Death: ಹೆಬ್ರಿ: ಮಗುವಿನ ಅನಾರೋಗ್ಯದ ಚಿಂತೆ: ಮಹಿಳೆ ನೇಣು ಬಿಗಿದು ಆತ್ಮಹತ್ಯೆ!


Death: ಅನಾರೋಗ್ಯದಿಂದ ಬಳಲುತ್ತಿದ್ದ ಮೂರು ವರ್ಷ ಪ್ರಾಯದ ತನ್ನ ಹೆಣ್ಣು ಮಗುವಿನ ಭವಿಷ್ಯದ ಚಿಂತೆಯಿಂದ ಮನನೊಂದ ಮಗುವಿನ ತಾಯಿ ತನ್ನ 6 ತಿಂಗಳ ಇನ್ನೊಂದು ಹಸುಗೂಸನ್ನು ಕೂಡ ಬಿಟ್ಟು ನೇಣಿಗೆ ಶರಣಾದ ದಾರುಣ ಘಟನೆ ಹೆಬ್ರಿ ತಾಲೂಕಿನ ವರಂಗ ಗ್ರಾಮದ ಮಾತಿಬೆಟ್ಟು ಎಂಬಲ್ಲಿ ನಡೆದಿದೆ.

ಮಾತಿಬೆಟ್ಟು ಕೊಂಡಗೆಲ್ ನಿವಾಸಿ ಆಶಾ ಪೂಜಾರಿ (34) ಎಂಬವರು ಆತ್ಮಹತ್ಯೆಗೆ ಶರಣಾದ ಮಹಿಳೆ. ಮೃತ ಆಶಾ ಅವರ ಪತಿ ವಿದೇಶದಲ್ಲಿ ಉದ್ಯೋಗದಲ್ಲಿರುವ ಹಿನ್ನೆಲೆಯಲ್ಲಿ ತನ್ನ ತಾಯಿ ಹಾಗೂ ಮಕ್ಕಳ ಜತೆ ಆಶಾ ತಾಯಿ ಮನೆಯಲ್ಲಿ ವಾಸವಿದ್ದರು.
ಇತ್ತಿಚೆಗೆ ಪತಿ ವಿದೇಶದಿಂದ ಊರಿಗೆ ಬಂದಿದ್ದರು.ಅವರು ಶುಭಕಾರ್ಯದ ನಿಮಿತ್ತ ತನ್ನ ಮನೆಗೆ ತೆರಳಿದ್ದರು. ಗುರುವಾರ ಮುಂಜಾನೆ ತಾಯಿ ಹೊರಗಡೆ ಹಾಲು ತರಲೆಂದು ಹೋಗಿದ್ದ ವೇಳೆ ಈ ಕೃತ್ಯ ಎಸಗಿದ್ದಾರೆ. ಮಗು ಜನಿಸಿದ ದಿನದಿಂದ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಗುವಿಗೆ ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಗುಣವಾಗದ ಕಾರಣದಿಂದ ಮಗುವನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದರು. ಇದರಿಂದ ಆಶಾ ಮಾನಸಿಕವಾಗಿ ನೊಂದು ಈ ಕೃತ್ಯ ಎಸಗಿದ್ದಾರೆ. ಮಗುವಿನ ಅನಾರೋಗ್ಯದ ಹಿನ್ನೆಲೆಯಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಕುರಿತು ಡೆತ್ ನೋಟ್ ಬರೆದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments are closed.