ಕುದ್ಮಾರು -ಶಾಂತಿಮೊಗರು ರಸ್ತೆ | ಅವೈಜ್ಞಾನಿಕ ಕಾಮಗಾರಿಯಿಂದ ಸಾರ್ವಜನಿಕರಿಗೆ ತೊಂದರೆ | ಮಾ.20ಕ್ಕೆ ರಸ್ತೆ ತಡೆದು ಪ್ರತಿಭಟನೆ |ಸಾರ್ವಜನಿಕ ಸಭೆಯಲ್ಲಿ ನಿರ್ಧಾರ
ಬೆಳಂದೂರು : ಸುಳ್ಯ ವಿಧಾನಸಭಾ ಕ್ಷೇತ್ರಕ್ಕೊಳಪಡುವ ಕುದ್ಮಾರು ಗ್ರಾಮದ ಶಾಂತಿಮೊಗರು ಸೇತುವೆ ಸಂಪರ್ಕಿಸುವ ಜಿಲ್ಲಾ ಮುಖ್ಯ ರಸ್ತೆಯಾಗಿರುವ ಕುದ್ಮಾರು- ಶಾಂತಿಮೊಗರು-ಆಲಂಕಾರು ಸಂಪರ್ಕ ರಸ್ತೆಯ ಅಗಲೀಕರಣ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ .ಸಮಸ್ಯೆ ಪರಿಹರಿಸದೇ ಇದ್ದರೆ ಮಾ.20ರಂದು ಕುದ್ಮಾರು ಜಂಕ್ಷನ್‍ನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಅವರು, ಶಾಂತಿಮೊಗರು ದೇವಸ್ಥಾನದಲ್ಲಿ 18 ವರ್ಷಗಳ ಬಳಿಕ ಬ್ರಹ್ಮಕಲಶೋತ್ಸವ ಎ.3ರಿಂದ ಎ.8ರವರೆಗೆ ನಡೆಯಲಿದೆ.ಕಾಮಗಾರಿ ಆರಂಭದ ಸಂದರ್ಭದಲ್ಲೇ ಸಂಬಂಧಪಟ್ಟ ಎಂಜಿನಿಯರ್,ಗುತ್ತಿಗೆದಾರರಲ್ಲಿ ವಿಷಯ ತಿಳಿಸಲಾಗಿದೆ.ಆದರೆ ನಿಧಾನಗತಿಯ ಕಾಮಗಾರಿಯಿಂದಾಗಿ ಸಾರ್ವಜನಿಕರು ದೂಳು ತಿನ್ನುವ ಸ್ಥಿತಿ ತಲುಪಿದೆ.ಈ ರಸ್ತೆಯಲ್ಲಿ ಸರಕಾರಿ ಬಸ್ ಸೇರಿದಂತೆ ಹಲವು ವಾಹನಗಳು ಸಂಚಾರ ನಡೆಸುತ್ತಿದೆ.ರಸ್ತೆಯಿಂದ ಬರುವ ದೂಳು ಜನಜೀವನಕ್ಕೂ ತೊಂದರೆ ಉಂಟುಮಾಡುವ ಸಾಧ್ಯತೆ ಇದೆ.ಎಲ್ಲೆಡೆ ಕೋರೆನಾ ಬೀತಿಯಲ್ಲಿ ಜನರಿದ್ದಾರೆ.ಅದರ ಜತೆಗೆ ಕುದ್ಮಾರಿನ ಜನತೆ ದೂಳಿನಿಂದ ಬೇರೊಂದು ಕಾಯಿಲೆ ಶುರುವಾಗುವ ಆತಂಕ ಎದುರಿಸುತ್ತಿದ್ದಾರೆ ಎಂದರು.
ಅಲ್ಲದೆ ಶಾಂತಿಮೊಗರು ಸೇತುವೆ ನಿರ್ಮಾಣ ಸಂದರ್ಭ ದೇವಸ್ಥಾನದ ಸಂಪರ್ಕ ರಸ್ತೆಯನ್ನು ಡಾಮರೀಕರಣ ಮಾಡಿಕೊಡುವ ಕುರಿತು ಮಾತುಕತೆ ನಡೆಸಲಾಗಿತ್ತು.ಇಲಾಖಾ„ಕಾರಿಗಳೂ ಮೌಖಿಕ ಭರವಸೆ ನೀಡಿದ್ದರು.ಆದರೆ ಈವರೆಗೂ ಡಾಮರೀಕರಣ ಮಾಡಿಲ್ಲ.ಈ ಕುರಿತಂತೆ 2016ರಲ್ಲಿ ಮನವಿ ಮಾಡಿಕೊಳ್ಳಲಾಗಿತ್ತು.ಈ ಬಾರಿಯೂ ಮನವಿ ಮಾಡಿಕೊಳ್ಳಲಾಗಿದೆ ಎಂದರು.
