ತಾತ್ಕಾಲಿಕವಾಗಿ ವಸತಿ ಶಾಲೆಯಾದ ಹಿರೇಬಂಡಾಡಿ ಸರಕಾರಿ ಪ್ರೌಢಶಾಲೆ : ಎಸೆಸೆಲ್ಸಿ ಮಕ್ಕಳಿಗೆ ಓದಲು ಅನುಕೂಲ
ಪುತ್ತೂರು ಶಾಸಕ ಸಂಜೀವ ಮಠಂದೂರು ಸ್ವಂತ ಊರಾದ ಹಿರೇಬಂಡಾಡಿ ಸರಕಾರಿ ಪ್ರೌಢಶಾಲೆಯಲ್ಲಿ ಹಗಲು ರಾತ್ರಿ ನಡೆದಿದೆ ವಿದ್ಯಾಭ್ಯಾಸ.
ಈ ಬಾರಿ ಎಸೆಸೆಲ್ಸಿ ಯಲ್ಲಿ ನೂರಕ್ಕೆ ನೂರು ಫಲಿತಾಂಶವನ್ನು ತರಬೇಕೆಂಬ ಉದ್ದೇಶದಿಂದ ಮಾನ್ಯ ಶಾಸಕರು 4 ಗಂಟೆಗೇ ಎದ್ದು ಮಕ್ಕಳ ಮನೆ ಭೇಟಿ ಮಾಡಿದ್ದರು. ಅವರ ಆ ಕಾರ್ಯ ವ್ಯಾಪಕ ಶ್ಲಾಘನೆಗೆ ಒಳಗಾಗಿತ್ತು.
ಇದೀಗ ಈ ಪ್ರೌಢಶಾಲೆಯ ಮೇಲುಸ್ತುವಾರಿ ಸಮಿತಿಯ ಗೌರವಾಧ್ಯಕ್ಷ ಶ್ರೀ ಶ್ರೀಧರ್ ಮಠಂದೂರು ಅವರ ನೇತೃತ್ವದಲ್ಲಿ ಶಾಲಾ ಮಕ್ಕಳು ಪೋಷಕರು ಮತ್ತು ಶಿಕ್ಷಕರು ಇನ್ನೊಂದು ಹೆಜ್ಜೆ ಮುಂದಿಟ್ಟಿದ್ದಾರೆ.
ಈ ಬಾರಿ ಒಟ್ಟು 55 ಜನ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ ಅವರಲ್ಲಿ 25 ಜನ ಹುಡುಗರು 25 ಜನ ಹುಡುಗರಿಗೆ ಶಾಲೆಯ ಪ್ರಾಂಗಣದಲ್ಲೇ ಇರುವ ಹಾಲ್ ಒಂದರಲ್ಲಿ ಅವರಿಗೆ ವಸತಿ ಸೌಕರ್ಯ ಮಾಡಲಾಗಿದೆ. ಮಕ್ಕಳು ತಮ್ಮ ಎಂದಿನ ಶಾಲಾ ಅವಧಿಯ ನಂತರ ಶಾಲೆಯಲ್ಲಿ ಉಳಿದುಕೊಂಡು 10: 30 ರವರಿಗೆ ಓದಲು ಅವಕಾಶ ಕಲ್ಪಿಸಲಾಗಿದೆ.
ಎಷ್ಟೋ ಹುಡುಗರು ಓದಿನಲ್ಲಿ ಹಿಂದಿದ್ದಾರೆ. ಓದಿನಲ್ಲಿ ಮುಂದಿರುವ ಮತ್ತು ಹಿಂದಿರುವ ವಿದ್ಯಾರ್ಥಿಗಳು ಒಂದೇ ಕಡೆ ಸೇರಿಕೊಂಡು ಕಂಬೈನ್ಡ್ ಸ್ಟಡಿ ಮಾಡುವುದರ ಮೂಲಕ ಓದಿನಲ್ಲಿ ಹಿಂದೆ ಬಿದ್ದ ವಿದ್ಯಾರ್ಥಿಗಳಿಗೆ ಪಾಠವನ್ನು ಚೆನ್ನಾಗಿ ತನ್ನ ಸಹಪಾಠಿ ಯಿಂದಲೇ ಕಲಿತುಕೊಳ್ಳಲು ಅನುಕೂಲವಾಗುತ್ತದೆ.
