No Electricity: ವಿದ್ಯುತ್ ಸಂಪರ್ಕ ಕಡಿತ – ಒಂದು ವಾರದಿಂದ ಕತ್ತಲಲ್ಲಿ ಬದುಕುತ್ತಿರುವ ತೋರ ಗ್ರಾಮದ ನಿವಾಸಿಗಳು

No Electricity: ವಿರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ಸೇರಿದ ತೋರ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ವಿದ್ಯುತ್ ಸಂಪರ್ಕವಿಲ್ಲದೆ, ಹೊರ ಪ್ರಪಂಚದ ಅರಿವಿನಿಂದ ಇಲ್ಲಿನ ಗ್ರಾಮಸ್ಥರು ದೂರವಾಗಿದ್ದಾರೆ. ವಿದ್ಯುತ್ ಇಲ್ಲದೆ ಮೊಬೈಲ್ ನೆಟ್ವರ್ಕ್ ಕೂಡ ಚಾಲ್ತಿಯಲ್ಲಿಲ್ಲದೆ ಸಂಪರ್ಕ ಕಳೆದುಕೊಂಡಿದ್ದಾರೆ.

ಮಳೆಯ ಕಾರಣ ಜಿಲ್ಲಾಧಿಕಾರಿಗಳು ಶಾಲೆಗೆ ರಜ ನೀಡಿದ್ದರು ವಿದ್ಯುತ್ ಸಂಪರ್ಕವಿಲ್ಲದರಿಂದ ದೂರವಾಣಿ ಚಾಲ್ತಿಯಲ್ಲಿಲ್ಲದೆ ಸಮರ್ಪಕ ಮಾಹಿತಿ ದೊರಕದೆ, ಸುದ್ದಿ ತಿಳಿಯದೆ ಶಾಲಾ ಮಕ್ಕಳು ಮಳೆ ಗಾಳಿಯಲ್ಲಿ ಶಾಲೆಗೆ ತೆರಳಿ ವಾಪಸು ಬರುತ್ತಿರುವ ಘಟನೆಗಳು ನಡೆದಿವೆ.
ಕಳೆದ ಒಂದು ತಿಂಗಳಿನಿಂದ ಬೀಳುತ್ತಿರುವ ಮಳೆಯಿಂದಾಗಿ ಅಲ್ಲಲ್ಲಿ ಮರ ಗಿಡಗಳು ವಿದ್ಯುತ್ ಕಂಬದ ಮೇಲೆ ಬಿದ್ದು ಗುಣಮಟ್ಟವಿಲ್ಲದ ಕಂಬಗಳು ನೆಲೆಕ್ಕೆ ಉರುಳಿವೆ. ಈ ಬಗ್ಗೆ ಚಿಸ್ಕಾಂ ಅಧಿಕಾರಿಗಳನ್ನು ಸ್ಥಳೀಯರು ಸಂಪರ್ಕಿಸಿ ಮಾಹಿತಿ ಬಯಸಿದಾಗ ವಿದ್ಯುತ್ ಕಂಬ ಇಲ್ಲದರಿಂದ ಸಂಪರ್ಕ ನೀಡಲು ಸಾಧ್ಯವಾಗುತ್ತಿಲ್ಲ. ಕಂಬಗಳ ಬೇಡಿಕೆಗೆ ಪತ್ರ ಬರೆಯಲಾಗಿದೆ, ಕಂಬ ಸರಬರಾಜಾದೊಡನೆ ದುರಸ್ತಿಗೊಳಿಸಲಾಗುವುದು ಎಂದು ತಮ್ಮ ಅಸಹಾಯಕತೆಯನ್ನು ಸ್ಥಳೀಯರೊಂದಿಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.
ಗುಡ್ಡಗಾಡು ಪ್ರದೇಶವಾದ ಕೊಡಗಿನಲ್ಲಿ ಹೆಚ್ಚು ಮಳೆ ಬೀಳುವ ಪ್ರದೇಶವೆಂದು ತಿಳಿದಿದ್ದರೂ ಕೂಡ ಮುಂಜಾಗ್ರತ ಕ್ರಮವಾಗಿ ಹೆಚ್ಚಿನ ವಿದ್ಯುತ್ ಕಂಬಗಳನ್ನು ದಾಸ್ತಾನು ಇರಿಸದೆ ಇದ್ದುದರಿಂದ ಇದೀಗ ಈ ಭಾಗದ ಗ್ರಹಕರು ಸಂಕಷ್ಟಕ್ಕೆ ಈಡಾಗಿದ್ದಾರೆ. ಕೂಡಲೇ ಜಿಲ್ಲಾಡಳಿತ ಹೆಚ್ಚಿನ ಆಸಕ್ತಿ ವಹಿಸಿ ಈ ಹಿಂದೆ ಭೂಕುಸಿತವಾದ ಈ ಪ್ರದೇಶಕ್ಕೆ ವಿದ್ಯುತ್ ಸಂಪರ್ಕ ಸೇರಿದಂತೆ ಉಳಿದ ಮೂಲಭೂತ ಸೌಕರ್ಯವನ್ನು ಕಲ್ಪಿಸಿ ಕೊಡುವಂತೆ ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.
Comments are closed.