Health Tips: ಚಿಕ್ಕ ಮಕ್ಕಳಿಗೆ ಟೀ ಕೊಡ್ತೀರಾ? ಮಕ್ಕಳು ಚಹಾ ಕುಡಿದರೆ ಏನಾಗುತ್ತದೆ? ಆರೋಗ್ಯದ ಮೇಲಾಗುವ ಪರಿಣಾಮಗಳೇನು?

Share the Article

Health Tips: ಅನೇಕ ಪಾಲಕರು ತಮ್ಮ ಮಕ್ಕಳಿಗೆ ಕೆಲವೊಮ್ಮೆ ಅನುಕೂಲಕ್ಕಾಗಿ ಅಥವಾ ಕೆಲವೊಮ್ಮೆ ತುಂಬಾ ಚಳಿಯಾದಾಗ ಅಥವಾ ಇನ್ನೂ ಬೇರೆ ಕಾರಣಗಳಿಂದಾಗಿ ಅಥವಾ ಕಾರಣವಿಲ್ಲದೆ ಚಹಾವನ್ನು ನೀಡುತ್ತಾರೆ. ಚಳಿಗಾಲ ಮತ್ತು ಮಳೆಗಾಲದಲ್ಲಿ ತಂಪು ವಾತಾವರಣವಿರುವುದರಿಂದ ಕೆಲವು ಮನೆಗಳಲ್ಲಿ ಮಕ್ಕಳಿಗೆ ಬಿಸಿಬಿಸಿ ಚಹಾ ಕೊಡುತ್ತಾರೆ. ಬೆಳಿಗ್ಗೆ ಚಹಾದೊಂದಿಗೆ ಬಿಸ್ಕತ್ತು, ಖಾರಿ, ಟೋಸ್ಟ್, ಬ್ರೆಡ್ ಇತ್ಯಾದಿಗಳನ್ನು ತಿನ್ನುವ ಅಭ್ಯಾಸ ಅನೇಕರಿಗೆ ಇದೆ. ಮಕ್ಕಳು ಇದನ್ನು ತಿನ್ನಲು ಇಷ್ಟಪಡುತ್ತಾರೆ. ಆದ್ದರಿಂದ, ಅವರಿಗೆ ಅದನ್ನು ನೀಡಲಾಗುತ್ತದೆ.

ಮಕ್ಕಳು ಚಹಾದ ರುಚಿಯನ್ನು ತಿಳಿದ ನಂತರ, ಅವರು ಅದನ್ನು ಪ್ರತಿನಿತ್ಯ ಸೇವಿಸಲು ಇಷ್ಟಪಡುತ್ತಾರೆ. ತದನಂತರ, ಮಕ್ಕಳು ಬೆಳಿಗ್ಗೆ ಮತ್ತು ಸಂಜೆ ತಮ್ಮ ಪೋಷಕರೊಂದಿಗೆ ಚಹಾ ಕುಡಿಯಲು ಪ್ರಾರಂಭಿಸುತ್ತಾರೆ. ನೀವು ಸಹ ಮಕ್ಕಳಿಗೆ ಈ ರೀತಿ ಚಹಾವನ್ನು ನೀಡಿದರೆ, ಅದು ಅವರ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಆಹಾರ ತಜ್ಞರ ಸಲಹೆಯಂತೆ, 12 ವರ್ಷದೊಳಗಿನ ಮಕ್ಕಳು ಚಹ ಕುಡಿಯಬಾರದು. ಬೆಳೆಯುವ ಮಕ್ಕಳಿಗೆ ಚಹಾ ಬಹಳ ಹಾನಿಕಾರಕವಾಗಿದೆ.

