ತಲೆ ಬಾಚ್ಕೊಳ್ಳಿ, ಪೌಡರ್ ಹಚ್ಕೊಳ್ಳಿ ಮೈಸೂರು ಸ್ಯಾಂಡಲ್ ಉಜ್ಕೊಳ್ಳಿ: ತಮನ್ನಾ ಬೇಡ, ನಾನೇ ಫ್ರೀಯಾಗಿ ರಾಯಭಾರಿ ಆಗ್ರೇನೆ -ವಾಟಾಳ್ ನಾಗರಾಜ್!

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಪರಭಾಷಾ ನಟಿ ತಮನ್ನಾ ಭಾಟಿಯಾಗೆ 6 ಕೋಟಿ ರೂಪಾಯಿ ಹಣ ನೀಡಿ ಆಕೆಯನ್ನು ಮೈಸೂರು ಸ್ಯಾಂಡಲ್ ಸೋಪ್ ನ ರಾಯಭಾರಿಯನ್ನಾಗಿ ನೇಮಿಸಿದ್ದರ ವಿರುದ್ಧವಾಗಿ ಸಿಡಿದೆದ್ದಿರುವ ವಾಟಾಳ್ ನಾಗರಾಜ್ ಎಂದಿನಂತೆ ತನ್ನ ವಿಶಿಷ್ಟ ಶೈಲಿಯ ಡೈಲಾಗ್ ಗಳನ್ನು ಹೊಡೆಯುತ್ತಾ ನಿನ್ನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸೋಪು, ಸೋಪು, ಸೋಪು, ಮೈಸೂರು ಸ್ಯಾಂಡಲ್ ಸೋಪು! ಇದು ಕನ್ನಡಿಗರ ಸೋಪು, ಇದು ಕನ್ನಡದ ಸೋಪು, ಇದು ಶ್ರೀಗಂಧದ ಸೋಪು, ಪ್ರಪಂಚದಲ್ಲೇ ನಂಬರ್ ಒನ್ ಆಗಿರುವ ಈ ಸೋಪಿಗೆ ಬೇರೆ ಯಾರೂ ಕೂಡ ಅಂಬಾಸೀಡರ್ ಗಳಾಗುವ ಅವಶ್ಯಕತೆ ಇಲ್ಲ. ಸರ್ಕಾರ ಬೇರೆ ಯಾರನ್ನು ಕೂಡಾ ಈ ಸೋಪಿಗೆ ಅಂಬಾಸಿಡರ್ ಗಳನ್ನಾಗಿ ಮಾಡುವ ಅಗತ್ಯವೂ ಇಲ್ಲ. ಏಕೆಂದರೆ ಪ್ರಪಂಚದಲ್ಲೇ ಹೆಸರುವಾಸಿಯಾಗಿರುವ ಈ ಮೈಸೂರು ಸ್ಯಾಂಡಲ್ ಸೋಪಿಗೆ ಮೈಸೂರು ಸ್ಯಾಂಡಲ್ ಸೋಪೇ ಅಂಬಾಸಿಡರ್. ಹೀಗಾಗಿ ಪರಭಾಷಾ ನಟಿ ತಮನ್ನಾ ಭಾಟಿಯಾಗೆ ಕೊಡುವ 6 ಕೋಟಿ ರೂಪಾಯಿ ಹಣವನ್ನು ಸರ್ಕಾರ ಬಡಜನರ ಏಳಿಗೆಗಾಗಿ ಉಪಯೋಗಿಸಿಕೊಳ್ಳಲಿ. ಅದಲ್ಲದೆ ಯಾವುದೋ ಒಂದು ಪರಭಾಷಾ ನಟಿಯನ್ನು ಇಂತಹ ಪ್ರಸಿದ್ಧ ಸೋಪಿಗೆ ಅಂಬಾಸಿಡರನ್ನಾಗಿ ಮಾಡಿ ವಿನಾಕಾರಣ ದುಡ್ಡು ಖರ್ಚು ಮಾಡುವ ಬದಲು ಮತ್ತು ಬೇರೆ ಬೇರೆ ಬ್ರಾಂಡ್ ಗಳ ವಿದೇಶಿ ಸೋಪುಗಳನ್ನು ಉಪಯೋಗಿಸುವ ಬದಲು ಸಿದ್ದರಾಮಯ್ಯನವರೇ ನೀವೂ ಮೈಸೂರು ಸ್ಯಾಂಡಲ್ ಸೋಪನ್ನೇ ಉಜ್ಕೊಳ್ಳಿ, ಡಿಕೆಶಿಯವರೇ ನೀವೂ ಉಜ್ಕೊಳ್ಳಿ, ಎಲ್ಲಾ ಮಂತ್ರಿಗಳೇ, ಶಾಸಕರೇ ನೀವೂ ಉಜ್ಜಿ ಕೊಳ್ಳಿ, ರಾಜ್ಯದ ಜನರೆಲ್ಲರೂ ಉಜ್ಜಿಕೊಳ್ಳಿ ಎಂದು ಹಾಸ್ಯ ಮಿಶ್ರಿತ ಆಕ್ರೋಶವನ್ನು ವಾಟಾಳ್ ನಾಗರಾಜ್ ವ್ಯಕ್ತಪಡಿಸಿ ಸರ್ಕಾರದ ಈ ನಡೆಯನ್ನು ತೀವ್ರವಾಗಿ ಖಂಡಿಸಿದರು.
ಇದೇ ವೇಳೆ ಅವರು ಮಾತನಾಡುತ್ತಾ ಆರು ಕೋಟಿ ರೂಪಾಯಿ ಕೊಟ್ಟು ತಮನ್ನಾರನ್ನು ಬ್ರಾಂಡ್ ಅಂಬಾಸಿಡ್ರನ್ನಾಗಿ ಮಾಡುವ ಬದಲು, ಇಂತಹ ಶ್ರೇಷ್ಠ ಸೋಪಿಗೆ ಬಿಡಿ ಕಾಸು ಕೂಡಾ ಪಡೆದುಕೊಳ್ಳದೆ ಸರ್ಕಾರ ಒಪ್ಪಿದರೆ ನಾನೇ ಬೇಕಾದರೆ ಬ್ರಾಂಡ್ ಅಂಬಾಸಿಡರ್ ಆಗುತ್ತೇನೆಂದು ಒಂದು ಹೊಸ ಆಫರ್ ಅನ್ನು ಬಿಟ್ಟು ನಗೆ ಚಟಾಕಿ ಹಾರಿಸಿದರು.
Comments are closed.