿದೆ. ಆ ಮೂಲಕ ಎರಡು ದಶಕಗಳ ಹೋರಾಟಕ್ಕೆ ಫಲ ಸಿಕ್ಕಂತಾಗಿದೆ. ಇಲಾಖಾ ಮುಖಾಂತರ ಹಾದು ಹೋಗಿರುವ ಸಾರ್ವಜನಿಕರು ಉಪಯೋಗಿಸುತ್ತಿದ್ದ ದಾರಿಗಳನ್ನು , ಕೆಲವು ರಸ್ತೆಗಳನ್ನು ಇಲಾಖಾದಿಕಾರಿಗಳು ಸುರಕ್ಷತಾ ದೃಷ್ಟಿಯಿಂದ ಈಗಾಗಲೇ ಮುಚ್ಚಿದ್ದಾರೆ. ಇದರಿಂದ ಜನರಿಗಾದ ಸಮಸ್ಯೆಯನ್ನು ನಿವಾರಿಸಲು ಸಂಬಂದ ಪಟ್ಟ ವರು ಪ್ರಯತ್ನಿಸಬೇಕು.
-ಸೋಮನಾಥ ಪಲ್ಲಡ್ಕ, ಗ್ರಾಮಸ್ಥ
ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದ ಬಳಿಕ ಗ್ರಾಮೀಣ ರಸ್ತೆಗಳ ಅಭಿವೃದ್ದಿಗೆ ಹೆಚ್ಚು ಒತ್ತು ನೀಡುತ್ತಿದೆ. ಕೊÊಲ ಪಶುಸಂಗೋಪಾನ ಇಲಾಖಾ ಜಾಗದ ಮುಖಾಂತರ ಹಾದು ಹೋಗಿರುವ ಸಾರ್ವಜನಿಕರ ಬಳಕೆಯಲ್ಲಿದ್ದ ರಸ್ತೆ ಅಭಿವೃದ್ದಿಗೆ ಈ ಭಾಗದ ಜನತೆ ಬೇಡಿಕೆಯಿಟ್ಟದ್ದರು. 1.40 ಕೋಟಿ ವೆಚ್ಚದಲ್ಲಿ ಅಭಿವೃದ್ದಿಪಡಿಸಿ ಬೇಡಿಕೆ ಇಡೇರಿಸಲಾಗಿದೆ.
-ಎಸ್ ಅಂಗಾರ , ಸಚಿವರು