ಮಕ್ಕಳು ಚಹಾ ಸೇವಿಸುವುದರಿಂದ ಆಗುವ ದುಷ್ಪಪರಿಣಾಮಗಳು…

ಚಿಕ್ಕ ಮಕ್ಕಳು ಚಹಾ ಸೇವಿಸಿದರೆ ಅವರ ಆರೋಗ್ಯದ ಮೇಲಾಗುವ ಪರಿಣಾಮಗಳ ಕುರಿತು ಮಾಹಿತಿಯ ಬಗ್ಗೆ ಅನೇಕ ಸಂಶೋಧನೆಗಳ ವರದಿಗಳು ಪ್ರಕಟವಾಗಿವೆ

1. ಚಹಾವು ಟ್ಯಾನಿನ್ ನ್ನು ಹೊಂದಿರುತ್ತದೆ. ಕರುಳುಗಳು ಆಹಾರದ ಘಟಕಗಳನ್ನು ಹೀರಿಕೊಳ್ಳುವ ಪ್ರಕ್ರಿಯೆಯಲ್ಲಿ ಟ್ಯಾನಿನ್ ವ್ಯತ್ಯಯ ಉಂಟುಮಾಡುತ್ತದೆ. ಆದ್ದರಿಂದ, ಮಕ್ಕಳು ಕಬ್ಬಿಣಾಂಶ, ಕ್ಯಾಲ್ಸಿಯಂ ಇತ್ಯಾದಿಗಳ ಕೊರತೆಯನ್ನು ಅನುಭವಿಸುತ್ತಾರೆ. ಆದ್ದರಿಂದ, ಚಹಾ ಕುಡಿಯುವ ಮಕ್ಕಳಲ್ಲಿ ರಕ್ತಹೀನತೆ ಮತ್ತು ಮೂಳೆಗಳ ದೌರ್ಬಲ್ಯ ಸಾಮಾನ್ಯವಾಗಿ ಕಂಡುಬರುತ್ತದೆ.

2. ಮಕ್ಕಳು ಕಡಿಮೆ ನೀರು ಕುಡಿಯುತ್ತಾರೆ. ಏಕೆಂದರೆ ಆಟವಾಡುವಾಗ ನೀರು ಕುಡಿಯಲು ಅವರಿಗೆ ನೆನಪಿರುವುದಿಲ್ಲ. ಆದ್ದರಿಂದ, ಹೆಚ್ಚಿನ ಮಕ್ಕಳು ನಿರ್ಜಲೀಕರಣದಿಂದ ಬಳಲುತ್ತಾರೆ. ಮಕ್ಕಳು ಟೀ ಕುಡಿದರೆ ಇತರ ಮಕ್ಕಳಿಗಿಂತ ಹೆಚ್ಚಾಗಿ ಮೂತ್ರ ವಿಸರ್ಜನೆ ಮಾಡಬೇಕಾಗುತ್ತದೆ. ಇದರಿಂದ, ಅವರು ನಿರ್ಜಲೀಕರಣದಿಂದ ಬಳಲುತ್ತಾರೆ.

3. ಚಹಾದಲ್ಲಿ ಸ್ವಲ್ಪ ಮಟ್ಟಿಗೆ ಕೆಫೀನ್ ಕೂಡ ಇದೆ. ಇದು ಮಕ್ಕಳಲ್ಲಿ ನಿದ್ರಾಹೀನತೆ, ಆತಂಕ, ಕಿರಿಕಿರಿ ಅಥವಾ ಪ್ರಕ್ಷುಬ್ಧತೆಯನ್ನು ಉಂಟುಮಾಡುತ್ತದೆ.

4. ಚಹಾದಲ್ಲಿನ ಕೆಲ ಘಟಕಗಳಿಂದಾಗಿ ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಹೆಚ್ಚಾಗಿ ಆಮ್ಲೀಯತೆಯಿಂದ ಬಳಲುತ್ತಾರೆ. ಆಗಾಗ್ಗೆ ಎದೆಯುರಿ ಅಥವಾ ವಾಂತಿ ಕೂಡ ಆಗಬಹುದು.

5. ಕೆಫೀನ್ ಹೊಂದಿರುವ ಸಿಹಿತಿಂಡಿಗಳನ್ನು ಸೇವಿಸುವುದರಿಂದ ಮಕ್ಕಳಲ್ಲಿ ಹಲ್ಲು ಕೊಳೆಯುವ ಅಪಾಯ ಹೆಚ್ಚಾಗುತ್ತದೆ. ಅಂದರೆ, ಹಲ್ಲು ಕುಳಿ ಬೇಗ ಉಂಟಾಗುತ್ತದೆ.