ನಾಗೇಶ್ ಕೆಡೆಂಜಿ ಮಾತನಾಡಿ,ಕುದ್ಮಾರು ಜಂಕ್ಷನ್‍ನಲ್ಲಿ ಶಾಂತಿಮೊಗರು ಭಾಗದಿಂದ ಹೋಗುವ ರಸ್ತೆ ಎತ್ತರವಾಗಿದೆ.ಕಾಣಿಯೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯು ತಗ್ಗಾಗಿದ್ದು,ಈ ಬಾಗದಿಂದ ಹೋಗುವ ವಾಹನಗಳು ನೇರವಾಗಿ ಬರುವ ಸಾಧ್ಯತೆ ಇದ್ದು ಇದರಿಂದ ಅಪಘಾತವಾಗುವ ಸಾಧ್ಯತೆ ಇದೆ.ಈ ಕುರಿತು ಗಮನಕ್ಕೆ ತಂದರೂ ಯಾವುದೇ ಬದಲಾವಣೆಗೆ ಮುಂದಾಗಿಲ್ಲ ಎಂದರು.ಅಲ್ಲದೆ ರಸ್ತೆ ಬದಿಯ ಪಕ್ಕದಲ್ಲೇ ಎರಡು ಮನೆಗಳಿದ್ದು ರಸ್ತೆ ಅಗಲೀಕರಣಕ್ಕಾಗಿ ಹಾಕಿದ್ದ ಮಣ್ಣು ಆ ಮನೆಯ ಅಂಗಳಕ್ಕೆ ಬಿದ್ದಿದೆ.ಈ ರಸ್ತೆಯಲ್ಲಿ ಬರುವ ವಾಹನಗಳು ಮನೆಯ ಅಂಗಳಕ್ಕೆ ಉರುಳಿದರೂ ಅಚ್ಚರಿ ಇಲ್ಲ.ಆ ಮನೆಯವರು ನಿತ್ಯ ದೂಳಿನಿಂದ ಸ್ನಾನ ಮಾಡುವಂತಾಗಿದೆ.ಒಟ್ಟಿನಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಸಾರ್ವಜನಿಕರಿಗೆ ತೊಂದರೆ ಅನುಭವಿಸುವಂತಾಗಿದೆ ಎಂದರು.
ದ್ವಿಚಕ್ರ ವಾಹನ ಸವಾರರು ಹಾಗೂ ಕಾಲುನಡಿಗೆಯಲ್ಲಿ ಸಾಗುವವರ ಕಷ್ಟ ಹೇಳತೀರದು. ಅರ್ಧ ಟೈರ್ ದೂಳಿನಲ್ಲಿ ಹೂತು ಹೋಗುವಷ್ಟು ದೂಳು ಈ ರಸ್ತೆಯಲ್ಲಿದ್ದು, ಪಾದಚಾರಿಗಳ ಮಾತ್ರವಲ್ಲದೇ ರಸ್ತೆ ಬದಿಯಲ್ಲಿ ಮನೆ ಹೊಂದಿರುವವರು ನಿತ್ಯ ದೂಳಿನ ನರಕ ಯಾತನೆ ಅನುಭವಿಸುತ್ತಿದ್ದಾರೆ. ದೂಳು ಗುಂಡಿಗಳಿಂದ ಆವೃತ್ತವಾದ ಈ ರಸ್ತೆಯ ಮೂಲಕ ಪ್ರಯಾಣಿಸುವ ಪ್ರಯಾಣಿಕರು ಸಂಬಂಧಪಟ್ಟ ಅ„ಕಾರಿ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿಕೊಂಡೇ ಮುಂದುವರಿಯುತ್ತಾರೆ. ಕಾಮಗಾರಿ ಆರಂಭಿಸಿ ಈಗ ರಸ್ತೆ ಅಭಿವೃದ್ಧಿಗೊಳಿಸಲು ಯಾಕೆ ಮೀನಮೇಷ ಎಣಿಸಲಾಗುತ್ತಿದೆ ಎಂಬುದು ಸ್ಕಂದ ಶ್ರೀಯುವಕ ಮಂಡಲದ ಅಧ್ಯಕ್ಷ ದೇವರಾಜ್ ನೂಜಿ ಹೇಳಿದರು.