ಅಷ್ಟೇ ಅಲ್ಲದೆ, ಎಷ್ಟೋ ಹುಡುಗರು ದೂರದ ಪ್ರದೇಶಗಳಿಂದ ನಡೆದುಕೊಂಡು ಶಾಲೆಗೆ ಬರುತ್ತಿದ್ದಾರೆ. ಹೀಗೆ ಬೆಳಿಗ್ಗೆ ಮತ್ತು ಸಂಜೆ ನಡೆದುಕೊಂಡು ಹೋಗುವ ಸಮಯ ಮತ್ತು ಕಾಲ್ನಡಿಗೆಯಲ್ಲಿ ಸಾಗುವ ಶ್ರಮವನ್ನು ಕಡಿಮೆಮಾಡಿ ಪರೀಕ್ಷಾಪೂರ್ವ ದಿನಗಳಲ್ಲಿ ಮಕ್ಕಳಿಗೆ ಒಂದಷ್ಟು ಕಂಫರ್ಟ್ ಒದಗಿಸುವುದು ಈ ಮೂಲಕ ಸಾಧ್ಯವಾಗುತ್ತದೆ.
ಓದಿನಲ್ಲಿ ಹಿಂದಿರುವ ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರೂ, ಇತರ ಪೋಷಕರು ಎಲ್ಲರೂ ಪರಸ್ಪರ ಮಾತಾಡಿಕೊಂಡು ತಮ್ಮ ಎಲ್ಲಾ ವಿದ್ಯಾರ್ಥಿಗಳನ್ನೂ ಈ ರೀತಿಯ ವಸತಿ ಶಾಲೆಗೆ ಕಳಿಸುತ್ತಿದ್ದಾರೆ. ಕೆಲವು ವಿದ್ಯಾರ್ಥಿನಿಯರ ಪೋಷಕರು ಶಾಲಾ ಅವಧಿಯ ನಂತರ ಖುದ್ದು ಶಾಲೆಯಲ್ಲಿ 10.00 ರವರೆಗೆ ಹಾಜರಿದ್ದು ಆನಂತರ ಆ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ.
ಮಕ್ಕಳ ದಿನಚರಿ ಬೆಳಗ್ಗೆ ಐದು ಗಂಟೆಗೆ ಪ್ರಾರಂಭವಾಗಿ 10.30 ರ ವರೆಗೆ ನಡೆಯುತ್ತದೆ. ಓದಿನ ಜೊತೆಗೆ ಒತ್ತಡ ನಿವಾರಕ ಯೋಗ, ಧ್ಯಾನ ಮತ್ತು ಮಕ್ಕಳನ್ನು ಉತ್ತೇಜಿಸುವ ಮಾತುಗಳನ್ನು ಇಲ್ಲಿ ಹೇಳಿಕೊಡಲಾಗುತ್ತಿದೆ. ಭಾನುವಾರ ರಜಾ ದಿನವಾಗಿದ್ದು ಆದಿನ ಬೆಳಿಗ್ಗೆೆ ಮಕ್ಕಳನ್ನು ತಮ್ಮ ಮನೆಗಳಿಗೆ ಕಳುಹಿಸಿಕೊಡಲಾಗುತ್ತದೆ. ಇನ್ನೆರಡು ವಾರ ವಸತಿ ಶಾಲೆ ಕಾರ್ಯನಿರ್ವಹಿಸಲಿದೆ.
ಶಾಸಕರಾದ ಸಂಜೀವ ಮಠಂದೂರು, ಶಾಲಾ ಮೇಲುಸ್ತುವಾರಿ ಸಮಿತಿಯ ಗೌರವಾಧ್ಯಕ್ಷರಾದ ಶ್ರೀಧರ್ ಮಠಂದೂರು, ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀ ಹಮ್ಮಬ್ಬ ಶೌಕತ್ ಅಲಿ, ಇತರ ಗ್ರಾಮ ಪಂಚಾಯತ್ ಸದಸ್ಯರುಗಳು, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ವೇದಾವತಿ, ದೈಹಿಕ ಶಿಕ್ಷಕ ಸೀತಾರಾಮ್ ಗೌಡ ಬಂಡಾಡಿ, ಸಹಶಿಕ್ಷಕ ಶ್ರೀಹರಿ ಕಿರಣ್ ಮತ್ತೆಲ್ಲ ಶಿಕ್ಷಕ ವೃಂದ ಮತ್ತು ಮುಖ್ಯವಾಗಿ ಪೋಷಕರ ಪ್ರಯತ್ನ ಇಲ್ಲಿ ಅಭಿನಂದನೀಯ.