ಕಾಂಗ್ರೆಸ್ ನಿಂದ ಸರ್ದಾರ್ ಪಟೇಲ್ ಗೆ ಅವಮಾನ | ಸಿದ್ದು ಡಿಕೆಶಿ ಬಾತ್ ಜೀತ್ ವೈರಲ್ ಮಾಡಿ ಮಜಾ ನೋಡುತ್ತಿರುವ ಬಿಜೆಪಿ !!
ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಪುಣ್ಯ ಸ್ಮರಣೆ ದಿನದಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಫೋಟೋವನ್ನು ಕೆಪಿಸಿಸಿ ಕಚೇರಿಯಲ್ಲಿ ಇಡುವ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಡುವಿನ ಮಾತುಕತೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಬಿಜೆಪಿಗರಿಗೆ ಆಹಾರ ಆಗ್ತೇವೆ ಅನ್ನೋ ಕಾರಣಕ್ಕೆ ಪಟೇಲರ ಫೋಟೋ ತಂದಿಟ್ಟ ಘಟನೆ ಕೆಪಿಸಿಸಿ ಕಚೇರಿಯಲ್ಲಿ ನಡೆದಿದ್ದು, ಇದನ್ನು ಇದೀಗ ಬಿಜೆಪಿ ವೈರಲ್ ಮಾಡಿದೆ.
ಅಕ್ಟೋಬರ್ 31ರಂದು ಇಂದಿರಾ ಗಾಂಧಿ ಪುಣ್ಯಸ್ಮರಣೆಯನ್ನು ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಗುತ್ತಿತ್ತು. ಈ ವೇಳೆ ಇಂದಿರಾ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಗಿತ್ತು. ತಕ್ಷಣವೇ ಸಿದ್ದರಾಮಯ್ಯ ಅವರು ವಲ್ಲಭಾ ಬಾಯಿ ಪಟೇಲರದ್ದು ಇಂದು ಜನ್ಮದಿನ. ಅವರದ್ದೂ ಫೋಟೋ ಇರಿಸೋಣ ಅಂತಾರೆ. ಇದಕ್ಕೆ ಉತ್ತರಿಸೋ ಡಿಕೆಶಿ, ಹೌದು ಇಂದೇ ಜನ್ಮದಿನ.
ಎರಡೂ ಫೋಟೋ ಇಡೋದಿಲ್ಲ ನಾವು ಕಾಂಗ್ರೆಸ್ಸು ಅಂತಾರೆ. ಇದಕ್ಕೆ ಪ್ರತಿಕ್ರಿಯಿಸೋ ಸಿದ್ದರಾಮಯ್ಯ, ಬಟ್.. ಏನ್ ಆಗುತ್ತೆ.. ಬಿಜೆಪಿಯವರು ಅಡ್ವಾಂಟೇಜ್ ತಗೋತಾರೆ ಅಂತ ಹೇಳ್ತಾರೆ. ಡಿಕೆಶಿ ಮಾತಾಡಿ, ನಾವು ನೋಡದೇ ಇರೋದಾ. ನಮ್ಮಲ್ಲಿ ಯಾವುತ್ತೂ ಇಟ್ಟಿಲ್ಲ. ಅದಕ್ಕೆ ಸಿದ್ಧರಾಮಯ್ಯ, ಇಲ್ಲಾಂದ್ರೆ ಬಿಜೆಪಿಯವರು ಇದನ್ನೇ ಬಂಡವಾಳ ಮಾಡಿಕೊಳ್ತಾರೆ ಅಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರೋ ಡಿಕೆಶಿ, ಮೊದಲಿನಿಂದಲೂ ಇಡ್ತಿರ್ಲಿಲ್ಲ ಅಂತ ಸುಮ್ಮನಾಗ್ತಾರೆ.
ಕೆಲ ಸಮಯದ ನಂತರ ಜ್ಞಾನೋದಯವಾದಂತೆ ಡಿಕೆಶಿ, ಅಲ್ಲಿದ್ದವರನ್ನು ಕರೆದು ತಂದಿಡಪ್ಪಾ ಅಂತಾರೆ. ನಂತರ ಎಲ್ಲರೂ ಪಟೇಲ್ ಫೋಟೋಗೆ ಪುಷ್ಪನಮನ ಸಲ್ಲಿಸ್ತಾರೆ. ಇದನ್ನು ಬಿಜೆಪಿ ಟೀಕಿಸಿ ವೈರಲ್ ಮಾಡಿದೆ. ಆದರೆ, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮಾತ್ರ ದೇಶಭಕ್ತಿ ವಿಚಾರದಲ್ಲಿ ಬಿಜೆಪಿಯವರಿಂದ ಕಲಿಬೇಕಾದ್ದೇನಿಲ್ಲ ಅಂದಿದ್ದಾರೆ. ಇದಕ್ಕೆ ಬಿಜೆಪಿಯ ಸಿಟಿ ರವಿ ಕೌಂಟರ್ ಕೊಟ್ಟಿದ್ದು, ಕಾಂಗ್ರೆಸ್ ಮನಃಸ್ಥಿತಿ ಅಂಥಹದ್ದು ಅಂತ ಟೀಕಿಸಿದ್ದಾರೆ.