6. ಕೆಫೀನ್ ಮತ್ತು ಸಕ್ಕರೆಯ ಸಂಯೋಜಿತ ಸೇವನೆಯು ಮಕ್ಕಳಲ್ಲಿ ತೂಕ ಹೆಚ್ಚಾಗಲು ಕಾರಣವಾಗಬಹುದು. ಚಿಕ್ಕ ವಯಸ್ಸಿನಲ್ಲಿ ಸ್ಥೂಲಕಾಯತೆ ಆಗುವುದರಿಂದ ಕಡಿಮೆ ವಯಸ್ಸಿನಲ್ಲಿ ಮಧುಮೇಹ, ಹೃದಯ ಕಾಯಿಲೆ ಇತ್ಯಾದಿಗಳಿಗೆ ಕಾರಣವಾಗಬಹುದು.

7. ಟ್ಯಾನಿನ್ ಮತ್ತು ಕೆಫೀನ್ ಮಕ್ಕಳ ದೈಹಿಕವಷ್ಟೆ ಅಲ್ಲದೆ ಮಾನಸಿಕ ಆರೋಗ್ಯದ ಮೇಲೆ ಕೂಡ ಕೆಟ್ಟ ಪರಿಣಾಮ ಬೀರುತ್ತದೆ. 12 ರಿಂದ 18 ವರ್ಷ ವಯಸ್ಸಿನ ಹದಿಹರೆಯದವರು ದಿನಕ್ಕೆ 100 ಮಿಲಿಗ್ರಾಂ ಕೆಫೀನ್ ಅನ್ನು ಹೊಂದಿರಬಹುದು. ಆದರೆ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಚಹಾವನ್ನು ಕೊಡಲೇಬಾರದು.

ಚಹಾವು ಮಕ್ಕಳಿಗಾಗಿ ಯಾವುದೇ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿಲ್ಲ. ಚಹಾವು ಮಕ್ಕಳಿಗೆ ಯಾವುದೇ ರೀತಿಯಲ್ಲಿ ಉಪಯುಕ್ತ ಅಥವಾ ಅಗತ್ಯವಿಲ್ಲ. ಹಾಗಾಗಿ ಚಿಕ್ಕ ಮಕ್ಕಳಿಗೆ ಟೀ ಕೊಡುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎನ್ನುತ್ತಾರೆ ಪೌಷ್ಟಿಕತಜ್ಞರು. ಮಕ್ಕಳ ಎದುರು ಪೋಷಕರು ದಿನಾಲು ಚಹಾ ಕುಡಿಯುತ್ತಿದ್ದರೆ ಮಕ್ಕಳಿಗೆ ಚಹ ತಪ್ಪಿಸುವುದು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ:Weather Report: ಮತ್ತೆ ವಾಯುಭಾರ ಕುಸಿತದ ಭೀತಿ: ಎಲ್ಲೆಲ್ಲಿ ಮಳೆ ಸಾಧ್ಯತೆ?

ಹಾಗಾದರೆ, ಮಕ್ಕಳಿಗೆ ಏನು ಕೊಡಬೇಕು..?

ಮಕ್ಕಳಿಗೆ ಏನಾದರೂ ಕೊಡಲೇಬೇಕೆಂದಿದ್ದರೆ ಆರೋಗ್ಯಕರ ವನಸ್ಪತಿಗಳ ಚಹಾ (ಹಾಲು ಬೆರೆಸದ ಕಷಾಯ) ಅಥವಾ ದೇಶಿ ಹಸುವಿನ ಹಾಲನ್ನು ಕೊಡುವುದು ಉತ್ತಮ. ಆಯುರ್ವೇದ ಚಹಾ ಮಕ್ಕಳ ರೋಗ ಪ್ರತಿರೋಧ ಶಕ್ತಿಯನ್ನು ಬಲಗೊಳಿಸುತ್ತದೆ, ದೇಶಿ ಹಸುವಿನ ಹಾಲು ಮಕ್ಕಳ ಬೆಳವಣಿಗೆಗೆ ಸಹಾಯಕವಾಗುತ್ತದೆ.

ಸಂಗ್ರಹ ಮತ್ತು ಸಂಕಲನ: ಡಾ. ಪ್ರ. ಅ. ಕುಲಕರ್ಣಿ

Comments are closed.