ಹದಗೆಡುತ್ತಿದೆ ಆರೋಗ್ಯ
ಈ ಭಾಗದಲ್ಲಿ ಅನೇಕ ಮನೆಗಳಿದ್ದು, ದೂಳಿನ ಪರಿಣಾಮ ಮನೆ ಮಂದಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆಲಂಕಾರು, ಶರವೂರು ಭಾಗದ ವಿದ್ಯಾರ್ಥಿಗಳು, ನೌಕರರು ತಾಲೂಕು ಕೇಂದ್ರ ಪುತ್ತೂರನ್ನು ಸಂಪರ್ಕಿಸಲು ಇದೇ ರಸ್ತೆಯನ್ನು ಬಳಸುತ್ತಿದ್ದು ನೂರಾರು ಮಂದಿ ನಡಿಗೆಯಲ್ಲೇ ಮುಖ್ಯ ರಸ್ತೆಯನ್ನು ಸಂಪರ್ಕಿಸುತ್ತಾರೆ. ಅದೆಷ್ಟೋ ದೂಳಿನ ಕಣಗಳು ಅವರ ದೇಹ ಸೇರುತ್ತದೆ ಎಂದು ಸಭೆಯಲ್ಲಿದ ಸಾರ್ವಜನಿಕರು ಹೇಳಿದರು.
ಸಭೆಯಲ್ಲಿ ರಸ್ತೆ ಕಾಮಗಾರಿ ಕುರಿತು ಯಾವುದೇ ಪ್ರಗತಿಯಾಗದೇ ಇದ್ದರೆ ,ಸಂಕಷ್ಟ ಸ್ಥಿತಿಯಲ್ಲಿರುವ 2 ಮನೆಯವರ ಸಮಸ್ಯೆಗೆ ಸ್ಪಂದನೆ ಮಾಡಬೇಕು,ಈ ಹಿಂದೆ ನೀಡಿದ ಭರವಸೆಯಂತೆಯೇ ದೇವಸ್ಥಾನಕ್ಕೆ ಹೋಗುವ ರಸ್ತೆಯನ್ನು ಅಭಿವೃದ್ದಿ ಮಾಡಬೇಕೆಂಬ ಒತ್ತಾಯ ಕೇಳಿಬಂತು.
ಇಲಾಖೆಯವರು ಸ್ಪಂದಿಸದೇ ಇದ್ದಲ್ಲಿ ಮಾ.20ಕ್ಕೆ ಮುಖ್ಯರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡುವಂತೆ ನಿರ್ಧರಿಸಲಾಯಿತು.
ಸಭೆಯಲ್ಲಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಚಂದ್ರಶೇಖರ ಬರೆಪ್ಪಾಡಿ,ಕೋಶಾ„ಕಾರಿ ಯಶೋಧರ ಕೆಡೆಂಜಿಕಟ್ಟ,ಲೋಕನಾಥ ವಜ್ರಗಿರಿ,ವಿಠಲ ಗೌಡ,ಜಿತಾಕ್ಷಿ ಜಿ, ಸೀತಾರಾಮ,ಲೋಹಿತಾಕ್ಷ,ಪದ್ಮನಾಭ ಕೆರೆನಾರು,ಹರ್ಷಿತ್ ಕೂರ,ಪುನೀತ್ ,ಸಂತೋಷ್ ,ಶಿವಪ್ರಸಾದ್,ಚಿದಾನಂದ ಕೆರೆನಾರು,ಯತೀಶ್ ನಡುಮನೆ,ಶಿವ ಪ್ರಸಾದ್ ಹೊಸೊಕ್ಲು ,ಸೌಮ್ಯಾ ಮತ್ತು ಸ್ಕಂದ ಶ್ರೀ ಯುವಕ ಮಂಡಲ,ಕುದ್ಮಾರು ಮಹಿಳಾ ಮಂಡಲ,ರೆಡ್ ಬಾಯ್ಸ್ ಕುದ್ಮಾರು,ಸ್ನೇಹಿತರ ಬಳಗ ಕುದ್ಮಾರು,ಝಾನ್ಸಿ ಯುವತಿ ಮಂಡಲ,ಗಣೇಶೋತ್ಸವ ಸಮಿತಿ ,ನವೋದಯ ಸ್ವಸಹಾಯ ಸಂಘ ಕುದ್ಮಾರು,ಸಾಧನಾ,ಚೇತನಾ,ಭಾಗ್ಯಶ್ರೀ ಸ್ತ್ರೀಶಕ್ತಿ ಸಂಘ,ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ,ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ,ನಗರ ಭಜನಾ ಸಮಿತಿ,ವರಮಹಾಲಕ್ಷ್ಮೀ ಪೂಜಾ ಸಮಿತಿ ,ತಿರಂಗಾ ವಾರಿಯರ್ಸ್ ,ಯುವಶಕ್ತಿ ಕೆಲೆಂಬಿರಿ,ವೀರಾಂಜನೇಯ ಗೆಳೆಯರ ಬಳಗ ಪಲ್ಲತ್ತಾರು,ವೀರ ಕೇಸರಿ ಕಾಪೆಜಾಲು ಇದರ ಪದಾ„ಕಾರಿಗಳು ಉಪಸ್ಥಿತರಿದ್ದರು.